Recruitment: ಕೊನೆಗೂ ಮರಾಠಿ ಶಾಲೆಗಳಿಗೆ ನಿವೃತ್ತ ಕನ್ನಡ ಶಿಕ್ಷಕರ ನೇಮಕ! ಏನಿದು ಸಮಸ್ಯೆ?
Team Udayavani, Jun 28, 2024, 6:15 AM IST
ಶಿಗ್ಗಾವಿ: ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ ಸಮಸ್ಯೆ ಕುರಿತು ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಶಾಸಕ ರೇವಂತ ನೇತೃತ್ವದಲ್ಲಿ ಅಲ್ಲಿನ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಉಭಯ ರಾಜ್ಯಗಳ ಸಹಕಾರದಿಂದ 15 ದಿನಗಳೊಳಗೆ ಸುಮಾರು 110 ನಿವೃತ್ತ ಕನ್ನಡ ಶಿಕ್ಷಕರನ್ನು ಮರು ನಿಯೋಜನೆ ಮಾಡಿ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಲಾಗಿದೆ ಎಂದು ಗಡಿ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಂತೆ ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಗಳಿಗೆ ತೆರಳಿ ಪರಿಶೀಲಿಸಲಾಗಿದೆ. ಜತ್ ತಾಲೂಕಿನ ಶಾಸಕ ಸಾವಂತ ನೇತೃತ್ವದಲ್ಲಿ ಅಲ್ಲಿನ ಡಿಡಿಪಿಐ, ಬಿಇಒ, ತಹಶೀಲ್ದಾರ್ ಸೇರಿ ಇತರ ಅಧಿ ಕಾರಿಗಳ ಸಭೆ ಮಾಡಲಾಗಿದೆ. ಕನ್ನಡ ಭಾಷೆಯ ಬಗ್ಗೆ ಮಲತಾಯಿ ಧೋರಣೆ ತೋರುತ್ತಿರುವ ಪ್ರದೇಶಗಳಲ್ಲಿ ಅಲ್ಲಿನ ಅ ಧಿಕಾರಿಗಳು, ಹೋರಾಟಗಾರರು ಮತ್ತು ಸ್ಥಳೀಯ ಶಾಸಕರನ್ನು ಒಳಗೊಂಡಂತೆ ಸಭೆ ಮಾಡಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಗಳ ಸಹಕಾರದಿಂದ ತಾತ್ಕಾಲಿಕ ಪರಿಹಾರ ಕೈಗೊಳ್ಳಲಾಗಿದೆ ಎಂದರು.
ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ 300ಕ್ಕೂ ಅಧಿಕ ಕನ್ನಡ ಶಾಲೆಗಳಲ್ಲಿ 1ರಿಂದ 12ನೇ ತರಗತಿವರೆಗೆ 40 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಆದರೆ ಮಹಾರಾಷ್ಟ್ರ ಸರಕಾರ ಕನ್ನಡ ಶಾಲೆಗಳಿಗೆ ಸುಮಾರು 25 ಮರಾಠಿ ಶಿಕ್ಷಕರನ್ನು ನೇಮಕ ಮಾಡಿದ್ದರಿಂದ ಸಮಸ್ಯೆಯಾಗಿದೆ. ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ 10ಕ್ಕೂ ಹೆಚ್ಚು ಮರಾಠಿ ಶಿಕ್ಷಕರು “ನಮಗೆ ಕನ್ನಡ ಬರುವುದಿಲ್ಲ, ಆದ್ದರಿಂದ ನಮ್ಮನ್ನು ಮರಾಠಿ ಮಾಧ್ಯಮ ಶಾಲೆಗಳಿಗೆ ವರ್ಗಾಯಿಸಿ’ ಎಂದು ಅಲ್ಲಿನ ಶಿಕ್ಷಣ ಇಲಾಖೆಗೆ ಈಗಾಗಲೇ ಮನವಿ ಸಲ್ಲಿಸಿದ್ದು ಕಂಡು ಬಂದಿದೆ ಎಂದರು.
ಗಡಿ ರಾಜ್ಯಗಳ ಸರಕಾರಗಳು ತಮ್ಮ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೆ ಕೊಠಡಿ, ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡುತ್ತಿವೆ. ಆದರೆ ಗಡಿಭಾಗದ 6 ರಾಜ್ಯಗಳ, 19 ಜಿಲ್ಲೆ, 63 ತಾಲೂಕುಗಳಲ್ಲಿ ಒಂದಿಲ್ಲೊಂದು ಸಮಸ್ಯೆಯನ್ನು ಕನ್ನಡಿಗರು ಎದುರಿಸುತ್ತಲೇ ಇದ್ದಾರೆ. ಅವರ ಮೇಲಾಗುತ್ತಿರುವ ಮಲತಾಯಿ ಧೋರಣೆ ವಿರುದ್ಧ ಗಟ್ಟಿಯಾಗಿ ನಿಂತು ಪೂರಕವಾದ ಅನುದಾನಗಳನ್ನು ನೀಡಿ ಗಡಿ ಪ್ರದೇಶದ ಕನ್ನಡಿಗರ ಹಿತ ಕಾಯಲು ಪ್ರಯತ್ನಿಸಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.