ಕಾಮೇಗೌಡರ ಪುತ್ರನಿಗೆ ಉದ್ಯೋಗ ಕೊಡುವೆ ಭರವಸೆ ಇನ್ನೂ ಈಡೇರಿಲ್ಲ: ಸಿದ್ದರಾಮಯ್ಯ
Team Udayavani, Oct 18, 2022, 3:24 PM IST
ಬೆಂಗಳೂರು: ಸುಳ್ಳು ಭರವಸೆ ನೀಡುವುದರಲ್ಲಿ ನಿಸ್ಸೀಮನಾಗಿರುವ ಬಿಜೆಪಿ ಸರ್ಕಾರ ಮಳವಳ್ಳಿ ಜಲಕ್ರಾಂತಿಯ ಕಾಮೇಗೌಡ ಅವರ ಪುತ್ರನಿಗೆ ಸರ್ಕಾರಿ ಉದ್ಯೋಗ ಕೊಡುವ ಭರವಸೆಯನ್ನೂ ಈಡೇರಿಸಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ನಲ್ಲಿ ಕಾಮೇಗೌಡರ ಜಲಕ್ರಾಂತಿಯನ್ನು ಪ್ರಸ್ತಾಪಿಸಿದ್ದರು. ಬಳಿಕ 2020ರ ಜುಲೈ 2 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಮೇಗೌಡರ ಇಬ್ಬರು ಪುತ್ರರಲ್ಲಿ ಒಬ್ಬರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸರ್ಕಾರಿ ನೌಕರಿ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದಾಗಿ ಎರಡು ವರ್ಷಗಳು ಕಳೆದು ಕಾಮೇಗೌಡರು ನಿಧನರಾದರೂ ಇವರ ಪುತ್ರನಿಗೆ ಸರ್ಕಾರ ಕೆಲಸ ನೀಡಲಾಗಿಲ್ಲ ಎಂದರು.
ಕಾಮೇಗೌಡರ ಪುತ್ರನಿಗೆ ಸರ್ಕಾರಿ ಕೆಲಸ ಎಂದು ಬಿಜೆಪಿ ಸರ್ಕಾರ ಭರ್ಜರಿ ಪ್ರಚಾರ ಗಿಟ್ಟಿಸಿತ್ತು. ಪ್ರಚಾರದ ಬಳಿಕ ಏನಾದರೂ ಕೆಲಸ ಆಗಿದೆಯೇ ಎಂದು ಪರೀಕ್ಷಿಸಿದರೆ ಏನೇನೂ ಆಗಿಲ್ಲ. ಕಾಮೇಗೌಡರ ಇಬ್ಬರು ಪುತ್ರರಲ್ಲಿ ಒಬ್ಬನಿಗೆ ಕೆಲಸ ಕೊಡುವುದಿರಲಿ, ಇವರ ಕುಟುಂಬದ ವಾರ್ಷಿಕ ಆದಾಯ-ಮತ್ತಿತರೆ ವಿವರಗಳನ್ನು ಸಂಗ್ರಹಿಸುವುದಕ್ಕೂ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲೂ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾಮೇಗೌಡರ ಕುಟುಂಬದ ಆದಾಯ ಮತ್ತು ಇತರೆ ವಿವರಗಳನ್ನು ಒದಗಿಸುವಂತೆ ಕೋರಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಇದುವರೆಗೂ ಆರು ಪತ್ರಗಳನ್ನು ಬರೆದಿದೆ. 2020 ರಿಂದ 2021ರ ಡಿಸೆಂಬರ್‌ವರೆಗೂ ಒಟ್ಟು ಆರು ಪತ್ರಗಳನ್ನು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಬರೆಯಲಾಗಿದೆ. ಕೊನೆಯ ಪತ್ರದಲ್ಲಿ “ಅವಶ್ಯವಿರುವ ವರದಿಯನ್ನು ನೀಡಲು ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಸ್ಪಂದಿಸದಿರುವುದು ವಿಷಾದಕರ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಪ್ರಸ್ತಾಪಿಸಿದ್ದಾರೆ. ಆದರೂ ಮಂಡ್ಯ ಜಿಲ್ಲಾಧಿಕಾರಿಗಳಿಂದ ಇದುವರೆಗೂ ಸರ್ಕಾರಕ್ಕೆ ವರದಿ ಬಂದಂತೆ ಕಾಣುತ್ತಿಲ್ಲ. ಕಾಮೇಗೌಡರ ಕುಟುಂಬಕ್ಕೆ ಸರ್ಕಾರಿ ಕೆಲಸ ಸಿಕ್ಕಿಲ್ಲ. ಇದು ಸರ್ಕಾರದ ಕಾರ್ಯಕ್ಷಮತೆಗೆ ಸ್ಪಷ್ಟ ಉದಾಹರಣೆಯಾಗಿದೆ. ಮುಖ್ಯಮಂತ್ರಿಗಳೇ ಸೂಚಿಸಿದ ಕೆಲಸವೂ ಕೂಡ ಈ ಸರ್ಕಾರದಲ್ಲಿ ಆಗುವುದಿಲ್ಲ. ಬಹುಶಃ 40% ಕಮಿಷನ್ ಸಿಗದ ಕಾರಣಕ್ಕೆ ಸರ್ಕಾರದ ಕಾರ್ಯಕ್ಷಮತೆ ಕುಸಿದಿರಬಹುದು ಎನ್ನುವ ಅನುಮಾನ ಈ ಪ್ರಕರಣದಲ್ಲೂ ಗೋಚರಿಸುತ್ತಿದೆ ಎಂದುಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಾಮೇಗೌಡರು ಬದುಕಿರುವವರೆಗಾದರೂ ತಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡುವ ಸರ್ಕಾರದ ಭರವಸೆ ಈಡೇರಿದ್ದನ್ನು ನೋಡಲು ಸಾಧ್ಯವಾಗಲಿಲ್ಲ. ಈಗ ಕಾಮೇಗೌಡರ ನಿಧನದ ಬಳಿಕವಾದರೂ ಈ ಕುಟುಂಬಕ್ಕೆ ಸರ್ಕಾರದ ನೆರವು ಸಿಗಬೇಕು. ಆದ್ದರಿಂದ ಸರ್ಕಾರದ ಭರವಸೆ ಕೇವಲ ಪೇಪರ್ ಮೇಲೆ ಮಾತ್ರ ಉಳಿಯಬಾರದು. ಆದಷ್ಟು ಬೇಗ ಕಾಮೇಗೌಡರ ಕುಟುಂಬದ ವಿವರಗಳನ್ನು ಸರ್ಕಾರ ತರಿಸಿಕೊಂಡು ಅಗತ್ಯ ನೆರವನ್ನು ಒದಗಿಸಬೇಕು. ಒಬ್ಬ ಪುತ್ರನಿಗೆ ಸರ್ಕಾರಿ ಕೆಲಸ ನೀಡಬೇಕು. ಆರು ಬಾರಿ ಪತ್ರ ಬರೆದರೂ ವರದಿ ನೀಡದ ಮಂಡ್ಯ ಜಿಲ್ಲಾಧಿಕಾರಿಗಳು ಮತ್ತು ಇತರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.