Rain; ಮತ್ತೆ 10 ಜಿಲ್ಲೆಗಳಲ್ಲಿ ಮಳೆ ಆರ್ಭಟ: 2 ಸಾವು
Team Udayavani, May 13, 2024, 12:49 AM IST
ಹುಬ್ಬಳ್ಳಿ: ಮಲೆನಾಡು, ಉತ್ತರ ಕರ್ನಾಟಕದ 10 ಜಿಲ್ಲೆಗಳಲ್ಲಿ ರವಿವಾರ ಮತ್ತೆ ಮುಂಗಾರುಪೂರ್ವ ಮಳೆ ಆರ್ಭಟಿಸಿದ್ದು, ಮರ ಬಿದ್ದು ಓರ್ವ ಮಹಿಳೆ ಸಹಿತ ನಾಲ್ವರು ಮೃತಪಟ್ಟಿದ್ದಾರೆ. ಸುಮಾರು 250ಕ್ಕೂ ಹೆಚ್ಚು ಎಕ್ರೆ ಬಾಳೆ ಕೃಷಿ ನೆಲಕಚ್ಚಿದೆ. ಹಲವೆಡೆ ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಕಟ್ಟಿನಮನೆ ಗ್ರಾಮದಲ್ಲಿ ಸವಿತಾ (48) ಎಂಬವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಮೈಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ಅಡವಿ ಮಲ್ಲಾಪುರ ಗ್ರಾಮದ ನಿವಾಸಿ ಚೌಡಪ್ಪ ಅಲಿಯಾಸ್ ಮಲ್ಲಪ್ಪ (31) ಸಿಡಿಲಿಗೆ ಬಲಿಯಾಗಿದ್ದಾರೆ.
ಕೊಪ್ಪ ತಾಲೂಕಿನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೂ ಮರ ಬಿದ್ದಿದ್ದು, ಅದರಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದರಿಂದ ಬಾಳೆಹೊನ್ನೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬೇವೂರ ಗ್ರಾಮದಲ್ಲಿ ಸಿಡಿಲು ಬಡಿದು ಪ್ರಕಾಶ ವಗ್ಗರ (21) ಮೃತಪಟ್ಟಿದ್ದಾರೆ. ಇನ್ನೊಬ್ಬ ಯುವಕ ಗಾಯಗೊಂಡಿದ್ದಾರೆ. ಕಮಲಾಪುರ ತಾಲೂಕಿನಲ್ಲಿ ಸಿಡಿಲು ಬಡಿದು ಅಪ್ಪರಾಯ ಭೀಮಾ ರಾಯ ಕಲಮೂಡ (43) ಸಾವನ್ನಪ್ಪಿದ್ದಾರೆ.
ನೆಲಕಚ್ಚಿದ ಬಾಳೆ ಬೆಳೆ
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ಮಳೆ ಜತೆ ರಭಸವಾದ ಗಾಳಿಗೆ ಸುಮಾರು 250ಕ್ಕೂ ಹೆಚ್ಚು ಎಕರೆ ಬಾಳೆ ಬೆಳೆ ನೆಲಕಚ್ಚಿದೆ. ಹೊಸೂರು ಗ್ರಾಮದ ಎರಬಯಲು ಮಾಗಣಿ ಪ್ರದೇಶದಲ್ಲಿ 9 ಮನೆಗಳಿಗೆ ಹಾನಿಯಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ 30ಕ್ಕೂ ಹೆಚ್ಚು ಎಕ್ರೆ ಪದೇಶದಲ್ಲಿ ಬೆಳೆದಿದ್ದ ಬಾಳೆ, ನಿಂಬೆ, ದಾಳಿಂಬೆ ಸಹಿತ ಹಲವು ಬೆಳೆಗಳು ನೆಲಕಚ್ಚಿವೆ. ಇಂಗಳಗಿ ಗ್ರಾಮದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಶೆಡ್ ಹಾರಿ ಹೋಗಿದೆ.
ಹಲವು ಜಿಲ್ಲೆಗಳಲ್ಲಿ ಮಳೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಹಳಿಯಾಳ, ದಾಂಡೇಲಿಯಲ್ಲಿ ಧಾರಾಕಾರ ಮಳೆಯಾಗಿದೆ. ಧಾರವಾಡ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆಯಾಗಿದ್ದರಿಂದ ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ. ಶಿವಮೊಗ್ಗ, ರಾಯಚೂರು, ಯಾದಗಿರಿ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಗದಗ, ಹಾವೇರಿ, ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಗಿಲ್ಲ.
ಇನ್ನು, ಮಂಡ್ಯ,ಕೋಲಾರ, ಹಾಸನ, ತುಮಕೂರಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ತುಮಕೂರು ಜಿಲ್ಲೆ ಹುಳಿಯಾರಿನ ಹನುಮಂತನಹಳ್ಳಿಯಲ್ಲಿ ಸಿಡಿಲು ಬಡಿದು 20 ಕುರಿಗಳು ಸಾವನ್ನಪ್ಪಿವೆ. ರವಿವಾರವೂ ಹಾಸನದ ಸಕಲೇಶಪುರ ಮತ್ತು ಚನ್ನರಾಯಪಟ್ಟಣ ತಾಲೂಕಿನ ವಿವಿಧಡೆ ಸಾಧಾರಣ ಮಳೆಯಾಗಿದೆ.
ಸಿಡಿಲು ಬಡಿದು 20 ಕುರಿಗಳು ಸಾವು
ಹುಳಿಯಾರು: ತಾಲೂಕಿನ ಕಂದಿಕೆರೆ ಹೋಬಳಿ ರಾಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹನುಮಂತನ ಹಳ್ಳಿಯಲ್ಲಿ ರವಿವಾರ ಸಿಡಿಲು ಬಡಿದು 20 ಕುರಿಗಳು ಸಾವನ್ನಪ್ಪಿವೆ. ಹನುಮಂತನಹಳ್ಳಿಯ ಜಯಣ್ಣ ಎಂಬವರು ಎಂದಿನಂತೆ ತಮ್ಮ 55 ಕುರಿಗಳನ್ನು ಮೇಯಿಸಲು ಊರಿನ ಸಮೀಪದ ಜಮೀನಿಗೆ ಹೋಗಿದ್ದಾರೆ. ಈ ವೇಳೆ ಮಳೆಗಾಳಿ ಆರಂಭವಾಗಿದ್ದು, ಜಮೀನಿನ ಪಕ್ಕದ ರಸ್ತೆ ಬದಿಯಲ್ಲಿದ ಹುಣಸೆಮರಗಳ ಕೆಳಗೆ ಕುರಿಗಳ ಜತೆಗೆ ನಿಂತಿದ್ದರು. ಇದೇ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಜಯಣ್ಣ ಅದೃಷ್ಟವಶಾತ್ ಪಾರಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.