ಬಡವರು, ರೈತರು ನ್ಯಾಯಕ್ಕೆ ಇನ್ನು 6 ತಿಂಗಳಿಗಿಂತ ಹೆಚ್ಚು ಕಾಯಬೇಕಿಲ್ಲ: ಪಾಟೀಲ್
Team Udayavani, Mar 5, 2024, 12:05 AM IST
ಬೆಂಗಳೂರು: ಸಣ್ಣ ರೈತರು ಮತ್ತು ಆರ್ಥಿಕ ದುರ್ಬಲ ವರ್ಗಗಳ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸುವ “ಸಿವಿಲ್ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ-2023’ಕ್ಕೆ ರಾಷ್ಟ್ರಪತಿ ಅಂಕಿತ ಮುದ್ರೆ ಹಾಕಿದ್ದು ಸೋಮವಾರದಿಂದಲೇ (ಮಾರ್ಚ್ 4) ರಾಜ್ಯದಲ್ಲಿ ಜಾರಿಗೆ ಬಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಮಸೂದೆ ಪ್ರಕಾರ ಇನ್ಮುಂದೆ ನಿಗದಿತ ಅವಧಿಯಲ್ಲಿ ನ್ಯಾಯದಾನ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಯಾವುದೇ ಸಿವಿಲ್ ವ್ಯಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮತ್ತು ಸಣ್ಣ, ಅತಿ ಸಣ್ಣ ರೈತರು ಆರು ತಿಂಗಳಿಗಿಂತ ಹೆಚ್ಚು ಅವಧಿ ನ್ಯಾಯದಾನಕ್ಕಾಗಿ ಕಾಯಬೇಕಿಲ್ಲ. ದಿನದ ವಿಚಾರಣೆ ಪಟ್ಟಿಯಲ್ಲಿ ಆದ್ಯತೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ಇದೊಂದು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಲಿದ್ದು, ಇದರಿಂದ ವಿಶೇಷವಾಗಿ ಸಣ್ಣ ರೈತರಿಗೆ ಅನುಕೂಲ ಆಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ದೇಶಿತ ಮಸೂದೆಯು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ 2023ರ ಜುಲೈ ತಿಂಗಳಲ್ಲೇ ಅಂಗೀಕಾರಗೊಂಡಿತ್ತು. ಮಸೂದೆಗೆ ರಾಷ್ಟ್ರಪತಿ ಅಂಕಿತಮುದ್ರೆ ಅಗತ್ಯ ಇದ್ದುದರಿಂದ ಈ ಸಂಬಂಧ ರಾಷ್ಟ್ರಪತಿಗೆ ಮಂಡಿಸಲಾಗಿತ್ತು. ಫೆ. 18ರಂದು ಅಂಕಿತ ಹಾಕಿದ್ದು, ಅದರ ಬೆನ್ನಲ್ಲೇ ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮಾರ್ಗಸೂಚಿಗಳನ್ನು ಕೂಡ ಹೊರಡಿಸಲಾಗಿದ್ದು ರಾಜ್ಯದಲ್ಲಿ ಸಿವಿಲ್ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ 2023 ಅನುಷ್ಠಾನಗೊಳಿಸಲಾಗಿದೆ ಎಂದರು.
ಆರ್ಥಿಕ ದುರ್ಬಲರೆಂದರೆ
-ವಾರ್ಷಿಕ ಆದಾಯ 3 ಲ. ರೂ. ಮೀರದವರು.
-ಎರಡು ಹೆಕ್ಟೇರ್ ಒಣಬೇಸಾಯ ಭೂಮಿ ಇರುವವರು.
-ಒಂದು ಕಾಲು ಹೆಕ್ಟೇರ್ ಮಳೆಯಾಶ್ರಿತ ಆಧ್ರì ಭೂಮಿ ಹೊಂದಿರುವವರು.
-ನೀರಾವರಿ ಬೆಳೆ ಬೆಳೆಯಲು ಅಥವಾ ಕಬ್ಬು/ ದ್ರಾಕ್ಷಿ/ ತೆಂಗು/ ಅಡಕೆ/ ರೇಷ್ಮೆ ಬೆಳೆಯಲು ಅರ್ಧ ಎಕರೆ ಭೂಮಿ ಹೊಂದಿರುವವರು.
-ದೀರ್ಘಕಾಲಿಕ ನೀರಾವರಿ ಸೌಲಭ್ಯ ಗಳನ್ನು ಹೊಂದಿರುವ ಅಥವಾ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ನೀರಾವರಿ ಬೆಳೆಗಳನ್ನು ಬೆಳೆಯುವ ಸೌಲಭ್ಯಗಳಿರುವ ಕಾಲು ಹೆಕ್ಟೇರ್ ಭೂಮಿ ಇರುವವರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.