ಪುನೀತ್‌ರಲ್ಲಿ ರಾಜ್ ಪ್ರತಿಬಿಂಬವನ್ನು ಕಂಡಿದ್ದ ಜನ
Team Udayavani, Oct 30, 2021, 5:55 AM IST
ಪುನೀತ್ ರಾಜ್‌ಕುಮಾರ್ ನಿಧನದಿಂದ ನನ್ನ ಮನೆಯ ಸದಸ್ಯರನ್ನೇ ಕಳೆದುಕೊಂಡಷ್ಟು ದುಃಖವಾಗಿದೆ. ಆ ಕುಟುಂಬದೊಂದಿಗೆ ಅಷ್ಟು ಆತ್ಮೀಯ ಸಂಬಂಧ ನನ್ನದು. ಹೀಗೊಂದು ಘಟನೆಯನ್ನು ಊಹಿಸಲೂ ಸಾಧ್ಯವಿಲ್ಲ, ಅವರ ಆರೋಗ್ಯ ಚೆನ್ನಾಗಿತ್ತು, ವಯಸ್ಸೂ ಚಿಕ್ಕದು, ಇಂತಹ ಹೊತ್ತಿನಲ್ಲಿ ಹೀಗಾಗಿರುವುದು ಬಹಳ ಆಘಾತಕಾರಿ, ಅಷ್ಟೇ ಅನಿರೀಕ್ಷಿತ. ಡಾ| ರಾಜ್‌ಕುಮಾರ್ ಕಾಲದಿಂದ ಹಿಡಿದು ಈಗ ಅವರ ಮಕ್ಕಳ ಕಾಲದಲ್ಲೂ ಆ ಕುಟುಂಬ ನನ್ನನ್ನು ಪ್ರೀತಿಸಿದೆ, ಗೌರವಿಸಿದೆ, ನಾನೂ ಅಷ್ಟೇ ಆದರ, ಗೌರವವನ್ನು ಹೊಂದಿದ್ದೇನೆ. ಮೊದಲಿನಿಂದಲೂ ನನಗೆ ರಾಜ್‌ಕುಮಾರ್ ಅಂದರೆ ಬಹಳ ಗೌರವ, ಪ್ರೀತಿ. ಸಾಹಿತಿಗಳು, ವಿದ್ಯಾವಂತರನ್ನು ಕಂಡರೆ ರಾಜ್ ಸೇರಿದಂತೆ ಅವರ ಇಡೀ ಕುಟುಂಬಕ್ಕೆ ಬಹಳ ಗೌರವವಿದೆ. ಹಾಗಾಗಿ ನನಗೆ ಪುನೀತ್‌ರೊಂದಿಗೆ ಸಹಜ ಒಡನಾಟವಿತ್ತು. ಮನೆಯ ಸದಸ್ಯರೊಬ್ಬರನ್ನು ಕಳೆದುಕೊಂಡಿರುವ ಇಂತಹ ಹೊತ್ತಿನಲ್ಲಿ; ಏನು ಪ್ರತಿಕ್ರಿಯಿಸ ಬೇಕೆಂದೂ ಗೊತ್ತಾಗುತ್ತಿಲ್ಲ.
ಒಬ್ಬ ನಟ, ತನ್ನ ನಟನಾಶಕ್ತಿಯ ಮೂಲಕ ಎಷ್ಟರ ಮಟ್ಟಿಗೆ ಸಮಾಜ ವನ್ನು ಆವರಿಸಿಕೊಳ್ಳುತ್ತಾನೋ, ಅಷ್ಟೇ ಎತ್ತರವನ್ನು ತಮ್ಮ ಸಾರ್ವಜನಿಕ ಬದುಕಿನಲ್ಲೂ ತಲುಪಬೇಕು. ಅಂಥ ದ್ದೊಂದು ಸದಭಿರುಚಿ, ಸಂಸ್ಕೃತಿ ಇರಬೇಕು. ರಾಜ್‌ಕುಮಾರ್ ಅವರಿಗೆ ಆ ವ್ಯಕ್ತಿತ್ವ ಇತ್ತು. ಅವರ ಮಗ ಪುನೀತ್‌ರ ಮೂಲಕ ಜನ ರಾಜ್‌ಕುಮಾರ್‌ರನ್ನೇ ಕಾಣುತ್ತಿದ್ದರು. ಅಂಥದ್ದೊಂದು ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದ್ದು. ನಾಯಕ ನಟರನ್ನು ಅನುಸರಿಸುವ ದೊಡ್ಡ ಯುವಪಡೆಯೇ ಇರುತ್ತದೆ. ಅಂಥವರು ಜನರಿಗೆ ನೀಡುವ ಸಂದೇಶ ಏನು ಎಂಬ ಪ್ರಶ್ನೆ ಎದ್ದಾಗ ಪುನೀತ್ ರಾಜ್‌ಕುಮಾರ್ ಅವರ ಮಹತ್ವ ಅರ್ಥ ವಾಗುತ್ತದೆ. ಅಷ್ಟು ಶುದ್ಧತೆಯನ್ನು ಸಾರ್ವಜನಿಕ ಬದುಕಿನಲ್ಲಿ ಕಾಯ್ದುಕೊಂಡಿದ್ದರು. ರಾಜ್‌ಕುಮಾರ್ ಅವರ ಮೂವರೂ ಮಕ್ಕಳು, ಸಾರ್ವಜನಿಕ ನಡವಳಿಕೆಯಲ್ಲಿ ವಿವಾದವನ್ನು ಹುಟ್ಟಿಸಲಿಲ್ಲ. ಇದು ಅನುಕರಣೀಯ, ನನ್ನಂಥವರು ಇಂಥದ್ದನ್ನು ನಾಯಕನಟರಿಂದ ನಿರೀಕ್ಷಿಸುತ್ತೇವೆ.
ಇದನ್ನೂ ಓದಿ:ಪುನೀತ್ ಸರ್ ಅತ್ಯಂತ ಸುಲಭವಾಗಿ ತಲುಪಬಹುದಾಗಿದ್ದ ಸೂಪರ್ ಸ್ಟಾರ್: ಮಣಿಕಾಂತ್ ಕದ್ರಿ
ರಾಜ್‌ಕುಮಾರ್ ಅವರು ಸಾರ್ವಜನಿಕವಾಗಿ ಬಹಳ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಅವರೆಂದೂ ಅದನ್ನು ತೋರಿಸಿಕೊಳ್ಳಲಿಲ್ಲ, ಅದರಿಂದ ಪ್ರಚಾರ ಪಡೆಯಲು ಬಯಸಲಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗ ಬಾರದು ಎಂದೇ ಅವರು ಹೇಳುತ್ತಿದ್ದರು. ಕರ್ನಾಟಕದ ಬಹುತೇಕ ಸರಕಾರಿ ರಂಗಮಂದಿರಗಳ ಬೆಳವಣಿಗೆಯಲ್ಲಿ ಮುಕ್ಕಾಲು ಪಾಲು ರಾಜ್‌ಕುಮಾರ್ ಕೊಡುಗೆಯಿದೆ. ಅದೇ ಗುಣ ಪುನೀತ್‌ರಲ್ಲಿದೆ. ಮೈಸೂರಿನಲ್ಲಿ ಶಕ್ತಿಧಾಮ ಎಂಬ ಕೇಂದ್ರವೊಂದಿದೆ. ಅದು ಅನಾಥ ಮಹಿಳೆಯರು, ಮಕ್ಕಳ ತಾಣ. ಅದನ್ನು ಪ್ರಾರಂಭಿಸಿದ್ದೇ ರಾಜ್‌ಕುಮಾರ್ ಮತ್ತು ಪಾರ್ವತಮ್ಮ. ಈ ಶಕ್ತಿಧಾಮಕ್ಕೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೂಲಕ ಬಂದ ಸಂಭಾವನೆಯ ಬಹುತೇಕ ಭಾಗವನ್ನು ಪುನೀತ್ ನೀಡಿದ್ದಾರೆ. ಅದನ್ನು ಅವರೆಲ್ಲೂ ಹೇಳಿಕೊಂಡಿಲ್ಲ. ಹಾಗೆಯೇ 50ಕ್ಕೂ ಅಧಿಕ ಸರಕಾರಿ ಶಾಲೆಗಳಿಗೆ ಆರ್ಥಿಕ ನೆರವು. ಕೆಲವಕ್ಕೆ 5 ಲ. ರೂ., ಕೆಲವಕ್ಕೆ 10 ಲಕ್ಷ ರೂ. ನೀಡಿದ್ದಾರೆ. ಕೆಲವು ಕಡೆ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವೆಲ್ಲ ಬಹಳ ದೊಡ್ಡ ಕೊಡುಗೆ.
ಹಾಗೆಯೇ ಪುನೀತ್ ಅವರು ಸದಭಿರುಚಿಯ ಚಿತ್ರಗಳನ್ನು ಮಾಡಿ ದ್ದಾರೆ. ಲಾಭದ ಉದ್ದೇಶವಿಟ್ಟುಕೊಂಡು ಮಾಡುವ ಸಿನೆ ಮಾಗಳಲ್ಲೂ ಎಷ್ಟು ಸದಭಿರುಚಿಯನ್ನು ತೋರಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರು ಸದಾ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದಾ ಕಲಿಯಲು ಬಯಸುತ್ತಿದ್ದರು. ಅವರು ತಾವೇ ನಿರ್ಮಾಣ ಸಂಸ್ಥೆ ಕಟ್ಟಿ ಅದರ ಮೂಲಕ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲು ಯತ್ನಿಸಿದ್ದರು. ಇವೆಲ್ಲದರ ಮೂಲಕ ಸಿನೆ ಮಾವನ್ನು ಕೇವಲ ಉದ್ಯಮದಂತೆ ನೋಡಲಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ತಪ್ಪುಗಳನ್ನು ಸರಿಯಾಗಿ ವಿಶ್ಲೇಷಿಸಿದಾಗ ಅದನ್ನು ಸ್ವೀಕರಿಸುವ ಗುಣವಿತ್ತು. ವೇದಿಕೆಯೊಂದರಲ್ಲಿ ನಾನು ಅವರ ಸಿನೆ ಮಾವನ್ನು ವಿಮರ್ಶಿಸಿದಾಗ, ಅದಕ್ಕೆ ಧನಾತ್ಮಕ ಸ್ಪಂದನೆ ನೀಡಿದರು. ಅಷ್ಟೊಂದು ವಿನಯವಂತಿಕೆ, ಎಲ್ಲರೊಂದಿಗೂ ಬೆರೆಯುವ ಗುಣ ಅವರದ್ದು.
-ಬರಗೂರು ರಾಮಚಂದ್ರಪ್ಪ, ಖ್ಯಾತ ಸಾಹಿತಿ, ಚಿತ್ರ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.