ರಾಷ್ಟ್ರಪತಿ ಚುನಾವಣೆ; ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ
ನನ್ನ ಪ್ರಕಾರ ಮುರ್ಮು ಈಗಾಗಲೇ ಗೆದ್ದಾಗಿದೆ
Team Udayavani, Jun 29, 2022, 5:41 PM IST
ಬೆಂಗಳೂರು: ರಾಷ್ಟ್ರಪತಿ ಆಯ್ಕೆ ಸಂಬಂಧ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ ನೀಡುವ ಇಂಗಿತವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ದ್ರೌಪದಿ ಮುರ್ಮು ಅವರಿಗೆ ಬಹುಮತದ ಸಂಖ್ಯೆ ಈಗಾಗಲೇ ಸಿಕ್ಕದೆ. ನಮ್ಮ ಪಕ್ಷದ ಬೆಂಬಲ ಅವಶ್ಯಕತೆ ಇಲ್ಲ. ಆದರೂ ನಮ್ಮ ಬೆಂಬಲ ಕೇಳಿದ್ದಾರೆ. ಅದು ಅವರ ಔದಾರ್ಯ ಎಂದು ಬೆಂಬಲ ನೀಡುವ ಬಗ್ಗೆ ಪರೋಕ್ಷವಾಗಿ ಹೇಳಿದರು.
ನನ್ನ ಪ್ರಕಾರ ಮುರ್ಮು ಈಗಾಗಲೇ ಗೆದ್ದಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮುರ್ಮು ಅವರು ಎರಡು ಬಾರಿ ದೂರವಾಣಿ ಕರೆ ಮಾಡಿ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಮನವಿ ಮಾಡಲು ಅವರು ಸಮಯ ಕೋರಿದ್ದರು. ಅವರು ಖುದ್ದು ಬಂದು ಮನವಿ ಮಾಡುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಚುನಾವಣಾ ಅಭ್ಯರ್ಥಿಯಾಗಿ ಮುರ್ಮು ಕಣದಲ್ಲಿದ್ದಾರೆ. ಅವರ ಹಿನ್ನೆಲೆ ಏನು, ಜೀವನದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ, ತಳಮಟ್ಟದ ಸಮುದಾಯದಿಂದ ಹೇಗೆ ಬೆಳೆದು ಬಂದಿದ್ದಾರೆ ಎಂಬುದನ್ನು ನಾನು ಅರಿತಿದ್ದೇನೆ. ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸ್ಪೂರ್ತಿದಾಯಕ ಎಂದರು.
ಇಲ್ಲಿ ಕಾಂಗ್ರೆಸ್, ಬಿಜೆಪಿ ಅನ್ನುವ ಪ್ರಶ್ನೆ ಅಲ್ಲ. ಬಿ ಟೀಂ ಅನ್ನುವ ಪ್ರಶ್ನೆಯೂ ರಾಷ್ಟ್ರಪತಿ ಚುನಾವಣೆಯಲ್ಲಿ ಬರಲ್ಲ. ನಾವು ತೆಗೆದುಕೊಂಡ ನಿರ್ಧಾರ ಬಿಜೆಪಿ ಬಿ ಟೀಂ ಅಂತ ಪ್ರಚಾರ ಮಾಡೋದು ಇದಕ್ಕೆ ಅನ್ವಯ ಆಗಲ್ಲ ಎಂದು ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಮೇಲೆ ಚಾಟಿ ಬೀಸಿದರು.
ವಿದ್ಯುತ್ ದರ; ಮತ್ತೆ ಬಿಸಿ ಮುಟ್ಟಿಸಿದ ಮಾಜಿ ಸಿಎಂ
ರಾಜ್ಯದ ಜನರಿಗೆ ವಿದ್ಯುತ್ ಶಾಕ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಈಗ ಹೆಚ್ಚಳ ಮಾಡಿ ಚುನಾವಣೆ ಸಮಯದಲ್ಲಿ ಕಡಿಮೆ ಮಾಡುತ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡಿವೆ ಎಂದು ಕಿಡಿಕಾರಿದರು.
ವಿದ್ಯುತ್ ಸಚಿವರು ಕೆಇಆರ್ ಸಿ ದರ ಹೆಚ್ಚಳ ಮಾಡುತ್ತದೆಂದು ಹೇಳುತ್ತಾರೆ. ನಿವೃತ್ತ ಐಎಎಸ್ ಅಧಿಕಾರಿ ಗುರು ಚರಣ್ ಇಂಧನ ಇಲಾಖೆ ಪರಿಸ್ಥಿತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಎಸ್ಕಾಂಗಳು ಸೇರಿ ಎಲ್ಲಾ ಕಂಪನಿಗಳ ಪರಿಸ್ಥಿತಿ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯಲ್ಲಿ 30-38 ಸಾವಿರ ಕೋಟಿಗಳು ಹಣ ಸರ್ಕಾರದಿಂದಲೇ ಕೆಇಆರ್ ಸಿ ಗೆ ಕೊಡಬೇಕು. ನಾನು ಕೂಡಾ ಸಿಎಂ ಆಗಿದ್ದಾಗ ಎಸ್ಕಾಂ ಸೇರಿದಂತೆ ಎಲ್ಲಾ ಕಂಪನಿಗಳಿಗೆ ನನ್ನ ಕಾಲದಲ್ಲಿ 13-14 ಸಾವಿರ ಕೋಟಿ ಮಾತ್ರ ಕೊಡಬೇಕಿತ್ತು. 3 ವರ್ಷಕ್ಕೆ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು 30 ಸಾವಿರ ಕೋಟಿ ಮಾಡಿವೆ. ಬುಕ್ಸ್ ಆಫ್ ಅಕೌಂಟ್ ನಲ್ಲಿ ಮಾತ್ರ ಲಾಭ ತೋರಿಸಿಕೊಂಡಿದ್ದಾರೆ ಎಂದು ಹೇಳಿದರು.
2016-17 ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸೌರಶಕ್ತಿ ಇದ್ದಾಗ ಯುನಿಟ್ 9 ರೂ. ಮಾಡಿ ಖರೀದಿಗೆ ನಿಗದಿ ಮಾಡಿದಾಗ ನಾನೇ ವಿರೋಧ ಮಾಡಿದ್ದೆ. ಅವತ್ತಿನ ಅಧ್ಯಕ್ಷರು ಯಾಕೆ ಮಾಡಬಾರದೆಂದು ನನ್ನ ವಿರುದ್ದ ಮಾತನಾಡಿದ್ದರು. 2008 ರಿಂದ ಆಡಳಿತ ಮಾಡಿರುವ ಸರ್ಕಾರಗಳು ಮಾಡಿದ ವಿದ್ಯುತ್ ಶಕ್ತಿ ಕರ್ಮ ಕಾಂಡ ತೆರೆಯಲು ಹೋದೆ. ಅಂದಿನ ಸದನ ಸಮಿತಿ ಅಧ್ಯಕ್ಷ ಕುರಿ ಕಾಯೋಕೆ ತೋಳದ ರೀತಿ ಮಾಡಿದ್ರು. ಪ್ರಕರಣ ಮುಚ್ಚಿ ಹಾಕಲು ಹೋಗಿದ್ರು. ಈಗ ದರ ಏರಿಕೆ ಅಂತ ಹೇಳ್ತಿದ್ದಾರೆ. ಇದು ಎರಡು ರಾಷ್ಟ್ರೀಯ ಪಕ್ಷದ ಕೊಡುಗೆ. ಇನ್ನು ಕಷ್ಟದ ದಿನಗಳು ರಾಜ್ಯಕ್ಕೆ ಬರಲಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ಕೊಡುತ್ತೇನೆ ಅವರು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ನಗರ ಜೆಡಿಎಸ್ ಅಧ್ಯಕ್ಷ ಆರ್ ಪ್ರಕಾಶ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.