ಪರೇಶ್ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ
Team Udayavani, Dec 13, 2017, 9:52 AM IST
ಬೆಂಗಳೂರು: ಹೊನ್ನಾವರದಲ್ಲಿ ಹತ್ಯೆಗೊಳಗಾದ ಪರೇಶ್ ಮೇಸ್ತ ಸೇರಿ ರಾಜ್ಯದಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಸಂಸದರು, ಶಾಸಕರು, ಪಾಲಿಕೆ ಸದಸ್ಯರು ಮಂಗಳವಾರ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ, ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆ ಕುರಿತು ಎನ್‌ಐಎ ತನಿಖೆ ನಡೆಸಬೇಕು ಮತ್ತು ಈ ಹತ್ಯೆಗೆ ಕಾರಣವಾಗಿರುವ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಸಲ್ಲಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಬಳಿ ಸೇರಿದ ಶಾಸಕರು, ಪಾಲಿಕೆ ಸದಸ್ಯರು ಸೇರಿ ನೂರಾರು ಮಂದಿ ರಾಜಭವನದವರೆಗೆ ಮೆರವಣಿಗೆ ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪರೇಶ್ ಮೇಸ್ತನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಆದರೂ, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿಂದೆಯೂ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು, ಇದಕ್ಕೆ ಕಾರಣರಾದವರಿಗೆ ಸರ್ಕಾರ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ. ಆದ್ದರಿಂದ ತಾವು ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿದರು. ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಈ ಹಿಂದೆ ನಡೆದಿದ್ದ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳಂತೆ ಪರೇಶ್ ಮೇಸ್ತ ಹತ್ಯೆ
ಪ್ರಕರಣವನ್ನೂ ಮುಚ್ಚಿ ಹಾಕಲು ಸಿಎಂ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಯತ್ನಿಸುತ್ತಿದೆ. ಸಹಜ ಸಾವು ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ಸೂಚನೆಯಂತೆ ಪೊಲೀಸರೇ ಕೆಲವು ಮುಸಲ್ಮಾನ್ ಗೂಂಡಾಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಐಜಿಪಿ ಹೇಮಂತ್ ನಿಂಬಾಳ್ಕರ್ ತಾವೊಬ್ಬ ಐಪಿಎಸ್ ಅಧಿಕಾರಿ ಎಂಬುದನ್ನು ಮರೆತು ಮುಖ್ಯಮಂತ್ರಿ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ರಾಷ್ಟ್ರಭಕ್ತರ ಹತ್ಯೆ ನಡೆಯುತ್ತಿದ್ದರೂ ಅದನ್ನು ತಡೆಯುವುದನ್ನು ಬಿಟ್ಟು ಮುಖ್ಯಮಂತ್ರಿಗಳು ರಾಷ್ಟ್ರಭಕ್ತರ ಹೆಣಗಳ ಮೇಲೆ
ರಾಜಕಾರಣ ಮಾಡುತ್ತಿದ್ದಾರೆಂದು ಕಿಡಿ ಕಾರಿದರು. ಶೋಭಾ ಕರಂದ್ಲಾಜೆ ಮಾತನಾಡಿ, ಪರೇಶ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಪ್ರಕರಣವನ್ನು ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸದಿದ್ದಲ್ಲಿ ಕರಾವಳಿ ಹೊತ್ತಿ ಉರಿಯಲಿದ್ದು, ಅದಕ್ಕೆ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದರು. ಕರಾವಳಿ ಭಾಗದಲ್ಲಿ ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳು ಸಕ್ರಿಯವಾಗುತ್ತಿದ್ದು, ಆ ಭಾಗದಲ್ಲಿ ಐಸಿಸ್ ಸಂಘಟನೆಗೆ ನೇಮಕಾತಿ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕುವ ಬದಲು ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆಪಾದಿಸಿದರು. ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಳಪಡಿಸುವಂತೆ ಮತ್ತೂಮ್ಮೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಲಾಗುವುದು. ಜತೆಗೆ ಸಂಸತ್‌ನಲ್ಲೂ ಈ ವಿಷಯ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.
ಪರೇಶ್ ಪ್ರಕರಣ ಎನ್‌ಐಎಗೆ ವಹಿಸಿ
ಯಾದಗಿರಿ: ಹೊನ್ನಾವರದಲ್ಲಿ ಕೊಲೆಗೀಡಾದ ಪರೇಶ್ ಮೇಸ್ತ ಪ್ರಕರಣವನ್ನು ಎನ್‌ಐಎ (ನ್ಯಾಷನಲ್ ಇನ್ ವೆಸ್ಟಿಗೇಷನ್ ಏಜೆನ್ಸಿ)ಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಯುವಕರ ಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು, ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವ ಕೆಲಸವನ್ನು ಸರಕಾರ ಮಾಡುತ್ತಿಲ್ಲ. ಪರೇಶ್ ಹತ್ಯೆ ಪ್ರಕರಣ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಕ್ಷೇತ್ರದಲ್ಲಿದ್ದರು. ಆದರೆ, ಈ ಘಟನೆ ಬಗ್ಗೆ ಮಾಹಿತಿ ಪಡೆಯುವ ಸೌಜನ್ಯವನ್ನೂ ಅವರು ತೋರಲಿಲ್ಲ. ರಾಜ್ಯದಲ್ಲಿ 20 ಹಿಂದೂ ಯುವಕರ ಕೊಲೆಯಾಗಿದ್ದು, ಈ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾಪಿಸುತ್ತೇನೆ. ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ. ಹಿಂದೂಗಳ ಹತ್ಯೆಗಳ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯದು ರಾಕ್ಷಸ ಮುಖ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ರಾಕ್ಷಸ ಮುಖ. ಕಾಂಗ್ರೆಸ್‌ನವರು ತಮ್ಮ ಮುಖವನ್ನು ಕನ್ನಡಿಯಲ್ಲಿ
ನೋಡಿಕೊಳ್ಳಬೇಕು. ರಾಕ್ಷಸ ಮುಖವೋ, ಮನುಷ್ಯತ್ವದ ಮುಖವೋ ಎಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಟೀಕಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊನ್ನಾವರದಲ್ಲಿ ಪರೇಶ್ ಮೇಸ್ತ ಎಂಬ ಹಿಂದೂ ಯುವಕನ ಕಗ್ಗೊಲೆ ನಡೆದಿದೆ. ಈ ಪ್ರಕರಣದಲ್ಲಿ ಮಾನವೀಯತೆ ಮರೆತು ಕಾಂಗ್ರೆಸ್ ನಡೆಸಿದ
ಹೇಯ ಕೃತ್ಯ ಇದಾಗಿದೆ. ನ್ಯಾಯಯುತ ತನಿಖೆ ಮಾಡುವ ಮನಸ್ಸು ಕಾಂಗ್ರೆಸಿಗೆ ಇಲ್ಲ. ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಿಪಿಐ, ಪಿಎಸ್‌ಐ ಸೇರಿ ಸಿಬ್ಬಂದಿ ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಆಪಾದಿಸಿದರು.
ರಾಜ್ಯದಲ್ಲಿ ಮೇಸ್ತ ಸೇರಿ 20 ಹಿಂದೂ ಯುವಕರ ಹತ್ಯೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜನ ಪ್ರಜ್ಞಾವಂತ ಹಾಗೂ ಶಾಂತಿ ಪ್ರಿಯರು. ಆದರೆ ಪರೇಶ್ ಸಾವಿನ ಬಗ್ಗೆ ಜನರಲ್ಲಿ ಆಕ್ರೋಶ ಭುಗಿಲೆದ್ದಿದೆ. ಯಾರೋ ಹೇಳಿದ ಮಾತನ್ನು ಅಲ್ಲಿನ ಜನ ನಂಬುವುದೇ ಇಲ್ಲ. ಮೇಸ್ತ ಪ್ರಕರಣದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದರು.
ಸಣ್ಣ, ಸಣ್ಣ ಗಲಾಟೆಗಳನ್ನು ದೊಡ್ಡದು ಮಾಡಿ ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಹುನ್ನಾರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ. ಮುಖ್ಯಮಂತ್ರಿಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಇದ್ದಾಗಲೇ ಈ ಘಟನೆ ನಡೆದಿದೆ. ಯುವಕ ಮೃತಪಟ್ಟಿರುವುದಕ್ಕೆ ಕಾರಣ ಗೊತ್ತಿಲ್ಲ. ಆದರೆ, ಅಲ್ಲಿನ ಸಂಸದರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಹಿಡಿತ ತಪ್ಪಿದೆ. ಡಿಐಜಿಯ ವಾಹನಕ್ಕೆ ಬೆಂಕಿ ಹಚ್ಚುವ ಹಂತಕ್ಕೆ ಹೋಗಿದೆ. ಇದು ನಾಚೀಕೆಗೇಡು.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕರಾವಳಿಯಲ್ಲಿ ಕೋಮು ದ್ವೇಷ ಉಲ್ಬಣವಾಗಲು ಬಿಜೆಪಿ ನಾಯಕರ ಕಿತಾಪತಿಯೇ ಕಾರಣ. ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಕರಾವಳಿ ಭಾಗದಲ್ಲಿ ಶಾಂತಿಗೆ ಧಕ್ಕೆಯುಂಟಾಗುತ್ತಿದೆ.
ಅನಂತಕುಮಾರ್ ಹೆಗಡೆ ರಾಜಕಾರಣಿಯಾಗಲು ನಾಲಾಯಕ್.
● ಸಿದ್ದರಾಮಯ್ಯ, ಸಿಎಂ
ಶಿರಸಿ ಗಲಭೆ ಪ್ರಕರಣಕ್ಕೆ ಕಾಂಗ್ರೆಸ್ ಸರಕಾರವೇ ನೇರ ಹೊಣೆ. ಪರೇಶ್ ಮೇಸ್ತ ಪ್ರಕರಣ ಕುರಿತು ಅದೊಂದು ಸಹಜ ಸಾವು ಎಂದು ಹೇಳಿಕೆ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ.
ಪ್ರಮೋದ ಮುತಾಲಿಕ, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.