ಅಪ್ಪಾಜಿ ಬಯೋಪಿಕ್ ಮಾಡೋ ಆಸೆ ಇತ್ತು ಪುನೀತ್‌ಗೆ
Team Udayavani, Oct 30, 2021, 6:00 AM IST
ಒಳ್ಳೆಯ ಮೇಕರ್ ಸಿಕ್ಕರೆ ಅಪ್ಪಾಜಿ ಬಯೋಪಿಕ್‌ನಲ್ಲಿ ನಟಿಸಲು ರೆಡಿ…
– ಹಿಂದೊಮ್ಮೆ ರೂಪತಾರಾಕ್ಕೆ ಸಂದರ್ಶನ ನೀಡಿದ್ದ ಪುನೀತ್ ರಾಜಕುಮಾರ್ ಹೀಗೆ ಹೇಳಿದ್ದರು. “ಅಪ್ಪಾಜಿ ಬಯೋಪಿಕ್‌ನಲ್ಲಿ ನೀವು ನಟಿಸು ತ್ತೀರಾ?’ ಎಂದು ಕೇಳುವವರಲ್ಲಿ ಪುನೀತ್ ಮೂಲಕ ಅಣ್ಣಾವ್ರನ್ನು ತೆರೆಮೇಲೆ ನೋಡುವ ಆಸೆ ಎದ್ದು ಕಾಣುತ್ತಿತ್ತು. ಹಾಗೆಂದು ಪುನೀತ್ ಅವ ರಿಗೆ ರಾಜ್ ಬಯೋಪಿಕ್‌ನಲ್ಲಿ ನಟಿಸಬಾರದು ಎಂಬುದೇನಿರಲಿಲ್ಲ. ಆದರೆ, ಈ ತರಹದ ಸಿನೆಮಾ ಮಾಡಲು ಪೂರ್ವತಯಾರಿ ಹಾಗೂ ಸಿನೆಮಾ ಮಾಡುವ ಅಂಶಗಳು ತುಂಬಾ ಮುಖ್ಯವಾಗುತ್ತವೆ ಎಂಬುದು ಪುನೀತ್ ಮಾತಾಗಿತ್ತು. “ಅಪ್ಪಾಜಿ ಅವರ ಜೀವನ ಚರಿತ್ರೆ ಚಿತ್ರದಲ್ಲಿ ನನಗೂ ನಟಿಸುವ ಆಸೆ ಇದೆ. ಆದರೆ, ಒಳ್ಳೆಯ ಮೇಕರ್ ಸಿಗಬೇಕು. ಹಾಗೇನಾದರೂ ಒಳ್ಳೆಯ ಮೇಕರ್ ಸಿಕ್ಕರೆ ಖಂಡಿತವಾಗಿಯೂ ನಾನು ಅಪ್ಪಾಜಿ ಬಯೋಪಿಕ್‌ನಲ್ಲಿ ನಟಿಸಲು ರೆಡಿ. ನನಗೆ ಅಪ್ಪಾಜಿ ಯವರ ಬಯೋಪಿಕ್‌ನಲ್ಲಿ ನಟಿ ಸಲು ಯಾವುದೇ ಅಭ್ಯಂತರ ವಿಲ್ಲ. ಆದರೆ, ಬಯೋಪಿಕ್‌ನಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿರ ಬೇಕು. ಯಾವ ಅಂಶ ಇಟ್ಟು ಕೊಂಡು ಚಿತ್ರ ಮಾಡುತ್ತಾರೆ ಎನ್ನು ವುದು ಸಹ ಅಷ್ಟೇ ಮುಖ್ಯ. ದಿಗ್ಗಜರ ಕುರಿತ ಚಿತ್ರಗಳನ್ನು ಮಾಡುವಾಗ, ಅವರ ಕುರಿತು ಸಾಕಷ್ಟು ವಿಚಾರಗಳಿರುತ್ತವೆ. ಯಾವುದಾದರೊಂದು ಪ್ರಮುಖ ವಿಷಯವನ್ನು ಇಟ್ಟುಕೊಂಡು ಅದನ್ನು ತುಂಬಾ ಹೈಲೆಟ್ ಮಾಡುವಂತಹ ಒಳ್ಳೆಯ ಮೇಕರ್ ಸಿಕ್ಕರೆ ನಾನು ಅಪ್ಪಾಜಿಯವರ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ’ ಎಂದು ಹೇಳಿಕೊಂಡಿದ್ದರು.
ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ನಟ ಸಾರ್ವಭೌಮ ಚಿತ್ರದ ಹೊತ್ತಿ ನಲ್ಲಿ ಪತ್ರಿಕೆ ಜತೆ ಮಾತ ನಾಡಿದ್ದರು. “ನಟಸಾರ್ವ ಭೌಮ’ ಚಿತ್ರದ ಕಥೆ ಹಾಗೂ ಪಾತ್ರ ನನಗೆ ತುಂಬಾ ಹೊಸದು. ಆ ತರಹದ ಪಾತ್ರವನ್ನು ನಾನು ಯಾವತ್ತೂ ಮಾಡಿಲ್ಲ. ಸಿನೆಮಾ ನೋಡಿದ ಪ್ರೇಕ್ಷಕ ರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದು ಹೇಳಿದ್ದರು ಪುನೀತ್. “ನೀವ್ಯಾಕೆ ಪೌರಾಣಿಕ ಸಿನೆಮಾದಲ್ಲಿ ನಟಿಸುತ್ತಿಲ್ಲ ಮತ್ತು ನಟಿಸಬಾರದು’ ಎಂಬ ಪ್ರಶ್ನೆಯೂ ಆಗ ಹಲವರಿಂದ ಬರು ತ್ತಿತ್ತು. ಈ ಪ್ರಶ್ನೆಗೆ ಪುನೀತ್ ಉತ್ತರಿಸಿದ್ದು ಹೀಗೆ: “ಪೌರಾಣಿಕ ಸಿನೆ ಮಾ ಮಾಡಲು ತಂಡ ಮುಖ್ಯವಾಗುತ್ತದೆ. ಜೊತೆಗೆ ನಿರ್ದೇಶಕರಿಗೆ ನನ್ನ ಕೈಯಲ್ಲಿ ಪೌರಾಣಿಕ ಸಿನೆಮಾ ಮಾಡಿಸಬಹುದೆಂಬ ನಂಬಿಕೆ ಇರಬೇಕು. ನನಗೂ ಕೂಡ ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂಬ ವಿಶ್ವಾಸ ಬರಬೇಕು. ಆಗ ಮಾಡಲು ಸಾಧ್ಯ. ನನಗೂ ಪೌರಾಣಿಕ ಸಿನೆ ಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ’ ಎನ್ನುವ ಮೂಲಕ ಪೌರಾಣಿಕ ಸಿನೆ ಮಾದ ಒಲವಿನ ಬಗ್ಗೆ ಮಾತನಾಡಿದ್ದರು.
ಪುನೀತ್ ಒಂದರ ಹಿಂದೆ ಒಂದು ಸಿನೆ ಮಾ ಮಾಡುವ ಬಗ್ಗೆಯೂ ಮಾತನಾಡುತ್ತಾರೆ. “ನಾನು ಕಥೆ ಕೇಳಬೇಕು, ಒಂದರ ಹಿಂದೊಂದು ಚಿತ್ರ ಮಾಡಬೇಕು ಅಂತ ಮಾಡುತ್ತಿಲ್ಲ. ನಾನು ಹಲವರಿಗೆ ಸಿನೆ ಮಾ ಮಾಡೋಕೆ ಅವಕಾಶ ಕೊಡುತ್ತಿದ್ದೀನಿ, ಇಷ್ಟು ಚಿತ್ರಗಳನ್ನು ನಿರ್ಮಿಸುತ್ತೀನಿ ಅಂತ ಯಾವುದೇ ಡೆಡ್‌ಲೈನ್ ಹಾಕಿಕೊಂಡಿಲ್ಲ. ಒಳ್ಳೆಯ ಕಥೆ ಸಿಕ್ಕರೆ ಮಾತ್ರ ಸಿನೆ ಮಾ ನಿರ್ಮಾಣ ಮಾಡುತ್ತೀನಿ ಅಷ್ಟೇ. ಒಂದೊಳ್ಳೆಯ ಕಥೆ ಇದೆ ಎಂದು ಯಾರಾದರೂ ಹೇಳಬೇಕು ಮತ್ತು ಆ ಕಥೆ ಚೆನ್ನಾಗಿದ್ದರೆ ಮಾತ್ರ ನಿರ್ಮಾಣ ಮಾಡುತ್ತೀನಿ. ಇಲ್ಲವಾದರೆ ಇಲ್ಲ. ನನಗೆ ಒಳ್ಳೆಯ ಸಿನೆ ಮಾ ಮಾಡುವ ಆಸೆ ಹೊರತು, ಇಷ್ಟೇ ಮಾಡಬೇಕು, ಅಷ್ಟೇ ಮಾಡಬೇಕು ಅಂತಿಲ್ಲ. ಒಳ್ಳೆಯ ಕಥೆಗಳು ಸಿಕ್ಕರೆ ಒಟ್ಟಿಗೆ ಮೂರು ಸಿನೆ ಮಾಗಳನ್ನು ಸಹ ಮಾಡೋದಕ್ಕೆ ನಾನು ಸಿದ್ಧ’ ಎನ್ನುತ್ತಾರೆ ಪುನೀತ್ ರಾಜಕುಮಾರ್.
ರಾಜ್ ಫೌಂಡೇಶನ್‌ನಿಂದ ಶಿಕ್ಷಣ: ಡಾ| ರಾಜಕುಮಾರ್ ಅವರ “ರಾಜ್ ಫೌಂಡೇಶನ್’ ಸಾಕಷ್ಟು ಸಮಾಜಮುಖೀ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಇಡೀ ರಾಜ್‌ಕುಟುಂಬ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಪ್ರಸ್ತುತ ರಾಜ್ ಫೌಂಡೇಶನ್‌ನಲ್ಲಿ ಏನೇನು ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದರೆ, ಶಿಕ್ಷಣದ ಕಡೆಗೆ ಹೆಚ್ಚಿನ ಒತ್ತು ಎನ್ನುತ್ತಾರೆ. “ರಾಜ್ ಫೌಂಡೇಶನ್‌ನಿಂದ ಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚಿನ ನೀಡಲಾಗಿದೆ. ನಮ್ಮ ಕಡೆಯಿಂದ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ. ಇನ್ನು ನೇತ್ರದಾನದ ಕುರಿತು ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಈಗಾಗಲೇ 700ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆದಿವೆ. ಆ ಬಗ್ಗೆ ಹೆಚ್ಚು ಹೇಳಿಕೊಳ್ಳಲು ನಾನು ಇಷ್ಟಪಡೋದಿಲ್ಲ. ನಮ್ಮ ಕಡೆಯಿಂದ ಏನೇನೂ ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ’ ಎಂದು ಪುನೀತ್ ಹೇಳಿದ್ದರು.
ಸಿನೆಮಾ ಜನರಿಗೆ ತಲುಪಬೇಕು
ಪುನೀತ್ ಹೇಳುವಂತೆ ಬರೀ ಚಿತ್ರ ಮಾಡುವುದಷ್ಟೇ ಮುಖ್ಯ ಅಲ್ಲ, ಅದು ಬಿಡುಗಡೆಯಾಗಬೇಕು ಮತ್ತು ಜನರಿಗೂ ಇಷ್ಟವಾಗಬೇಕು. “ನಾನು ನಿರ್ಮಾಣ ಮಾಡಿದರೆ ಸ್ಯಾಟಲೈಟ್ ಹಕ್ಕುಗಳಿಂದ ಹಣ ಬರುತ್ತದೆ, ಅದರಿಂದ ಸೇಫ್ ಆಗುತ್ತದೆ ಎಂದು ನಂಬಿಕೊಂಡು ಚಿತ್ರ ಮಾಡಬೇಡಿ ಅಂತ ಮೊದಲೇ ಹೇಳಿಬಿಡುತ್ತೇನೆ. ಒಂದು ಸಿನೆಮಾ ಎಂದರೆ ಜನ ಬಂದು ನೋಡಬೇಕು. ಬರೀ ಪ್ರಶಸ್ತಿ ಬರೋದಷ್ಟೇ ಮುಖ್ಯ ಅಲ್ಲ. ನಮಗೆ ಜನ ಕೊಡೋ ರಿವಾರ್ಡು ಸಹ ಅಷ್ಟೇ ಮುಖ್ಯ. ರಿವಾರ್ಡು ಬಂದರೆ ಅವಾರ್ಡು ಬಂದಷ್ಟೇ ಸಂತೋಷ. ನಾನು ಯಾವುದೇ ಕಥೆ ಕೇಳಿದರೂ ನಿರ್ಮಾಪಕನಾಗಿ ಕೇಳುವುದಿಲ್ಲ, ಪ್ರೇಕ್ಷಕನಾಗಿ ಕೇಳುತ್ತೇನೆ. ಪ್ರೇಕ್ಷಕನಾಗಿ ಇಷ್ಟವಾದರೆ ಚಿತ್ರ ಮಾಡಲು ಮುಂದಾಗುತ್ತೇನೆ’ ಎಂದಿದ್ದರು ಪುನೀತ್.
ಎಲ್ಲರೂ ಗಮನಿಸ್ತಾ ಇದ್ದಾರೆ…
“ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಒಳ್ಳೆಯ ಬೆಳವಣಿಗೆಗಳು ನಡೆಯುತ್ತಿವೆೆ. ಮುಖ್ಯವಾಗಿ ಎಲ್ಲ ಭಾಷೆಯವರಿಗೂ ನಮ್ಮ ಚಿತ್ರದ ಬಗ್ಗೆ ಗೊತ್ತಾಗುತ್ತಿದೆ, ಮಾತನಾಡುತ್ತಿದ್ದಾರೆ. “ಕೆಜಿಎಫ್’ ಮೂಲಕ ದೊಡ್ಡ ಬಾಗಿಲು ತೆರೆದಿದೆ. ಈ ತರಹದ ಪ್ರಯತ್ನಗಳಾದಾಗ ಇನ್ನೊಂದಿಷ್ಟು ಮಂದಿಗೆ ಹೊಸ ಪ್ರಯೋಗ ಮಾಡಲು ವಿಶ್ವಾಸ ಬರುತ್ತದೆ’ ಎನ್ನುವ ಮೂಲಕ ಚಿತ್ರರಂಗದ ಬೆಳವಣಿಗೆ ಬಗ್ಗೆ ಖುಷಿಯಾಗುತ್ತಾರೆ.
ಕನ್ನಡ ಓದೋಕೆ ಬರಲ್ಲ ಎಂದಾಗ ನೋವಾಗಿತ್ತಂತೆ!
ಹಿಂದೊಮ್ಮೆ ಪುನೀತ್ ರಾಜ್ ಕುಮಾರ್‌ಗೆ ಕನ್ನಡ ಬರೆ ಯೋಕೆ ಬರಲ್ಲ ಅಂಥ ಸುದ್ದಿಯಾಗಿತ್ತು. ಈ ಬಗ್ಗೆ ಪುನೀತ್ ಬೇಸರಗೊಂಡಿದ್ದರು. ಇದಕ್ಕೆ ಕಾರಣ, ಇದು ಬರೆಯೋ ವಿಚಾರನಾ ಎಂಬ ಕಾರಣಕ್ಕಾಗಿ ಬೇಸರವಾಗಿತ್ತಂತೆ. ಎಲ್ಲರಿಗೂ ಒಂದು ಮಟ್ಟದ ನೈತಿಕತೆ ಇರಬೇಕಲ್ವಾ? ಆ ಘಟನೆ ಆಗಿದ್ದು ನನ್ನ ಸಂಬಂಧಿಕರ ಮನೇಲಿ. ಆಗ ಅಲ್ಲಿ ಏನು ನಡೀತೋ ಏನು ಮಾತುಕತೆ ಆಯಿತು ನಂಗೇ ನೆನಪಿಲ್ಲ. ಅದನ್ನಿಟ್ಟುಕೊಂಡು, ಒಂದು ಗಾಳಿಸುದ್ದಿ ಕೇಳಿಕೊಂಡು ಸುದ್ದಿ ಮಾಡಬೇಕಾಗಿತ್ತಾ? ನನಗೆ ಭಾಷೆ ಬರಲ್ಲ ಅಂತ ಪ್ರೂವ್ ಮಾಡೋದಕ್ಕೆ ಯಾರಿಗೆ ಹಕ್ಕಿದೆ? ನಾನು ಚೆನ್ನೈಯಲ್ಲೂ ಸ್ಕೂಲಿಗೆ ಹೋಗಿಲ್ಲ, ಬೆಂಗಳೂರಲ್ಲೂ ಹೋಗಿಲ್ಲ. ಎಲ್ಲಿ ಸ್ಕೂಲಿಂಗ್ ಮಾಡಿದೆ ಅನ್ನೋದು ಬೇರೆ ಯಾರಿಗೂ ಮುಖ್ಯ ಅಲ್ಲ. ಇಷ್ಟಕ್ಕೂ ನನಗೆ ಕನ್ನಡ ಬರುತ್ತೋ ಇಲ್ಲವೋ ಅಂತ ಯಾರಾದರೂ ಯಾಕೆ ಕೇಳಬೇಕು. ಎಷ್ಟು ಬೇಕೋ ಅಷ್ಟು ಬರುತ್ತೆ. ಅಷ್ಟು ಸಾಕು. ಪುಸ್ತಕ ಬರೆಯೋ ಪಂಡಿತರಿಗೆ ಬೇಕಾದಷ್ಟು ಬರದೇ ಇರಬಹುದು. ನಾನೇನೂ ಪುಸ್ತಕ ಬರೆಯೋದಿಲ್ಲವಲ್ಲ?
ಸಾಮಾಜಿಕ ಜಾಲತಾಣಗಳ
ಬಗ್ಗೆ ಏನನ್ನಿಸುತ್ತದೆ?
– ಅವು ತಂತ್ರಜ್ಞಾನದ ಫಲ. ಅವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಅದೊಂದು ಮಾಧ್ಯಮ ಅಷ್ಟೇ. ಅದರಲ್ಲಿರೋರು ಟೈಂಪಾಸ್‌ಗೆ ಮೆಸೇಜ್ ಹಾಕ್ತಾರೋ ಅಥವಾ ಯೋಚನೆ ಮಾಡಿ ಹಾಕ್ತಾರೋ ಗೊತ್ತಿಲ್ಲ. ನಾನಂತೂ ಫೇಸ್‌ಬುಕ್‌ನಲ್ಲಿ ಇಲ್ಲ. ಹಾಗಾಗಿ ನಾನು ಆ ಬಗ್ಗೆ ಹೆಚ್ಚು ಮಾತಾಡೋದು ಕಷ್ಟ. ಅಲ್ಲಿ ಹೆಣದ ಜತೆಗೆ ಸೆಲ್ಫಿ ತೆಗೆಸಿಕೊಳ್ಳೋರೂ ಇದ್ದಾರೆ. ಹಾಗಿರುವಾಗ ನಾವೇನೋ ಮಾತಾಡೋದು ತಪ್ಪಾಗುತ್ತದೆ. ಅದು ಅವರವರ ಅಭಿಪ್ರಾಯ. ಅದು ಸರಿಯೋ, ತಪ್ಪೋ ಹೇಳ್ಳೋದು ಕಷ್ಟ. ಅವರಿಗೆ ಅನ್ನಿಸಿದ್ದು ಹೇಳ್ತಾರೆ. ಸಿನೆಮಾ ಬಗ್ಗೆ ಮಾತಾಡ್ತಾರೆ. ಮಾತಾಡ್ಲಿ ಬಿಡಿ. ಬೇಡ ಅಂತ ಹೇಳ್ಳೋಕೆ ನಾನು ಯಾರು?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.