ದನಿ ಇಲ್ಲದವರಿಗೆ ದನಿ ನೀಡಿದ್ದು ಮೋದಿ ಸರಕಾರ: ಸಚಿವ ಅಶ್ವತ್ಥ ನಾರಾಯಣ
Team Udayavani, May 31, 2022, 3:48 PM IST
ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವು ದೇಶದಲ್ಲಿ ಸಕಾರಾತ್ಮಕ ಪರಿವರ್ತನೆ ತಂದಿದ್ದು, ದುರ್ಬಲರಿಗೆ ದನಿ ಮತ್ತು ಶಕ್ತಿಗಳನ್ನು ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
‘ಆಜಾದಿ ಕಾ ಅಮೃತ ಮಹೋತ್ಸವ’ದಲ್ಲಿ ಮಾತನಾಡಿದ ಅವರು, ‘ಮೋದಿಯವರು ದುರ್ಬಲರು, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಹತ್ತಾರು ವಿನೂತನ ಯೋಜನೆಗಳನ್ನು ಘೋಷಿಸಿ, ಅವುಗಳನ್ನು ಕಾಲಮಿತಿಯಲ್ಲಿ ಜಾರಿಗೆ ತಂದು, ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ರಾಜಕೀಯ ಲಾಭಗಳನ್ನು ಮೀರಿದ ದೂರದರ್ಶಿತ್ವ ಇರುವ ನಾಯಕರಿಗೆ ಮಾತ್ರ ಇದು ಸಾಧ್ಯ’ ಎಂದು ಬಣ್ಣಿಸಿದರು.
ಇದಕ್ಕೂ ಮುನ್ನ ಅವರು, ಸರಕಾರದ ನಾನಾ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು. ಸಭೆಯ ಬಳಿಕ ಸಚಿವರು, ಮೋದಿ ಅವರು ಹಿಮಾಚಲ ಪ್ರದೇಶದಿಂದ ಮಾಡಿದ ಭಾಷಣದ ನೇರ ಪ್ರಸಾರವನ್ನು ವೀಕ್ಷಿಸಿದರು.
ಶೌಚಾಲಯ ನಿರ್ಮಾಣ, ಅಡುಗೆ ಅನಿಲ ಸಂಪರ್ಕ, ವಿದ್ಯುತ್ ಸೌಲಭ್ಯ, ರೈತ ಸಮ್ಮಾನ್, ಕೊರೋನ ಲಸಿಕೆ ಇವೆಲ್ಲ ಮೋದಿಯವರ ಅಸಾಧಾರಣ ಸಾಧನೆಗಳಾಗಿವೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಭಾರತದಲ್ಲಿ ಇವೆಲ್ಲ ಏಕೆ ಸಾಧ್ಯವಾಗಿರಲಿಲ್ಲ ಎನ್ನುವ ಅವಲೋಕನ ಆಗಬೇಕು. ಹಾಗೆಯೇ, ಜನರು ಶಿಕ್ಷಣವೇ ತಮ್ಮ ಪ್ರಗತಿಗೆ ಇರುವ ಏಕೈಕ ದಾರಿ ಎನ್ನುವುದನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಮಂಗಳೂರು: ಪೊಲೀಸರಿಗೆ ನಿಂದಿಸಿದ ಆರೋಪಿಗಳು ಸೇರಿ 9 ಜನರ ಬಂಧನ;ವಿಚಾರಣೆ ವೇಳೆ ಸ್ಪೋಟಕ ಮಾಹಿತಿ
ಜಾಗತಿಕ ಸ್ಪರ್ಧೆಯ ಯುಗದಲ್ಲಿ ಭಾರತವು ಮೋದಿ ನಾಯಕತ್ವದಲ್ಲಿ ಅಗ್ರಪಂಕ್ತಿಯಲ್ಲಿ ಬೆಳಗುತ್ತಿದೆ. ಅವರು ರೂಪಿಸಿರುವ ಎನ್ಇಪಿ, ನವಭಾರತ ನಿರ್ಮಾಣಕ್ಕೆ ಸೋಪಾನವಾಗಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಜಿಲ್ಲಾ ಎಸ್ಪಿ ಸಂತೋಷ ಬಾಬು, ಜಿಪಂ ಸಿಇಒ ಇಕ್ರಂ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ಜಯಲಕ್ಷ್ಮಿ, ರಮೇಶ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.