ನ.1ರಂದು ಪುನೀತ್ ರಾಜಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ:ಸಿಎಂ ಬೊಮ್ಮಾಯಿ
Team Udayavani, Aug 5, 2022, 1:06 PM IST
ಬೆಂಗಳೂರು: ಚಿತ್ರನಟ ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಶಸ್ತಿ ಕೊಡಮಾಡಲು ಸಿದ್ಧತೆಗಳನ್ನು ಕೈಗೊಳ್ಳಲು ಸಮಿತಿಯನ್ನು ರಚಿಸಲಾಗುವುದು. ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರು ಸಹ ಸಮಿತಿಯಲ್ಲಿ ಇರುತ್ತಾರೆ. ಎಲ್ಲರೂ ಸೇರಿ ಗೌರವಯುತವಾಗಿ ಪುನೀತ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ: 1922 ರಿಂದ ಫಲಪುಷ್ಪ ಪ್ರದರ್ಶನ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷ ಅತಿ ಹೆಚ್ವು ಜನರನ್ನು ಆಕರ್ಷಿಸುತ್ತಿದೆ. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯ ಅಂಗವಾಗಿ ಸಂಭ್ರಮ ತುಂಬಿದೆ. ಫಲಪುಷ್ಪ ಪ್ರದರ್ಶನಕ್ಕೆ ವಿಶೇಷ ಕಳೆ ಬಂದಿದೆ. ಮುಂದಿನ 10 ದಿನಗಳ ಕಾಲ ಪ್ರತಿ ದಿನ ಲಕ್ಷಾಂತರ ಜನ ಬರುವ ನಿರೀಕ್ಷೆ ಇದೆ. ಈ ಬಾರಿ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ವಿಶೇಷವಾದ ಪ್ರದರ್ಶನ ಏರ್ಪಟ್ಟಿದೆ. ಹಾಗಾಗಿ ಇನ್ನಷ್ಟು ಜನರನ್ನು ಪ್ರದರ್ಶನ ಆಕರ್ಷಿಸುವ ನಿರೀಕ್ಷೆಯಿದೆ. ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಅವರ ನೇತೃತ್ವದಲ್ಲಿ ಅಧಿಕಾರಿಗಳು ಉತ್ತಮವಾಗಿ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ಆನಂದಿಸಬೇಕೆಂದು ತಿಳಿಸಿದರು.
ಇದನ್ನೂ ಓದಿ:ಬಾಯ್ತೆರದ ಭೂಮಿ… ಚಿಲಿಯಲ್ಲಿ ಭಾರೀ ಗಾತ್ರದ ನಿಗೂಢ ಕಂದಕ ಸೃಷ್ಟಿ: ವಿಡಿಯೋ ನೋಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.