ದಿಲ್ಲಿ ದರ್ಬಾರ್‌ನಲ್ಲೂ ಹಳ್ಳಿ ಮರೆಯದ ಆಸ್ಕರ್
Team Udayavani, Sep 14, 2021, 6:00 AM IST
ಉಡುಪಿಯ ಸೈಂಟ್ ಸಿಸಿಲೀಸ್, ಬೋರ್ಡ್ ಹೈಸ್ಕೂಲ್ ಮತ್ತು ಎಂಜಿಎಂ ಕಾಲೇಜಿನಲ್ಲಿ ಅಧ್ಯಯನ ನಡೆಸಿದ್ದರು. ಬಿಎ ಎರಡನೆಯ ವರ್ಷ ಓದುವಾಗಲೇ ಎಲ್ಲೈಸಿಯಲ್ಲಿ ಉದ್ಯೋಗ ಸಿಕ್ಕಿದ ಕಾರಣ ಪದವಿಯನ್ನು ಮುಗಿಸಿರಲಿಲ್ಲ.
1941ರ ಮಾರ್ಚ್ 27ರಂದು ಜನಿಸಿದ ಆಸ್ಕರ್ 1970ರ ದಶಕದಲ್ಲಿ ಉಡುಪಿ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದ ಅವರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಾಗಿಯೂ ತಳಮಟ್ಟದಲ್ಲಿ ಕೆಲಸ ಮಾಡಿದವರು. 1980ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಗೆದ್ದ ಆಸ್ಕರ್ ಫೆರ್ನಾಂಡಿಸ್ ಅವರು ಸತತ ಐದು ಬಾರಿ (1980, 1984, 1989, 1991, 1996) ಗೆಲುವು ಸಾಧಿಸಿದ್ದೂ ದಾಖಲೆ. 1998ರ ಬಳಿಕ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು ಹಾಲಿ ಸದಸ್ಯರೂ ಆಗಿದ್ದಾರೆ. ಅವರ ರಾಜ್ಯಸಭಾ ಸದಸ್ಯತ್ವ ಮುಂದಿನ ಜೂನ್ ವರೆಗೆ ಇತ್ತು. ಒಟ್ಟಾರೆ 1980ರಲ್ಲಿ ಸಂಸತ್ ಭವನ ಪ್ರವೇಶಿಸಿದ ಆಸ್ಕರ್ ಇದುವರೆಗೂ ಮುಂದುವರಿದಿರು ವುದು ದಾಖಲೆ. ಆಸ್ಕರ್ ಅವರು ರಾಕಿ (ರಾಕ್ ಎಂದೂ ಕರೆಯುತ್ತಾರೆ)ಫೆರ್ನಾಂಡಿಸ್ ಅವರ ಪುತ್ರ. 12 ಮಕ್ಕಳಲ್ಲಿ ಆಸ್ಕರ್ ಒಬ್ಬರು. ರಾಕಿ ಅವರು ಉಡುಪಿ ಬೋರ್ಡ್ ಹೈಸ್ಕೂಲ್‌ನ್ನು ಉನ್ನತ ಮಟ್ಟಕ್ಕೇರಿಸಿದವರು.ತಂದೆಯ ರೀತಿಯಲ್ಲಿ ಸ್ವತ್ಛ ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದ ಆಸ್ಕರ್ ತಂದೆಯ ಹಾರೈಕೆಯಂತೆ ರಾಷ್ಟ್ರ ಮಟ್ಟದ ನಾಯಕರಾಗಿ ಮೂಡಿಬಂದಿದ್ದಾರೆ.
ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷತೆ ಯಿಂದ ಹಿಡಿದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯವರೆಗೆ ಆಸ್ಕರ್ ಅಲಂಕರಿಸಿದ ಪದವಿಗಳು ವಿಧವಿಧ. 1983ರಲ್ಲಿ ಅಖೀಲ ಭಾರತ ಕಾಂಗ್ರೆಸ್ ಪಕ್ಷದ ಜಂಟಿ ಕಾರ್ಯದರ್ಶಿಯಾದರು. ಕೆಪಿಸಿಸಿ ಅಧ್ಯಕ್ಷರಾಗಿ 1987 ಮತ್ತು 1992ರಲ್ಲಿ 2 ಬಾರಿ ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸಿದ್ದರು. ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಆಸ್ಕರ್, ಡಾ| ಮನಮೋಹನ ಸಿಂಗ್ ಅವರ ಪ್ರಥಮ ಅವಧಿಯ ಸಂಪುಟದಲ್ಲಿ (2004-09) ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ ಕಾರ್ಯನಿರ್ವಹಿಸಿ ದ್ದರು. ಇದೇ ಅವಧಿಯಲ್ಲಿ ಭವಿಷ್ಯನಿಧಿ ಪ್ರಾದೇಶಿಕ ಕಚೇರಿ ಉಡುಪಿಯಲ್ಲಿ ತೆರೆಯಿತು. ವಿವಿಧ ವಿಷಯಗಳ ಸಂಸದೀಯ ಸಮಿತಿ ಗಳಲ್ಲಿ ಅಧ್ಯಕ್ಷರು, ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ, ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಮೊದಲಾದ ಜನ ಸಾಮಾನ್ಯರಿಗೆ ಅನುಕೂಲ ಆಗು ವಂತಹ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಜಾರಿಗೆ ತರು ವಲ್ಲಿ ಆಸ್ಕರ್ ಕೊಡುಗೆ ಅಪಾರ ವಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಎರಡನೆಯ ಬಾರಿಗೆ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಯನ್ನು ಅಲಂಕರಿಸಿ ಕರಾ ವಳಿಯ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವ ಯೋಜನೆ ಜಾರಿಗೊಳ್ಳುವಲ್ಲಿ ಆಸಕ್ತಿ ತೋರಿ ದರು. ತೆರೆಮರೆಯಲ್ಲಿ ನಿಂತು ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಕಾರಣರಾದವರು ಇವರು. ಬೆಂಗಳೂರಿನ ಪ್ರತಿಷ್ಠಿತ ಭಾರ ತೀಯ ವಿಜ್ಞಾನ ಮಂದಿರದ ಆಡಳಿತ ಮಂಡಳಿಗೆ ಎರಡು ಬಾರಿ ಸದಸ್ಯರಾಗಿದ್ದರು.
ಮನೆಯೇ ಕಾಂಗ್ರೆಸ್ ಕಚೇರಿ :
ಉಡುಪಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗುವ ಮುನ್ನ ಒಂದು ದಶಕ ಕಾಲ (1997ರಿಂದ 2008ರ ವರೆಗೆ) ಬ್ರಹ್ಮಗಿರಿಯಲ್ಲಿ ರುವ ತನ್ನ ಮನೆಯನ್ನೇ ಕಾಂಗ್ರೆಸ್ ಪಕ್ಷದ ಕಚೇರಿ ಯಾಗಿ ಮಾರ್ಪಡಿಸಿದ್ದರು. ಈ ಮನೆ ಹಲವು ಚುನಾವಣೆಗಳನ್ನು ನಿರ್ವಹಿಸಿತ್ತು ಮತ್ತು ಹಲವು ಚುನಾವಣೆಗಳಲ್ಲಿ ಗೆಲುವನ್ನೂ ತಂದಿತ್ತು.
ತಂದೆಯ ವರ್ಚಸ್ಸು :
ಆಸ್ಕರ್ ಅವರು ತಂದೆ ರಾಕಿ ಫೆರ್ನಾಂಡಿಸ್ ಅವರ ಮಾದರಿಯಲ್ಲಿ ಉಡುಪಿಯ ಶ್ರೀಕೃಷ್ಣಮಠ, ಅಷ್ಟಮಠಗಳು, ದೇವಸ್ಥಾನಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಬೋರ್ಡ್ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದ ರಮೇಶ ಎಂಬ ವಟುವನ್ನು ಅದಮಾರು ಮಠಕ್ಕೆ ನಿಯೋಜಿಸುವಾಗ ಹಿರಿಯ ಗುರುಗಳು ರಾಕಿ ಫೆರ್ನಾಂಡಿಸ್‌ರ ಅಭಿಪ್ರಾಯವನ್ನು ಕೇಳಿದ್ದರು. ರಮೇಶರಿಗೆ ಇಂಗ್ಲಿಷ್ ಪಾಠ ಮಾಡಿದವರು ರಾಕಿಯವರು. ರಮೇಶರೇ ಮುಂದೆ ಶ್ರೀವಿಬುಧೇಶತೀರ್ಥ ಶ್ರೀಪಾದರೆನಿಸಿದಾಗ ಬೋರ್ಡ್ ಹೈಸ್ಕೂಲ್‌ಗೆ ಕರೆಸಿ ಗೌರವಿಸಿದ್ದರು. ಶ್ರೀವಿಬುಧೇಶತೀರ್ಥರೇ ಹಲವು ಶಿಕ್ಷಣ ಸಂಸ್ಥೆಗಳ ಹುಟ್ಟಿಗೆ ಕಾರಣರಾದರು. ರಾಕಿ ಫೆರ್ನಾಂಡಿಸ್ ಅವರು ಅಂಬಲಪಾಡಿ ಬಲ್ಲಾಳರ ಮನೆಗೆ ಹೋಗಿ ಹೊರಡುವಾಗ ಬೆನ್ನು ಹಾಕದೆ ಹಿಂದೆ ಹಿಂದೆ ಬರುತ್ತಿದ್ದರು. ಇದನ್ನು “ಬಲ್ಲಾಳರ ಮನೆಗೆ ತೋರುತ್ತಿದ್ದ ಗೌರವ’ ಎಂದು ಅವರು ಹೇಳುತ್ತಿದ್ದರು. ಆಸ್ಕರ್ ಅವರೂ ಹಿಂದೆ ತಮಗೆ ಅನುಕೂಲವಿಲ್ಲದಾಗ ಮಠಗಳು ನೀಡಿದ ಸಹಕಾರವನ್ನು ಸ್ಮರಿಸಿಕೊಳ್ಳುತ್ತಿದ್ದರು. ಟಿ.ಎ.ಪೈ, ಎಂ.ವಿ.ಕಾಮತ್, ಕೆ.ಕೆ.ಪೈ, ಡಾ| ರಾಮದಾಸ ಪೈ, ವ್ಯಾಸರಾಯ ಬಲ್ಲಾಳ್, ಅಣ್ಣಾಜಿ ಬಲ್ಲಾಳ್, ನ್ಯಾ| ಜಗನ್ನಾಥ ಶೆಟ್ಟಿ, ಪಾ.ವೆಂ.ಆಚಾರ್ಯ ಮೊದಲಾದ ಗಣ್ಯರು ರಾಕಿಯವರ ಶಿಷ್ಯರಾಗಿದ್ದರು.
ಐತಿಹಾಸಿಕ ಪ್ರಜ್ಞೆಯ ಆಸ್ಕರ್ :
ಸ್ವಾತಂತ್ರ್ಯ ಹೋರಾಟಗಾರರೊಬ್ಬರು ನಿಧನ ಹೊಂದಿದಾಗ ಅವರ ಮನೆಗೆ ಆಸ್ಕರ್ ಭೇಟಿ ಕೊಟ್ಟಿದ್ದರು. ವಾಪಸು ಬರು ವಾಗ ಕೂಡಲೇ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದ ಲೇಖಕ ಡಾ| ಶ್ರೀಕಾಂತ ಸಿದ್ದಾಪುರ ಅವರಿಗೆ ದೂರವಾಣಿ ಕರೆ ಮಾಡಿ “ನಮಗೆ ಗೊತ್ತೇ ಇಲ್ಲದ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಕರಾವಳಿ ಜಿಲ್ಲೆ ಗಳಲ್ಲಿದ್ದಾರೆ. ಇವರ ಮಾಹಿತಿಗಳನ್ನು ಕಲೆ ಹಾಕಿ ಪುಸ್ತಕವನ್ನು ಬರೆಯಬೇಕು. ಇದರಲ್ಲಿ ದ.ಕ., ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ವಿವರ ಗಳಿರಬೇಕು’ ಎಂದರು. ಡಾ| ಸಿದ್ದಾಪುರರು ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ವಿವರ ಗಳನ್ನು ಒಳಗೊಂಡ ಪುಸ್ತಕ ವನ್ನು ಹೊರ ತಂದರು. ಉಡುಪಿ ಆದರ್ಶ ಆಸ್ಪತ್ರೆಯ ಒಂದು ಕಾರ್ಯ ಕ್ರಮಕ್ಕೆ ಬಂದ ಆಸ್ಕರ್ ಅವರಿಗೆ ಪುಸ್ತಕ ಕೊಡಲು ಹೋದಾಗ “ನನ್ನ ಡ್ರೀಮ್‌ನ್ನು ಫುಲ್‌ಫಿಲ್ ಮಾಡಿದರು’ ಎಂದು ಡಾ| ಜಿ.ಎಸ್. ಚಂದ್ರಶೇಖರ್ ಅವರಿಗೆ ತಿಳಿಸಿ ಡಾ| ಸಿದ್ದಾಪುರರ ಬೆನ್ನುತಟ್ಟಿದ್ದರು.
ಆಸ್ಕರ್ ಫೆರ್ನಾಂಡಿಸರ ತಂದೆ ರಾಕಿ ಫೆರ್ನಾಂಡಿಸರಷ್ಟೇ ತಾಯಿ ಲಿಯೋನಿಸಾ ಫೆರ್ನಾಂಡಿಸರೂ ಪ್ರಸಿದ್ಧರು. ಅವರು ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಬೆಂಚ್ ಮ್ಯಾಜಿಸ್ಟ್ರೇಟರಾಗಿದ್ದರು.
ಭಾರತೀಯ ಸಂಸ್ಕೃತಿ, ನಾಗರಿಕತೆ ಮತ್ತು ಜೀವನ ವಿಧಾನವನ್ನು ವಿದೇಶೀ (ಬ್ರಿಟಿಷ್) ಪತ್ರಕರ್ತೆ ಕ್ಯಾತರಿನ್ ಮಾಯೋ ಕೀಳಾಗಿ ಚಿತ್ರಿಸಿ ಪುಸ್ತಕವನ್ನು ಬರೆದಿದ್ದರು. ಭಾರತದ ಸ್ವಾತಂತ್ರ್ಯಕ್ಕೆ ವಿರೋಧಿಯಾದವರು ಈ ಪುಸ್ತಕ ಪ್ರಕಟನೆಗೆ ಹಣಕಾಸು ನೆರವು ಒದಗಿಸಿದ್ದರು. ಇದನ್ನು ಗಾಂಧೀಜಿಯವರು “ಚರಂಡಿ ಪರೀಕ್ಷಕರ ವರದಿ’ ಎಂದು ಖಂಡಿ ಸಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರಿಗೆ ಈ ಪುಸ್ತಕ ಸಿಕ್ಕಿತು. ಲಜಪತ್ ರಾಯ್ ಅವರು ಮಾಯೋ ಪುಸ್ತಕಕ್ಕೆ ಉತ್ತರ ರೂಪವಾಗಿ 1927ರಲ್ಲಿ “ಅನ್‌ಹ್ಯಾಪಿ ಇಂಡಿಯಾ’ ಪುಸ್ತಕ ಬರೆದರು. ಆ ಕಾಲದಲ್ಲಿ ಪುಸ್ತಕದ ಜನಪ್ರಿಯತೆಯನ್ನು ಸಹಿಸದ ಬ್ರಿಟಿಷರು ಈ ಪುಸ್ತಕಕ್ಕೆ ನಿಷೇಧ ಹೇರಿದ್ದರು. ಈ ಪುಸ್ತಕದಲ್ಲಿ ಆಯ್ದ ಭಾರತೀಯರ ಸಾಧನೆಗಳ ವಿವರಗಳಿದ್ದವು. ಲಜಪತ್ ರಾಯ್ ಅವರ ಆಯ್ಕೆಯಲ್ಲಿ ಲಿಯೋನಿಸಾ ಫೆರ್ನಾಂಡಿಸರ ವಿಷಯವೂ ಇದೆ. ಆಸ್ಕರ್‌ರ ಅಣ್ಣ ಆಸ್ಟ್ರೇಲಿಯಾದಲ್ಲಿದ್ದ ಕ್ಲಿಫರ್ಡ್ ಫೆರ್ನಾಂಡಿಸ್ ಪುಸ್ತಕದಲ್ಲಿದ್ದ ತಾಯಿಯ ಸಾಧನೆಯ ಹಾಳೆಯನ್ನು ಪ್ರತಿ ಮಾಡಿ ಡಾ| ಸಿದ್ದಾಪುರ ಅವರಿಗೆ ಕಳು ಹಿಸಿದ್ದರು. ಅನಂತರ ಆಸ್ಕರ್ ಅವರು ದಿಲ್ಲಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಹಳೆ ಪುಸ್ತಕ ಮಾರಾಟಗಾರರಲ್ಲಿ “ಅನ್‌ಹ್ಯಾಪಿ ಇಂಡಿಯಾ’ ಪುಸ್ತಕ ಸಿಕ್ಕಿತು. ಅದನ್ನು ಖರೀದಿಸಿ ಕೂಡಲೇ ಡಾ| ಸಿದ್ದಾಪುರರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. 1937ರಲ್ಲಿ ಪ್ರಕಟವಾದ “ಹೂಸ್ ಹೂ’ ಪುಸ್ತಕದಲ್ಲಿಯೂ ಲಿಯೋನಿಸಾ ಅವರ ಪರಿಚಯ ಪ್ರಕಟವಾಗಿತ್ತು.
ರಾಕಿ ಫೆರ್ನಾಂಡಿಸರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರೂ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಧ್ವನಿ ಎತ್ತಿದವರು. ರಾಕಿ ಅವರ ಕುರಿತು ಡಾ|ಸಿದ್ದಾಪುರರು ಬರೆದ ಪುಸ್ತಕದ ಬಿಡುಗಡೆ ಸಮಾರಂಭ ಉದ್ಯಾವರದ ಹಾಲಿಮಾ ಸಾಬುj ಸಭಾಂಗಣದಲ್ಲಿ 2004ರಲ್ಲಿ ನಡೆದಾಗ ತನ್ನ ತಂದೆ ಶಿಕ್ಷಕರಾದ ಕಾರಣ ಅತ್ಯುತ್ತಮ ಫಲಿತಾಂಶ ಬಂದ ಶಾಲೆಗೆ ಸಂಸದರ ನಿಧಿಯಿಂದ ಅನುದಾನ ಕೊಡುವುದಾಗಿ ತಿಳಿಸಿ, ಅದನ್ನು ಪಾಲಿಸಿದ್ದರು ಕೂಡ.
ದಾಖಲೆಯ ಕಬ್ಬು ಅರೆದ ಅಧ್ಯಕ್ಷರು :
1990ರ ದಶಕದಲ್ಲಿ ಲೋಕಸಭಾ ಸದಸ್ಯರಾಗಿದ್ದಾಗ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಅದರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದವರು. 1992ರಿಂದ 97ರ ವರೆಗಿನ ಆ ಸಮಯದಲ್ಲಿ ಕಾರ್ಖಾನೆಯ ವಸತಿಗೃಹದಲ್ಲಿಯೇ ಮೊಕ್ಕಾಂ ಹೂಡಿ ಕಾರ್ಖಾನೆಯ ಅಭಿವೃದ್ಧಿಯನ್ನು ಸಾಧಿಸಿದರು. ಆಗ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕೋಲಾರದಿಂದ ತಂದ ದೊಡ್ಡ ಜಾತಿಯ ದನಗಳನ್ನು ಕಟ್ಟಿ ಹೈನುಗಾರಿಕೆಯನ್ನೂ ನಡೆಸಿದ್ದು ಈಗ ಇತಿಹಾಸ. 1995-96ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಯ ಇತಿಹಾಸದಲ್ಲಿ ದಾಖಲೆಯ ಕಬ್ಬು ಅರೆಯಲಾಯಿತು. ಆಗ 1.43 ಲಕ್ಷ ಟನ್ ಕಬ್ಬು ಅರೆದು ಒಂದು ಲಕ್ಷಕ್ಕೂ ಹೆಚ್ಚು ಸಕ್ಕರೆ ಬ್ಯಾಗ್ (100 ಕೆ.ಜಿ. ಬ್ಯಾಗ್) ಉತ್ಪಾದಿಸಲಾಯಿತು. ಈ ಸಂಭ್ರಮಾಚರಣೆ ಅಂಗವಾಗಿ ಕೃಷಿಕರನ್ನು ಕರೆದು ತಲಾ 10 ಕೆ.ಜಿ. ಸಕ್ಕರೆಯನ್ನು ವಿತರಿಸಲಾಗಿತ್ತು. ಇದರ ಹಿಂದಿದ್ದ ಚಾಲನ ಶಕ್ತಿ ಆಸ್ಕರ್ ಆಗಿದ್ದರು ಎಂಬುದನ್ನು ಆಗ ಆಡಳಿತ ನಿರ್ದೇಶಕರಾಗಿದ್ದ (ಮುಂದೆ ಅಧ್ಯಕ್ಷರಾದ) ಮೊಳಹಳ್ಳಿ ಜಯಶೀಲ ಶೆಟ್ಟಿಯವರು ಸ್ಮರಿಸುತ್ತಾರೆ.
ಕಾರ್ಖಾನೆಯಿಂದ ಅಡುಗೆಯವರನ್ನು ಕೊಟ್ಟಿದ್ದರೂ ಅವರೇ ಸರಳವಾಗಿ ಅಡುಗೆ ತಯಾರಿಸುತ್ತಿದ್ದರು. ಆರೋಗ್ಯದ ದೃಷ್ಟಿ ಯಿಂದ ಅವರು ಸಸ್ಯಾಹಾರಿಯಾಗಿ ದ್ದರು. ಆಗ ಸಾಕಿದ ದನಗಳು ಎಷ್ಟು ದೊಡ್ಡ ದೆಂದರೆ ಒಂದು ಲಾರಿಯಲ್ಲಿ ಎರಡೇ ದನಗಳು ಹಿಡಿ ಯುತ್ತಿ ದ್ದವು.
ಸಕ್ಕರೆ ಕಾರ್ಖಾನೆಯಲ್ಲಿ ದನಗಳಿಗೇನು ಕೆಲಸ ಎಂದು ಪ್ರಶ್ನಿಸಿದರೆ ಕೃಷಿ ಸಂಬಂಧಿತ ಎಲ್ಲ ಚಟುವಟಿಕೆಗಳಿಗೂ ಅವಕಾಶ ಸಿಗಬೇಕೆಂಬುದಾಗಿತ್ತು. ಸಕ್ಕರೆ ಕಾರ್ಖಾನೆ ಬೈಲಾದಲ್ಲಿ ಶಿಕ್ಷಣ, ಆರೋಗ್ಯ ಸಂಬಂಧಿತ ಚಟುವಟಿಕೆ ಗಳನ್ನೂ ನಡೆಸಬಹುದು ಎಂದಿದೆ ಎಂಬುದನ್ನು ಜಯಶೀಲ ಶೆಟ್ಟಿ ಬೆಟ್ಟು ಮಾಡುತ್ತಾರೆ. ಆಸ್ಕರ್ ಅವರ ಮುಂಚೆ ಟಿ.ಶಂಭು ಶೆಟ್ಟಿ ಅಧ್ಯಕ್ಷರಾಗಿದ್ದರೆ ಅನಂತರ ಜಯಪ್ರಕಾಶ ಹೆಗ್ಡೆ ಅಧ್ಯಕ್ಷರಾದರು.
ಕೃಷಿಕರಾಗಿ ಆಸ್ಕರ್ :
ಆಸ್ಕರ್ ಫೆರ್ನಾಂಡಿಸರು ನಮ್ಮ ಕಣ್ಣಿಗೆ ಕಾಣುವುದು ರಾಜಕಾರಣಿಯಾಗಿ. ಮೂಲತಃ ಅವರೊಬ್ಬ ಉತ್ತಮ ಕೃಷಿಕ. ಅಂಬಲಪಾಡಿ ಕಪ್ಪೆಟ್ಟುವಿನಲ್ಲಿ ಸುಧಾಕರ ರಾವ್ ಅವರ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಸ್ವತಃ ಗದ್ದೆ ಉಳುಮೆ ಮಾಡುತ್ತಿದ್ದರು. ಹಗಲಿನಲ್ಲಿ ಉಳುಮೆ ಮಾಡಿದರೆ ಎತ್ತುಗಳಿಗೆ ಆಯಾಸವಾಗುತ್ತದೆಂದು ರಾತ್ರಿ ವೇಳೆ ಉಳುಮೆ ಮಾಡುತ್ತಿದ್ದರು. ಕೃಷಿ ಕ್ಷೇತ್ರದ ಸಾಧನೆಗಾಗಿ ಹಲವು ಪ್ರಶಸ್ತಿಗಳು ಬಂದಿದ್ದವು. ಇವುಗಳಲ್ಲಿ ಮುಖ್ಯವಾದುದು ಭತ್ತದಲ್ಲಿ ಅಧಿಕ ಇಳುವರಿಗಾಗಿ ಸಿಂಡಿಕೇಟ್ ಬ್ಯಾಂಕ್‌ನ ಪ್ರತಿಷ್ಠಿತ ಕೃಷಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಕೃಷಿ ಪುರಸ್ಕಾರ.
ಟೆಂಪೋ ಚಾಲಕ- ಮಾಲಕರಾಗಿದ್ದ ಆಸ್ಕರ್ :
ಈಗಿನ ಆಸ್ಕರರನ್ನು ಕಂಡ ಅನೇಕರಿಗೆ ಆಸ್ಕರ್ ಟೆಂಪೋ ಚಾಲಕ- ಮಾಲಕರಾಗಿದ್ದರು ಎಂಬುದನ್ನು ನಂಬುವುದು ಕಷ್ಟ. ಆದರೆ ಇದು ಸತ್ಯ.
1961ರ ವೇಳೆ ಪದವಿ ಓದುವಾಗಲೇ ಎಲ್ಲೈಸಿ ಉಡುಪಿ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಅದೇ ವೇಳೆ ಕಪ್ಪೆಟ್ಟುವಿನಲ್ಲಿ ಕೃಷಿ ಕಾರ್ಯವನ್ನೂ ಮಾಡುತ್ತಿದ್ದರು. 1972ರಲ್ಲಿ ಎಲ್ಲೆ„ಸಿ ಕೆಲಸಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಪುರಸಭಾ ಚುನಾವಣೆಯಲ್ಲಿ (ಅಜ್ಜರಕಾಡು ವಾರ್ಡ್) ಸ್ಪರ್ಧಿಸಿ ಗೆದ್ದರು. ಅದೇ ವೇಳೆ ಯುವಕರನ್ನು ಸೇರಿಕೊಂಡು ಜಾಲಿ ಕ್ಲಬ್ ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಅಜ್ಜರಕಾಡಿನಲ್ಲಿ ನೀರಿನ ಸಮಸ್ಯೆ ಯಾದಾಗ ಕಲ್ಮಂಜೆ ಡಾಕ್ಟರರ ಮನೆಯಿಂದ ನೀರನ್ನು ತುಂಬಿಸಿ ಕೊಂಡು ಮನೆ ಮನೆಗೆ ವಿತರಿಸುತ್ತಿದ್ದರು.
ಮಣಿಪಾಲದ ಪೈ ಬಂಧುಗಳು ಪ್ಯಾಲೇಸ್ ಪ್ಲಾಸ್ಟಿಕ್ ಎಂಬ ಸಂಸ್ಥೆ ನಡೆಸುತ್ತಿದ್ದರು. ಇದಕ್ಕೆ ಸೇರಿದ ಆಸ್ಕರ್ ಸೋಪ್ ಬಾಕ್ಸ್, ಬಕೆಟ್ ಇತ್ಯಾದಿಗಳನ್ನು ಪಡೆದು ಉಡುಪಿಯ ಮಿತ್ರಾ ಬಿಲ್ಡಿಂಗ್‌ನಲ್ಲಿ ಸುಧಾ ಟ್ರೇಡಿಂಗ್ ಕಾರ್ಪೊರೇಶನ್ ಹೆಸರಿನಲ್ಲಿ ಅಂಗಡಿ ನಡೆಸಿದರು. ಆಗ ಸಾಮಾನುಗಳನ್ನು ಸಾಗಿಸಲು ಗೂಡ್ಸ್ ವ್ಯಾನ್ ಖರೀದಿ ಸಿದರು. ಇದು ಉಡುಪಿಯ ಮೊದಲ ಗೂಡ್ಸ್ ವ್ಯಾನ್ ಎಂಬುದನ್ನು ಅಂಗಡಿಯಲ್ಲಿ ಕೆಲವು ವರ್ಷ ಕೆಲಸಕ್ಕಿದ್ದ ಈವರೆಗೂ ಆತ್ಮೀಯರಾಗಿರುವ ಕಾಂಗ್ರೆಸ್ ಕಾರ್ಯಕರ್ತ ಬಿ.ನರಸಿಂಹಮೂರ್ತಿ ನೆನಪಿಸಿಕೊಳ್ಳುತ್ತಾರೆ.
ಕೆಲವು ವರ್ಷ ವೆಲ್ಡಿಂಗ್ ಕೆಲಸ ನಿರ್ವಹಿಸುವ ಮಣಿಪಾಲದ ವರ್ಕ್ ಶಾಪ್‌ನಲ್ಲಿ ಉದ್ಯೋಗದಲ್ಲಿದ್ದರು. ಮಣಿಪಾಲದಲ್ಲಿದ್ದ ಕೆನರಾ ಮಿಲ್ಕ್ನಲ್ಲಿ (ಈಗಿನ ಹಾಲು ಒಕ್ಕೂಟ) ಸಂಗ್ರಹವಾಗುವ ಹಾಲಿನ ಬಾಟಲಿಗಳನ್ನು ಅಂಗಡಿಗಳಿಗೆ ಕೊಂಡೊಯ್ಯುವುದು, ಹಾಲು ಉತ್ಪಾದಕರಿಂದ ಹಾಲನ್ನು ತರುವುದನ್ನು ತಮ್ಮ ವ್ಯಾನ್‌ನಲ್ಲಿ ಮಾಡುತ್ತಿದ್ದರು ಆಸ್ಕರ್. ಇವೆಲ್ಲ ಚಟುವಟಿಕೆಗಳು 1972ರ ಬಳಿಕ 5-6 ವರ್ಷ ನಡೆದಿತ್ತು. ಮಣಿಪಾಲದ ಪೈ ಬಂಧುಗಳ ಜತೆ ಈ ಮೂಲಕ ನಿಕಟ ಸಂಪರ್ಕ ಹೊಂದಿದ್ದರು.
ಕೋಳಿ ಸಾಕಿ ಮೊಟ್ಟೆ ಮಾರಿದ್ದ ಆಸ್ಕರ್ :
ಎಲ್ಲೈಸಿ ಉದ್ಯೋಗದಲ್ಲಿದ್ದಾಗ ಆಸ್ಕರ್ ಫೆರ್ನಾಂಡಿಸ್ ಅವರು ಮನೆಯಲ್ಲಿ ಸಾಕಿದ ಕೋಳಿಗಳಿಂದ ಸಿಕ್ಕಿದ ಮೊಟ್ಟೆಯನ್ನು ಕಚೇರಿಗೆ ಒಯ್ದು ಮಾರುತ್ತಿದ್ದರು. ಬೇರೆ ಕಡೆ ಒಂದು ಮೊಟ್ಟೆಗೆ ಎರಡು ಆಣೆ ಇದ್ದರೆ ಆಸ್ಕರ್ ಒಂದಾಣೆಗೆ ಮಾರುತ್ತಿದ್ದರು.
ಇಂದಿರಾ ಕುಟುಂಬದ ನಿಷ್ಠ :
ಇಂದಿರಾಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಪ್ರಚಾರ ನಡೆಸಿದ ಆಸ್ಕರ್ ಅವರು ಅಂದಿನಿಂದ ರಾಜೀವ್ ಗಾಂಧಿ, ಈಗ ಸೋನಿಯಾ- ರಾಹುಲ್ ಗಾಂಧಿಯವರೆಗೆ ಇಂದಿರಾ ಕುಟುಂಬಕ್ಕೆ ನಿಷ್ಠರಾಗಿದ್ದರು.
ಸೋನಿಯಾ, ರಾಜೀವ್, ರಾಹುಲ್ ಅವರೂ ಅದೇ ರೀತಿ ಆಸ್ಕರರನ್ನು ಹಚ್ಚಿಕೊಂಡಿದ್ದರು. ಕಾಂಗ್ರೆಸ್‌ನ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಆಸ್ಕರರ ಸಲಹೆಯನ್ನು ಪಡೆಯಲಾಗುತ್ತಿತ್ತು.
ಯಕ್ಷಗಾನದಲ್ಲೂ ಅಭಿನಯನ :
ದೆಹಲಿ ಕರ್ನಾಟಕ ಸಂಘದ ನೂತನ ಕಟ್ಟಡ ಉದ್ಘಾಟನ ಸಮಾರಂಭದ ವೇಳೆ ಪ್ರದರ್ಶಿಸಿದ ಯಕ್ಷಗಾನದಲ್ಲಿ ಆಗ ಕೇಂದ್ರ ಸಚಿವರಾಗಿದ್ದ ಆಸ್ಕರ್‌ಫೆರ್ನಾಂಡಿಸ್ ಮತ್ತು ಎಂ.ವೀರಪ್ಪ ಮೊಲಿ ಅವರು ವೇಷ ಧರಿಸಿ ಅಭಿನಯಿಸಿದ್ದರು.
ಯೋಗಪಟು, ಮೌತ್‌ಆರ್ಗನ್, ನೃತ್ಯ ಕಲಾವಿದ… :
ದಿಲ್ಲಿ ಕಚೇರಿಯಲ್ಲಿ ತಡರಾತ್ರಿವರೆಗೆ ಕಾರ್ಯನಿರ್ವಹಿಸುವ ಅಪರೂಪದ ಜನನಾಯಕ ಆಸ್ಕರ್ ಆಗಿದ್ದರು. ಎಷ್ಟೇ ಹೊಣೆಗಾರಿಕೆ ಇರಲಿ ಆಸ್ಕರ್ ನಿತ್ಯ ಯೋಗಾಭ್ಯಾಸವನ್ನು ಬಿಟ್ಟಿರಲಿಲ್ಲ. ಇವರೊಬ್ಬ ಉತ್ತಮ ಯೋಗಪಟುವಾಗಿದ್ದರು. ಪಕ್ಷದ ಜವಾಬ್ದಾರಿ ನಿರ್ವಹಣೆ ಸಂದರ್ಭ ಯಾವುದೆà ದೊಡ್ಡ ಸಂಕಷ್ಟ ಎದುರಾದರೂ ಸಮಚಿತ್ತತೆಯನ್ನು ಬಿಟ್ಟು ಕೊಡುತ್ತಿರಲ್ಲಿಲ್ಲ. ಇವರು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿಯೂ ಒಮ್ಮೆ ಯೋಗಾಸನ ಪ್ರದರ್ಶನ ನೀಡಿದ್ದರು. ಸದಾ ಹಸನ್ಮುಖ, ಮಾನಸಿಕ ಸಮಚಿತ್ತತೆಗೆ ಇವರ ನಿತ್ಯ ಯೋಗಾಭ್ಯಾಸ, ಪ್ರಾಣಾಯಾಮ ಅಭ್ಯಾಸವೇ ಕಾರಣವಿರಬಹುದು ಎಂಬ ಅಭಿಪ್ರಾಯವಿದೆ. ಆಸ್ಕರ್ ಕೋಪಗೊಂಡ ಕ್ಷಣವನ್ನು ಯಾರೂ ಕಂಡಿಲ್ಲ ಎನ್ನಬಹುದು. ನಿತ್ಯ ಯೋಗಾಸನದಿಂದ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬಹುದು ಎನ್ನುವ ಆಸ್ಕರ್, ಅದನ್ನು ಸಾಧಿಸಿ ತೋರಿಸಿ ದವರು. ನಾಟಿ ಪದ್ಧತಿ ವೈದ್ಯರೊಂದಿಗೆ ಸಂವಾದ ನಡೆಸಿ ಅವರ ಅನುಭವಗಳನ್ನು ಅರಿತು ಅಳವಡಿಸಿಕೊಳ್ಳುತ್ತಿದ್ದರು.
ಉತ್ತಮ ಮೌತ್ ಆರ್ಗನ್ ಕಲಾವಿದರೂ ಹೌದು, ಉತ್ತಮ ಈಜುಗಾರರೂ ಆಗಿದ್ದರು. ರಾಜಾಂಗಣದಲ್ಲಿ ಒಮ್ಮೆ ಮೌತ್ ಆರ್ಗನ್ ನುಡಿಸಿ ಸಭಾಸದರಲ್ಲಿ ಅಚ್ಚರಿ ಮೂಡಿಸಿದ್ದರು. ನೃತ್ಯದಲ್ಲಿಯೂ ಇವರಿಗೆ ವಿಶೇಷ ಆಸ್ಥೆ ಇತ್ತು. ಸ್ವತಃ ನೃತ್ಯಾಭ್ಯಾಸಿ. ಭರತನಾಟ್ಯ, ಕೂಚಿಪುಡಿ ಕಲೆಯನ್ನು ಕಲಿತಿದ್ದರು. ಯಕ್ಷಗಾನ ಪ್ರೇಮಿಯೂ ಆದ ಆಸ್ಕರ್ ಅವರು ಬಿಡುವಿನ ವೇಳೆ ಯಕ್ಷಗಾನ ನೋಡುತ್ತಿದ್ದರು. ಒಂದೆರಡು ಬಾರಿ ಯಕ್ಷಗಾನದಲ್ಲಿ ಪಾತ್ರವನ್ನೂ ನಿರ್ವಹಿಸಿದ್ದರು.
ಇವರು ಒಮ್ಮೆ ಸಂಸತ್ತಿನಲ್ಲಿ ಯೋಗ ಮತ್ತು ಗೋಮೂತ್ರದ ಆರೋಗ್ಯ ಲಾಭದ ಕುರಿತು ಮಾತನಾಡಿದ್ದರು. ತನಗೆ ವಜ್ರಾಸನದಿಂದ ಬಹಳ ಅನುಕೂಲವಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರಿಗೆ ಕಾಲುಗಂಟಿನ ಶಸ್ತ್ರಚಿಕಿತ್ಸೆ ಯಾದಾಗ ಮುಂಚೆಯೇ ಗೊತ್ತಿದ್ದರೆ ವಜ್ರಾಸನದ ಸಲಹೆ ನೀಡುತ್ತಿದ್ದೆ ಎಂದು ಸದನದಲ್ಲಿ ಹೇಳಿದ್ದರು. ಗೋಮೂತ್ರ ಸೇವನೆಯಿಂದ ಕ್ಯಾನ್ಸರ್ ಸಹಿತ ಇತರ ಕಾಯಿಲೆಗಳು ಗುಣಮುಖವಾಗುತ್ತವೆ ಎಂದೂ ತಿಳಿಸಿದ್ದರು. ಹೋಮಿಯೋಪತಿ ಮತ್ತು ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಆರಂಭಿಸುವ ಕುರಿತ ಎರಡು ಮಸೂದೆಗಳ ಸಂದರ್ಭ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ಭಾರತೀಯ ವೈದ್ಯ ಪದ್ಧತಿಯ ಮೇಲುಗಾರಿಕೆಯನ್ನು ಪ್ರತಿಪಾದಿಸಿದ್ದರು. ಯೋಗ ಪದ್ಧತಿ ಭಾರತದ ಸಂಪತ್ತಾಗಿದೆ ಎಂದು ಪ್ರತಿಪಾದಿಸಿದ್ದರು.
ಪ್ರಶಸ್ತಿಗಳು : ಆಸ್ಕರ್ ಫೆರ್ನಾಂಡಿಸ್ ಅವರ ನಿರಂತರ ಸೇವೆಗಾಗಿ “ನೆಲ್ಸನ್ ಮಂಡೇಲ’ ಪ್ರಶಸ್ತಿ, ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್ ಗೌರವ ಹಾಗೂ ವಿವಿಧ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.