ಪಂಚಭೂತಗಳಲ್ಲಿ ಪಾಪು ಲೀನ
Team Udayavani, Mar 18, 2020, 3:06 AM IST
ರಾಣಿಬೆನ್ನೂರು: ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಸ್ವಗ್ರಾಮ ಹಲಗೇರಿಯಲ್ಲಿ ಮಂಗಳವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಪಾಪು ಅವರಿಗೆ ಬಲುಪ್ರಿಯವಾದ ಗ್ರಾಮದಲ್ಲಿರುವ ಅವರ ತೋಟದಲ್ಲಿ ಲಿಂಗಾಯತ ವಿ ಧಿವಿಧಾನದ ಪ್ರಕಾರ ಬಸವಣ್ಣನವರ ವಚನ ಪಠಣ ಮಾಡುವುದರ ಮೂಲಕ ಅಂತಿಮ ಕ್ರಿಯಾವಿಧಿ ನೆರವೇರಿಸಲಾಯಿತು. ಪಾಪು ಅವರ ಮಗ ಅಶೋಕ ಪಾಟೀಲ ಪೂಜಾ ಕೈಂಕರ್ಯ ನೆರವೇರಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಇದಕ್ಕೂ ಮೊದಲು, ಗ್ರಾಮದ ದೊಡ್ಡ ಜೆಟ್ಟಪ್ಪನವರ ಸಭಾಭವನದಲ್ಲಿ ಅವರ ಪಾರ್ಥಿವ ಶರೀರವಿಟ್ಟು, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬಳಿಕ, ಗ್ರಾಮದಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಸಚಿವರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ಮಾಜಿ ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಹಲವು ಗಣ್ಯರು ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕೊರೊನಾ ಭೀತಿ: ಪಾಪು ಅಂತ್ಯಕ್ರಿಯೆ ಸನ್ನಿವೇಶಕ್ಕೂ ಜನರಲ್ಲಿ ಕೊರೊನಾ ಭೀತಿ ತಟ್ಟಿತು. ಅನೇಕರು ಮಾಸ್ಕ್ ಧರಿಸಿಕೊಂಡೇ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ದ್ದರು. ತಾಲೂಕಾಡಳಿತ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಜನರ ಆರೋಗ್ಯ ತಪಾಸಣೆ ನಡೆಸಿತು.
ಸೈಯದ್‌ಗೆ ಸನ್ಮಾನ: ಸದಾ ಪಾಪು ಅವರ ಜತೆಗಿದ್ದು ಅವರ ಸೇವೆ ಮಾಡುತ್ತಿದ್ದ ಸೈಯದ್ ಅವರ ಸೇವೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದ ನಿಜಗುಣಾನಂದ ಸ್ವಾಮೀಜಿ, ಸೈಯದ್ ಅವರನ್ನು ಕರೆದು ಮಾಲೆ ಹಾಕಿ ಸನ್ಮಾನಿಸಿದ್ದು ಗಮನ ಸೆಳೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.