ಅತ್ಯಾಚಾರ ಪ್ರಕರಣ: ಪ್ರಜ್ವಲ್‌ಗೆ ವೈದ್ಯಕೀಯ ತಪಾಸಣೆ
ಪ್ರಜ್ವಲ್‌ರಿಂದ ಮುಂದುವರಿದ ಗೊಂದಲದ ಹೇಳಿಕೆ ;ಮಾಜಿ ಸಂಸದನ ಧ್ವನಿ ಮಾದರಿ ಸಂಗ್ರಹಿಸಿ ಸಾಕ್ಷ್ಯ ಕಲೆ
Team Udayavani, Jun 16, 2024, 12:43 AM IST
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ 2ನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಶನಿವಾರ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ವೈದ್ಯಕೀಯ ಪರೀಕ್ಷೆ ನಡೆದಿತ್ತು. 2ನೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ಗೆ ಶನಿವಾರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪ್ರಜ್ವಲ್‌ಗೆ ವೈದ್ಯಕೀಯ ಪರೀಕ್ಷೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆ ಸುತ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ನಾಲ್ಕು ಜನ ವೈದ್ಯರ ತಂಡ ಪ್ರಜ್ವಲ್‌ಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ. ಈ ವೇಳೆ ಎಫ್ಎಸ್‌ಎಲ್ ಅಧಿಕಾರಿಗಳ ತಂಡವು ಭಾಗಿಯಾಗಿತ್ತು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಬಗೆಯ ಪರೀಕ್ಷೆಗಳನ್ನು ವೈದ್ಯರ ತಂಡ ನಡೆಸಿದೆ. ಇದಕ್ಕೆ ಸಂಬಂಧಿಸಿ ಕೆಲವೇ ದಿನಗಳಲ್ಲಿ ಪರೀಕ್ಷಾ ವರದಿಯನ್ನು ವೈದ್ಯರು ಎಸ್‌ಐಟಿ ಅಧಿಕಾರಿಗಳಿಗೆ ನೀಡಲಿದ್ದಾರೆ. ಬಳಿಕ ಪ್ರಜ್ವಲ್‌ನನ್ನು ಮತ್ತೆ ಸಿಐಡಿ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ. ಇಷ್ಟಾದರೂ ಪ್ರಜ್ವಲ್ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪ್ರಕರಣದ ಬಗ್ಗೆ ಅವರಿಂದ ಮಾಹಿತಿ ಕಲೆ ಹಾಕುವುದೇ ಸವಾಲಾಗಿದೆ ಎನ್ನಲಾಗಿದೆ.
ಧ್ವನಿ ಮಾದರಿ ಸಂಗ್ರಹಿಸಿ ಸಾಕ್ಷ್ಯ ಕಲೆ
ಎಸ್‌ಐಟಿ ಅಧಿಕಾರಿಗಳು ಆರೋಪಿಯ ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದಾರೆ. ವಿವಿಧ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ. ವೀಡಿಯೋದಲ್ಲಿ ಕಾಣಿಸಿದ ಪುರುಷನ ದೇಹದ ಭಾಗದೊಂದಿಗೆ ಪ್ರಜ್ವಲ್ ದೇಹವನ್ನು ಹೋಲಿಸಲು ಅಧಿಕಾರಿಗಳ ತಂಡ ಚಿಂತನೆ ನಡೆಸಿದೆ. ಈ ಪರೀಕ್ಷೆಗೆ ಗುಜರಾತ್‌ನ ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ವಿದೇಶಿ ತಜ್ಞರ ನೆರವು ಪಡೆದುಕೊಳ್ಳಲು ಎಸ್‌ಐಟಿ ತಂಡ ಮುಂದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.