SIT ಅಧಿಕಾರಿಗಳಿಗೆ ತಲೆನೋವಾದ ಎಚ್.ಡಿ.ರೇವಣ್ಣ
Team Udayavani, May 6, 2024, 6:30 AM IST
ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಶನಿವಾರ ಹಾಗೂ ರವಿವಾರ ಎರಡು ದಿನಗಳ ಕಾಲ ಸಿಐಡಿ ಕಚೇರಿಯಲ್ಲೇ ರಾತ್ರಿ ಕಳೆದಿದ್ದಾರೆ. ಮತ್ತೂಂದೆಡೆ ಎಸ್‌ಐಟಿ ಅಧಿಕಾರಿಗಳು ರೇವಣ್ಣರಿಂದ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಕೆದಕಲು ಶುರುಮಾಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಶನಿವಾರ ರೇವಣ್ಣ ಅವರನ್ನು ಬಂಧಿಸಿ ಸಿಐಡಿ ಕಚೇರಿಗೆ ಕರೆತಂದ ಬಳಿಕ ಅವರ ಹೇಳಿಕೆ ದಾಖಲಿಸಿಕೊಳ್ಳಲು ಎಸ್‌ಐಟಿ ಪ್ರಯತ್ನಿಸುತ್ತಲೇ ಇದೆ. ಆದರೆ ವಿಚಾರಣೆಗೆ ರೇವಣ್ಣ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ರವಿವಾರ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ರೇವಣ್ಣ ಅವರನ್ನು 4 ದಿನ ವಶಕ್ಕೆ ಪಡೆದ ಬಳಿಕ ಮಹಿಳೆ ಅಪಹರಣ ಪ್ರಕರಣ, ಹೊಳೆನರಸೀಪುರದಲ್ಲಿ ದಾಖಲಾದ ಲೈಂಗಿಕ ಕಿರುಕುಳ ಪ್ರಕರಣ, ಹಾಸನದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದ ಒಂದೊಂದೇ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ. ಆದರೆ ರೇವಣ್ಣ ಮಾತ್ರ ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡದಿರುವುದೇ ಎಸ್‌ಐಟಿಗೆ ತಲೆನೋವಾಗಿದೆ. ಹೀಗಾಗಿ ಸೋಮವಾರ ಬೆಳಗ್ಗಿನಿಂದ ಸಂಜೆವರೆಗೆ ರೇವಣ್ಣ ಅವರನ್ನು ಕೂಲಂಕಷವಾಗಿ ವಿಚಾರಣೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದಾರೆ.
ರವಿವಾರ ನಡೆದ ಬೆಳವಣಿಗೆಗಳೇನು?
ಶನಿವಾರ ರಾತ್ರಿ ವಶಕ್ಕೆ ಪಡೆದ ಬಳಿಕ ರವಿವಾರ ಸಂಜೆವರೆಗೆ ಸಿಐಡಿ ಕಚೇರಿಯಲ್ಲಿದ್ದ ರೇವಣ್ಣ ಅವರನ್ನು ಸಂಜೆ ಶಿವಾಜಿ ನಗರದಲ್ಲಿರುವ ಲೇಡಿಕರ್ಜನ್ ಬೌರಿಂಗ್ ಆಸ್ಪತ್ರೆಗೆ ಎಸ್‌ಐಟಿ ತನಿಖಾಧಿಕಾರಿಗಳು ಕರೆ ತಂದರು. ಈ ವೇಳೆ ಮಾಧ್ಯಮದವರ ಜತೆಗೆ ಮಾತನಾಡಲು ಮುಂದಾದ ರೇವಣ್ಣ ಅವರನ್ನು ಸರಿಯಾಗಿ ಮಾತನಾಡಲು ಬಿಡದೆ ಎಸ್‌ಐಟಿ ಅಧಿಕಾರಿಗಳು ಬಲವಂತವಾಗಿ ಆಸ್ಪತ್ರೆಯೊಳಗೆ ಕರೆದೊಯ್ದರು. ಇದರಿಂದ ಅಸಮಾಧಾನಗೊಂಡರೂ ರೇವಣ್ಣ ಅನಿವಾರ್ಯವಾಗಿ ಎಸ್‌ಐಟಿ ಅಧಿಕಾರಿಗಳಿಗೆ ತಲೆಬಾಗಬೇಕಾಯಿತು. ಅನಂತರ ಬೌರಿಂಗ್ ಆಸ್ಪತ್ರೆಯ ನಾಲ್ವರು ವೈದ್ಯರ ತಂಡದಿಂದ ರೇವಣ್ಣಗೆ ಬಿಪಿ, ಶುಗರ್, ಇಸಿಜಿ ತಪಾಸಣೆ ನಡೆಸಲಾಯಿತು. ಏನಾದರೂ ಸಮಸ್ಯೆ ಇದೆಯಾ ಎಂದು ವೈದ್ಯರು ರೇವಣ್ಣ ಅವರನ್ನು ವಿಚಾರಿಸಿದರು. ಬಳಿಕ ಹೃದಯ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ತಜ್ಞರಿಂದ ತಪಾಸಣೆ ನಡೆಸಲಾಯಿತು. ಈ ಪ್ರಕ್ರಿಯೆ ಬಳಿಕ ಬೌರಿಂಗ್ ಆಸ್ಪತ್ರೆಯಿಂದ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ಸ್ವಲ್ಪ ಹೊತ್ತು ವಾದ-ಪ್ರತಿವಾದಗಳು ನಡೆದವು. ಅಂತಿಮವಾಗಿ ರೇವಣ್ಣ ಅವರನ್ನು ನ್ಯಾಯಾಲಯವು ಎಸ್‌ಐಟಿ ವಶಕ್ಕೆ ನೀಡಿತು. ಕೋರಮಂಗಲದಿಂದ ಸಿಐಡಿ ಕಚೇರಿಗೆ ಕರೆತಂದ ಎಸ್‌ಐಟಿ ತಂಡವು ಸ್ವಲ್ಪ ಕಾಲ ವಿಚಾರಣೆ ನಡೆಸಿತು.
ಬಿಗಿ ಭದ್ರತೆ ಒದಗಿಸಿದ ಖಾಕಿ
ಎಚ್.ಡಿ. ರೇವಣ್ಣ ಪ್ರಭಾವಿ ನಾಯಕ ಹಾಗೂ ಶಾಸಕರಾಗಿರುವ ಕಾರಣ ಈಗಾಗಲೇ ಸಿಐಡಿ ಕಚೇರಿ ಮುಂದೆ ಬಿಗಿ ಭದ್ರತೆ ಒದಗಿಸಲಾಗಿದೆ. ಜತೆಗೆ ಕೋರಮಂಗಲದ ನ್ಯಾಯಾಧೀಶರ ಮನೆ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.