ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
Team Udayavani, Apr 1, 2023, 6:40 AM IST
ಬೆಂಗಳೂರು: ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಶೇ.4 ಮೀಸಲಾತಿಯನ್ನು ರದ್ದುಪಡಿಸಿರುವ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಮುಸ್ಲಿಮರ 2ಬಿ ಮೀಸಲಾತಿ ರದ್ದುಪಡಿಸಿದ ಬಳಿಕ ಅವರನ್ನು “ಆರ್ಥಿಕ ಹಿಂದುಳಿದ ವರ್ಗ’ (ಇಡಬ್ಲೂéಎಸ್)ಕ್ಕೆ ಸೇರಿಸಿ ರಾಜ್ಯ ಸರ್ಕಾರ 2023ರ ಮಾ.27ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವ ತನಕ ಆದೇಶದ ಜಾರಿಗೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿದಾರರ ಪರ ವಕೀಲ ಆರ್. ಕೋತ್ವಾಲ್ ವಕಾಲತ್ತು ಹಾಕಿದ್ದಾರೆ.
ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿ ನೀಡಲಾಗುತ್ತಿದ್ದ ಶೇ.4 ಮೀಸಲಾತಿಯನ್ನು ಕಿತ್ತುಕೊಂಡು ಅವರನ್ನು “ಆರ್ಥಿಕ ದುರ್ಬಲ ವರ್ಗ (ಇಡಬ್ಲೂéಎಸ್)ಕ್ಕೆ ಸೇರಿಸಿ 2023ರ ಮಾ.24ರಂದು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಸರ್ಕಾರದ ಈ ತರಾತುರಿಯ ಮತ್ತು ದೋಷಪೂರಿತ ನಿರ್ಧಾರ ಮುಸ್ಲಿಮರನ್ನು ಇಡಬ್ಲೂéಎಸ್ ವರ್ಗಗಳಿಗೆ ನಿಗದಿಪಡಿಸಲಾದ ಶೇ.10ರ ಮೀಸಲಾತಿಯಲ್ಲಿ ಸಾಮಾನ್ಯ ವರ್ಗದಡಿ ಪೈಪೋಟಿ ಮಾಡಲು ತಳ್ಳಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ.4 ಮೀಸಲಾತಿಯನ್ನು ರಾಜ್ಯದ ಬಲಿಷ್ಠ ಸಮುದಾಯಗಳಾದ ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತರಿಗೆ ತಲಾ ಶೇ.2ರಂತೆ ಹಂಚಿಕೆ ಮಾಡಲಾಗಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ರಾಜಕೀಯ ಪ್ರೇರಿತ ನಿರ್ಧಾರವಾಗಿದೆ. ಎಸ್ಸಿ-ಎಸ್ಟಿ ವರ್ಗಗಳಿಗಿಂತ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಒಂದು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಮಾಡುವಂತಹ ಯಾವ ಸಂದರ್ಭವನ್ನೂ ರಾಜ್ಯ ಸರ್ಕಾರ ಬಿಡುತ್ತಿಲ್ಲ. ಮುಸ್ಲಿಂ ಸಮುದಾಯದ ವಿರುದ್ಧ ಹಲವು ಬಗೆಯ ದೌರ್ಜನ್ಯಗಳ ಮುಂದುವರಿದ ಭಾಗವಾಗಿ ಇದೀಗ ಮೀಸಲಾತಿಯನ್ನೂ ಕಿತ್ತುಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.