ನಿಯೋಜನೆಗೆ ಒತ್ತಡ ಹೇರಿದವರ ವಿರುದ್ಧ ಶಿಸ್ತುಕ್ರಮ: ಪ್ರಭು ಚವ್ಹಾಣ್ ಎಚ್ಚರಿಕೆ
Team Udayavani, Apr 20, 2022, 9:15 PM IST
ಬೆಂಗಳೂರು: ಪಶು ಸಂಗೋಪನೆ ಇಲಾಖೆಯಿಂದ ಇನ್ನು ಮುಂದೆ ಬೇರೆ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳುವವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.
ಪಶು ಸಂಗೋಪನೆ ಇಲಾಖೆಯಿಂದ ಅನ್ಯ ಇಲಾಖೆಗಳಿಗೆ ವೈದ್ಯರು ಮತ್ತು ಸಿಬಂದಿ ನಿಯೋಜನೆ ಮೇರೆಗೆ ತೆರಳುವುದನ್ನು ನಿರ್ಬಂಧಿಸಲಾಗಿದೆ. ಯಾರೇ ರಾಜಕೀಯವಾಗಿ ಒತ್ತಡ ತಂದರೆ ಅವರನ್ನು ಅಮಾನತು ಪಡಿಸಲಾಗುವುದು ಎಂದರು.
ರೈತರ, ಪಶುಪಾಲಕರ ಅಭಿವೃದ್ಧಿಗಾಗಿ ಇಲಾಖೆಯಿಂದ ಪ್ರಾಣಿ ಕಲ್ಯಾಣ ಮಂಡಳಿ, ಪಶು ಸಂಜೀವಿನಿ, ಗೋಹತ್ಯೆ ನಿಷೇಧ ಕಾಯ್ದೆ, ಗೋಶಾಲೆ, ಪ್ರಾಣಿ ಸಹಾಯವಾಣಿ ಕೇಂದ್ರ ಸ್ಥಾಪನೆಯಂತಹ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿಬಂದಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ನಿಯೋಜನೆ ರದ್ದು
ಜಾನುವಾರು ಲಸಿಕಾ ಕಾರ್ಯಕ್ರಮಗಳ ಪ್ರಗತಿ ಕುಂಠಿತವಾಗಬಾರದೆಂದು ಅನ್ಯ ಕರ್ತವ್ಯದ ಮೇಲೆ ಬೇರೆ ಇಲಾಖೆಗೆ ತೆರಳುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಹೀಗಿದ್ದರೂ ಕೆಲವರು ರಾಜಕೀಯವಾಗಿ ಒತ್ತಡ ಹೇರುತ್ತಿರುವುದು ಹಾಗೂ ಅಧಿಕಾರಿಗಳ ಹಂತದಲ್ಲೇ ನಿಯೋಜನೆ ಮೇಲೆ ತೆರಳುವುದಾಗಿ ತಿಳಿದುಬಂದಿದೆ. ಈ ನಿಯೋಜನೆಯನ್ನು ರದ್ದುಪಡಿಸಲಾಗಿದೆ. ಅಧಿಕಾರಿ, ಸಿಬಂದಿ ಎಲ್ಲಿ ಮತ್ತು ಯಾವ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೋ ಅಲ್ಲೇ ಕರ್ತವ್ಯದಲ್ಲಿರಬೇಕು ಎಂದು ಸಚಿವರು ಹೇಳಿದರು.
ಅನ್ಯ ಇಲಾಖೆಯವರು ಇಲ್ಲಿ ಕಾರ್ಯನಿರ್ವಹಿಸಲು ಅಸಾಧ್ಯ
ಪಶು ಸಂಗೋಪನೆ ಇಲಾಖೆಯಲ್ಲಿ ಸಿಬಂದಿ ಕೊರತೆ ಇರುವುದರಿಂದ ಯಾವುದೇ ಕಾರಣಕ್ಕೂ ಇಲಾಖೆಯಿಂದ ಅನ್ಯ ಕರ್ತವ್ಯದ ಮೇಲೆ ನಿಯೋಜನೆ ಸಿಬಂದಿ ನೀಡುವಂತೆ ಶಾಸಕರು ಮನವಿ ಸಲ್ಲಿಸಬಾರದು. ಇಲಾಖೆಯಿಂದ ಬೇರೆ ಇಲಾಖೆಗೆ ತೆರಳಿ ಪಶುವೈದ್ಯರು ಕಾರ್ಯನಿರ್ವಹಿಸಬಹುದು. ಆದರೆ ಬೇರೆ ಇಲಾಖೆಯಿಂದ ಬಂದು ಅಧಿಕಾರಿಗಳು ಪ್ರಾಣಿಗಳಿಗೆ ಚಿಕಿತ್ಸೆ ನೀಡುವಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಕಠಿನವಾದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.