Rain: ಮಾಯದಂಥ ಮಳೆ ಮಾಯ: ಬಿತ್ತಿದ ಬೆಳೆ ಕೈಗೆ ಬಾರದ ಆತಂಕ
ಹಿಂಗಾರು ಕೂಡ ವಿಫಲವಾಗುವ ಭೀತಿ
Team Udayavani, Aug 13, 2023, 12:38 AM IST
ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಯಿಂದಾಗಿ ಒಂದೆಡೆ ಆಹಾರಧಾನ್ಯ, ತರಕಾರಿ ಸಹಿತ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಇನ್ನೊಂದೆಡೆ ಬಿತ್ತಿರುವ ಬೆಳೆಯೂ ಸೊರಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುವ ಆತಂಕ ಎದುರಾಗಿದೆ.
ತಡವಾಗಿ ರಾಜ್ಯ ಪ್ರವೇಶಿಸಿದ ಮುಂಗಾರು ಆರಂಭದಿಂದಲೂ ಸೋತಿದೆ. ಸಾಧಾರಣವಾಗಿ ಮೇ ತಿಂಗಳಿನಿಂದ ಸೆಪ್ಟಂಬರ್‌ವರೆಗೆ ಮುಂಗಾರು ಮಳೆ ಸುರಿಯುವುದು ವಾಡಿಕೆ. ಆದರೆ ಜುಲೈ ತಿಂಗಳಿನಲ್ಲಿ ಸುರಿದ ಮಾಯದಂಥ ಮಳೆ ಬಳಿಕ ಎಲ್ಲಿ ಮಾಯವಾಯಿತು ಎಂಬುದೇ ತಿಳಿಯದಂತಾಗಿದೆ. ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆ ಎಂದೇ ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ವಾತಾವರಣ ಬಿಸಿಯೇರುತ್ತಿದ್ದು, ಮಳೆಗಾಲದಲ್ಲೂ ಬೇಸಗೆಯ ಅನುಭವ ನೀಡುತ್ತಿದೆ.
ರಾಜ್ಯದ 11 ಜಿಲ್ಲೆಗಳ 63 ತಾಲೂಕಿನ 290 ಹೋಬಳಿಗಳಲ್ಲಿ ಮಳೆ ಕೊರತೆ ಇದ್ದು, 14 ಹೋಬಳಿಗಳಲ್ಲಿ ತೀವ್ರ ಮಳೆ ಕೊರತೆ ಇದೆ. ಸುಮಾರು 23 ಜಿಲ್ಲೆಗಳಲ್ಲಿ ತೇವಾಂಶದ ಕೊರತೆ ಇದೆ. ಎಲ್‌ನಿನೋ ಪ್ರಭಾವದಿಂದ ಹಿಂಗಾರು ಮಳೆ ಅಭಾವವೂ ತಲೆದೋರುವ ಸಾಧ್ಯತೆಗಳಿದ್ದು, ಮಳೆಯಾಶ್ರಿತ ಕೃಷಿಕರು ಬಿತ್ತನೆ ಕಾರ್ಯಕ್ಕೆ ಬಿಡುವು ಕೊಡುವುದೇ ಒಳಿತು ಎಂದು ತಜ್ಞರು ಅಭಿಪ್ರಾಯಪಟ್ಟಿ ದ್ದಾ ರೆ. ಇದು ರೈತರನ್ನು ಕಂಗಾಲಾಗಿಸಿದ್ದು, ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ.
ವಾಡಿಕೆಗಿಂತ ಕಡಿಮೆ ಮಳೆ
ರಾಜ್ಯದಲ್ಲಿ ಜೂ. 1ರಿಂದ ಈವರೆಗೆ ವಾಡಿಕೆ ಪ್ರಕಾರ ಸರಾಸರಿ 514 ಮಿ.ಮೀ. ಮಳೆ ಬರಬೇಕಿತ್ತು. ಆದರೆ 453 ಮಿ.ಮೀ. ಮಳೆಯಾಗಿದ್ದು, ಅಂದಾಜು ಶೇ. 12ರಷ್ಟು ಕೊರತೆ ಆಗಿದೆ. ಜೂನ್ ತಿಂಗಳಲ್ಲಿ 199 ಮಿ.ಮೀ. ಆಗಬೇಕಿದ್ದ ಮಳೆ ಕೇವಲ 87 ಮಿ.ಮೀ. ಅಷ್ಟೇ ಆಗಿತ್ತು. ಈ ಮೂಲಕ ಶೇ. 56ರಷ್ಟು ಮಳೆ ಕೊರತೆ ಉಂಟಾಗಿದೆ. ಜುಲೈ ತಿಂಗಳಿನಲ್ಲಿ ಮಾತ್ರ ವಾಡಿಕೆಗಿಂತ ಶೇ. 3ರಷ್ಟು ಹೆಚ್ಚುವರಿ ಮಳೆಯಾಗಿದೆ. ಜು. 30ರಿಂದ ಆ. 5ರ ವರೆಗೆ 60 ಮೀ.ಮೀ. ಆಗಬೇಕಿದ್ದರೂ 22 ಮಿ.ಮೀ. ಮಳೆಯಾಗಿದ್ದು, ಶೇ. 63ರಷ್ಟು ಕೊರತೆ ಉಂಟಾಗಿದೆ. ಜತೆಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಸಕಾಲದಲ್ಲಿ ಬೆಳೆಗಳಿಗೆ ನೀರುಣಿಸಲು ಕೂಡ ಸಾಧ್ಯವಾಗಿಲ್ಲ.
ಬಿತ್ತನೆಯಲ್ಲೂ ಹಿನ್ನಡೆ
ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದಕ್ಕಾಗಿ 5.55 ಲಕ್ಷ ಟನ್ ಬಿತ್ತನೆ ಬೀಜ ಬೇಕಾಗಬಹುದೆಂದು ಅಂದಾಜಿಸಿದ್ದ ಕೃಷಿ ಇಲಾಖೆ 6 ಲಕ್ಷ ಟನ್ ಬೀಜ ಸಂಗ್ರಹಿಸಿಟ್ಟಿತ್ತು. ಆದರೆ 3 ಲಕ್ಷ ಟನ್ ವಿತರಣೆಯಾಗಿದ್ದು, 3 ಲಕ್ಷ ಟನ್ ಹಾಗೇ ಉಳಿದಿದೆ. ವಾಡಿಕೆಯಂತೆ ಈ ವೇಳೆಗೆ ಕನಿಷ್ಠ 58.30 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ 56.70 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜುಲೈ ತಿಂಗಳಿನಲ್ಲಿ ಅತಿವೃಷ್ಟಿಯಿಂದ ಸ್ವಲ್ಪ ಬೆಳೆಹಾನಿಯಾಗಿದ್ದರೆ ಸಕಾಲಕ್ಕೆ ತಕ್ಕ ಮಳೆ ಆಗದೆಯೂ ಬೆಳೆ ನಾಶವಾಗಿದೆ. ಹೋಬಳಿ ಮಟ್ಟದಿಂದ ಮಳೆ ನಷ್ಟದ ಅಂದಾಜು ಮಾಡಬೇಕಿದ್ದು, ಈ ಪ್ರಕ್ರಿಯೆ ಮುಗಿದ ಬಳಿಕ ಜಿಲ್ಲೆಗಳಿಂದ ಸರಕಾರಕ್ಕೆ ಬೆಳೆ ನಷ್ಟದ ಮಾಹಿತಿ ಸಲ್ಲಿಕೆಯಾಗಬೇಕಿದೆ. ಅನಂತರವಷ್ಟೇ ಎಷ್ಟು ಪ್ರಮಾಣದ ಬೆಳೆ ನಷ್ಟವಾಗಿದೆ ಎಂಬುದರ ನಿಖರ ಮಾಹಿತಿ ಸಿಗಲಿದೆ.
ಕರಾವಳಿಯಲ್ಲಿ ಮುಂಗಾರು ದುರ್ಬಲವಾಗಿದೆ. ಮುಂಗಾರು ಟ್ರಫ್ ಹಿಮಾಲಯದ ಕಡೆ ಚಲಿಸಿದ್ದು, ಈ ಭಾಗದಲ್ಲಿ ಮೋಡ ಉತ್ಪತ್ತಿಯಾಗುವುದಿಲ್ಲ. ಪರಿಣಾಮವಾಗಿ ಮಳೆ ಕ್ಷೀಣಿಸಿದೆ. ಸದ್ಯದ ಮುನ್ಸೂಚನೆಯಂತೆ ಆ. 18ರ ವರೆಗೆ ಭಾರೀ ಮಳೆಯಾಗದು. ಆ. 18ರ ಬಳಿಕ ತಿಂಗಳಾಂತ್ಯದವರೆಗೆ ಮಳೆ ಸುರಿಯಬಹುದು. ಗರಿಷ್ಠ ಉಷ್ಣಾಂಶಲ್ಲಿ 1ರಿಂದ 2 ಡಿ.ಸೆ. ಏರಿಯಾಗುವ ಸಾಧ್ಯತೆ ಇದೆ.
– ಪ್ರಸಾದ್, ಭಾರತೀಯ ಹವಾಮಾನ ಇಲಾಖೆ ಅಧಿಕಾರಿ
ಕರಾವಳಿಗೆ ಕೈಕೊಟ್ಟ ಮಳೆ- ದ.ಕ.ದಲ್ಲಿ ಶೇ. 24, ಉಡುಪಿಯಲ್ಲಿ ಶೇ. 19 ಕೊರತೆ
ಮಂಗಳೂರು: ಕರಾವಳಿಯಲ್ಲಿ ಸಾಮಾನ್ಯ ವಾಗಿ ಮಳೆಗಾಲದಲ್ಲಿ ವಾರಗಟ್ಟಲೆ ಧೋ… ಎಂದು ಮಳೆ ಸುರಿಯುತ್ತದೆ. ಆದರೆ ಈ ವರ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇನ್ನೂ ವಾಡಿಕೆಯಷ್ಟು ಮಳೆ ಸುರಿದಿಲ್ಲ.
ಮಳೆಗಾಲ ಆರಂಭಗೊಂಡು ಎರಡೂವರೆ ತಿಂಗಳು ಕಳೆದಿದ್ದು, ಮುಂಗಾರು ಕ್ಷೀಣ ವಾಗಿಯೇ ಇದೆ. ಪೂರ್ವ ಮುಂಗಾರು ನಿರೀಕ್ಷೆ ಹುಸಿಗೊಳಿಸಿದ್ದರೂ ಮುಂಗಾರು ಮಳೆ ಚೆನ್ನಾಗಿ ಸುರಿಯಬಹುದು ಎಂದು ಅಂದಾಜಿಸಲಾಗಿತ್ತು. ಆ ನಿರೀಕ್ಷೆಯೂ ಹುಸಿಯಾಗಿದ್ದು, ಸದ್ಯ ಕರಾವಳಿಯ ಎಲ್ಲ ತಾಲೂಕುಗಳಲ್ಲಿ ಮಳೆ ಕೊರತೆ ಇದೆ.
ಈ ಬಾರಿ ವಿಳಂಬವಾಗಿ ಅಂದರೆ
ಜೂ. 8ರಂದು ಮುಂಗಾರು ಕರಾವಳಿಯನ್ನು ಪ್ರವೇಶಿಸಿದ್ದು, ಆರಂಭದ ಒಂದೆರಡು ದಿನ ಮಾತ್ರ ಭಾರೀ ಮಳೆಯಾಗಿತ್ತು. ಬಳಿಕ ಕ್ಷೀಣಿಸಿತ್ತು. ಜುಲೈ ತಿಂಗಳಾಂತ್ಯಕ್ಕೆ ಬಿರುಸಿನ ಮಳೆಯಾಗಿ ಅಪಾರ ನಾಶ-ನಷ್ಟ, ಜೀವ ಹಾನಿ ಉಂಟಾಗಿತ್ತು. ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿ ಬಿರುಸಿನ ಮಳೆಯಾಗುತ್ತದೆ. ಆದರೆ ಈಗ ಎರಡು ವಾರಗಳಿಂದ ಕರಾವಳಿಯಲ್ಲಿ ಮಳೆಯೇ ಸುರಿಯುತ್ತಿಲ್ಲ.
ಎರಡು ವಾರಗಳಿಂದ ಭಾರೀ ಸೆಕೆ!
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎರಡು ವಾರಗಳಿಂದ ಉರಿಬಿಸಿಲು ಮತ್ತು ಭಾರೀ ಸೆಕೆಯ ವಾತಾವರಣ ಇದೆ. ಕೆಲವು ದಿನಗಳಿಂದ ಮಳೆಯ ತೀವ್ರತೆಯೂ ಕಡಿಮೆಯಾಗಿದ್ದು, ಮುಂಗಾರು ದುರ್ಬಲಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ ಸದ್ಯಕ್ಕೆ ಭಾರೀ ಮಳೆಯಾಗುವ ಮುನ್ಸೂಚನೆಯಿಲ್ಲ. ಮುಂದಿನ ಕೆಲವು ದಿನಗಳ ಕಾಲ ಸೆಕೆ ಮುಂದುವರಿಯುವ ಸಾಧ್ಯತೆ ಇದ್ದು, ಗರಿಷ್ಠ ಉಷ್ಣಾಂಶ 2ರಿಂದ 3 ಡಿ.ಸೆ. ಏರಿಕೆಯಾಗುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಮಳೆಗಾಲ ಕೊನೆಗೊಳ್ಳುವ ದಿನಗಳಲ್ಲಿ ಮುಂಜಾನೆ, ರಾತ್ರಿ ವೇಳೆ ಕಾಣಿಸಿಕೊಳ್ಳುವ ಮಂಜು ಕವಿದ ವಾತಾವರಣ ಈಗಲೇ ಕಾಣಿಸಿ ಕೊಂಡಿದೆ. ಇದು ಕೂಡ ಆತಂಕಕಾರಿ ಬೆಳವಣಿಗೆ ಎನ್ನುತ್ತಾರೆ ಹವಾಮಾನ ವಿಶ್ಲೇಷಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.