ಜಲಮಂಡಳಿ ನೀರು ಸೋರಿಕೆ ತಡೆಯಲು ಆದ್ಯತೆ ನೀಡಿ: ಅಧಿಕಾರಿಗಳಿಗೆ ಸಿಎಂ ಸೂಚನೆ
Team Udayavani, Jun 1, 2021, 3:06 PM IST
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಂಗಳೂರು ಜಲಮಂಡಳಿಯ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಬೆಂಗಳೂರು ಜಲಮಂಡಳಿಯ ವ್ಯಾಪ್ತಿಯಲ್ಲಿ ಶೇ. 36 ರಷ್ಟಿರುವ ನೀರು ಸೋರಿಕೆಯನ್ನು ಶೇ. 20ಕ್ಕಿಳಿಸುವ ಬಗ್ಗೆ ಕಾರ್ಯತಂತ್ರ ರೂಪಿಸುವಂತೆ ಸಿಎಂ ನಿರ್ದೇಶನ ನೀಡಿದರು.
ನೀರು ಸೋರಿಕೆಯನ್ನು ತಡೆಗಟ್ಟುವ ಕುರಿತು ಇತರ ನಗರಗಳ ಮಾಹಿತಿಯನ್ನೂ ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ಈ ಸಂದರ್ಭದಲ್ಲಿ ಸಿಎಂ ಸೂಚಿಸಿದರು.
ಬೆಂಗಳೂರು ಜಲ ಮಂಡಳಿಯು ಮಳೆಗಾಲದಲ್ಲಿ ತುರ್ತು ಸಂದರ್ಭ ನಿರ್ವಹಣೆಗಾಗಿ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಅವರು ಸಭೆಯಲ್ಲಿ ಮಾಹಿತಿ ಪಡೆದರು. ಬೆಂಗಳೂರು ನಗರಕ್ಕೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊಳವೆ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, 51 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. 2022 ಡಿಸೆಂಬರ್ ವೇಳೆಗೆ ಉಳಿದ 59 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುವುದು. ಈ ಗ್ರಾಮಗಳಲ್ಲಿ ಒಳಚರಂಡಿ ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ:ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿದವರನ್ನು ಸಂಪುಟದಿಂದ ವಜಾ ಮಾಡಿ : ರೇಣುಕಾಚಾರ್ಯ
ನಗರಕ್ಕೆ 775 ಎಂ.ಎಲ್. ಹೆಚ್ಚುವರಿ ನೀರು ಒದಗಿಸುವ 5550 ಕೋಟಿ ರೂ. ವೆಚ್ಚದ ಕಾವೇರಿ 5 ನೇ ಹಂತ ಯೋಜನೆಯು 2023ರಲ್ಲಿ ಪೂರ್ಣಗೊಳಿಸುವ ಗುರಿಯಿದೆ. ಈ ವರೆಗೆ ಕಾಮಗಾರಿಗಳು ನಿಗದಿತ ಗುರಿಗಿಂತ ವೇಗವಾಗಿ ಪ್ರಗತಿ ಸಾಧಿಸಿವೆ ಎಂದು ವಿವರಣೆ ನೀಡಿದರು. ಎಲ್ಲ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.