ಅಘೋಷಿತ 300 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆ ಐಟಿ ದಾಳಿಯಲ್ಲಿ ಪತ್ತೆ
Team Udayavani, Aug 6, 2017, 7:00 AM IST
ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಗೊಳಗಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ
ಸದಾಶಿವನಗರದ “ಕೆಂಕೇರಿ’ ನಿವಾಸ ಹಾಗೂ ದೆಹಲಿಯ ಸಫªರ್‌ಜಂಗ್ ಎನ್‌ಕ್ಲೇವ್, ಕುಟುಂಬ ಸದಸ್ಯರು ಹಾಗೂ
ಆಪ್ತರ ನಿವಾಸಗಳಲ್ಲಿ 300 ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ದಾಖಲೆ ಪತ್ತೆಯಾಗಿವೆ.
ಈ ಪೈಕಿ 100 ಕೋಟಿ ರೂ.ಗಳಷ್ಟು ಮೊತ್ತದ ಆಸ್ತಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬ ಸದಸ್ಯರ
ಹೆಸರಿನಲ್ಲಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ. ನಾಲ್ಕು ದಿನಗಳ ಕಾಲ ನಡೆದ ನಿರಂತರ ಶೋಧದಲ್ಲಿ
ಅಪಾರ ಪ್ರಮಾಣದ ಆಸ್ತಿಯ ದಾಖಲೆ, ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದ್ದು, ಆ ಪೈಕಿ 300 ಕೋಟಿ ರೂ. ಮೊತ್ತದ್ದು ಆದಾಯ ತೆರಿಗೆ ಇಲಾಖೆಗೆ ಈ ಮುನ್ನ ಘೋಷಿಸಿರಲಿಲ್ಲ. ಅದಕ್ಕೆ ತೆರಿಗೆಯನ್ನೂ ಪಾವತಿಸುತ್ತಿರಲಿಲ್ಲ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈಬಗ್ಗೆ ಆದಾಯ ತೆರಿಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.
ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬ ಸದಸ್ಯರ ನಿವಾಸ, ಅವರ ಒಡೆತನದ ಶಿಕ್ಷಣ ಸಂಸ್ಥೆ, ಮೈಸೂರು ಮತ್ತು
ಹಾಸನದಲ್ಲಿ ಆಪ್ತರು ಹಾಗೂ ಸಂಬಂಧಿಕರಿಗೆ ಸೇರಿದ ನಿವಾಸ ಸೇರಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ದಾಳಿ ನಡೆಸಿದ
ಸಂದರ್ಭದಲ್ಲಿ 15 ಕೋಟಿ ರೂ. ನಗದು, ಚಿನ್ನಾಭರಣ ಹಾಗೂ ಆಸ್ತಿಗಳ ದಾಖಲೆ ಪತ್ರ ವಶಪಡಿಸಿಕೊಳ್ಳಲಾಗಿದೆ
ಎಂದು ಹೇಳಲಾಗಿದೆ.
ದಾಳಿ ಅಂತ್ಯ, ದಾಖಲೆ ಪರಿಶೀಲನೆ: ಈ ಮಧ್ಯೆ, ಬುಧವಾರ ಮುಂಜಾನೆ ಆರಂಭವಾದ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸ ಹಾಗೂ ಅವರ ಮಾಲೀಕತ್ವದ ಸಂಸ್ಥೆಗಳು, ಮೈಸೂರು, ಹಾಸನ ಸೇರಿ ವಿವಿಧ ಸ್ಥಳಗಳಲ್ಲಿರುವ ಸಂಬಂಧಿಕರು, ಆಪ್ತರ ಮನೆಗಳಲ್ಲಿನ ನಾಲ್ಕು ದಿನಗಳ ಐಟಿ ದಾಳಿ ಅಂತ್ಯಗೊಂಡಿದ್ದು, ಇದೀಗ ದಾಖಲೆಗಳ ಪರಿಶೀಲನೆ ಪ್ರಾರಂಭವಾಗಿದೆ. ಶೋಧ ನಡೆಸಿದ ಸಂದರ್ಭದಲ್ಲಿ ಪತ್ತೆಯಾದ ದಾಖಲೆ, ಹಣ, ಚಿನ್ನಾಭರಣ ಹಾಗೂ ಮತ್ತಿತರ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆಯ ಪ್ರಧಾನ ಕಚೇರಿಗೆ ತಲುಪಿಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ದಾಳಿ ವೇಳೆ ನೂರಾರು ಕೋಟಿ ರೂ. ಮೊತ್ತದ ಆಸ್ತಿ ಪತ್ರಗಳು, ವಹಿವಾಟಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಹಾಗೂ ಅಪಾರ ಪ್ರಮಾಣದ ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಶನಿವಾರ ಬೆಳಗ್ಗೆ 10.30ರ ತನಕವೂ ಶೋಧ ನಡೆಸಿದ 10ಕ್ಕೂ ಅಧಿಕ ಅಧಿಕಾರಿಗಳ ತಂಡ ಅಂತಿಮವಾಗಿ ಶಿವಕುಮಾರ್ ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದ ಎಲ್ಲಾ ದಾಖಲೆ ಪತ್ರ ಸೇರಿ ವಿವಿಧ ವಸ್ತುಗಳ ಬಗ್ಗೆ ಪಂಚನಾಮೆ ನಡೆಸಿದರು.
ಅಗತ್ಯ ದಾಖಲೆಗಳನ್ನು ಕಾರಿನಲ್ಲಿ ಹಾಕಿಕೊಂಡು ಭದ್ರತಾ ಸಿಬ್ಬಂದಿ ಜತೆ ಕಚೇರಿಯತ್ತ ಸಾಗಿದರು. ದಾಳಿ ನಡೆಸಿದ
ಎಲ್ಲಾ ಸ್ಥಳಗಳಲ್ಲಿಯೂ ದೊರೆತ ಆಸ್ತಿ ದಾಖಲೆಗಳು, ರಿಯಲ್ ಎಸ್ಟೇಟ್ ವ್ಯವಹಾರದ ದಾಖಲೆಗಳು, ಕಂಪನಿಗಳಲ್ಲಿ ಹೂಡಿಕೆ, ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ನಡೆಸುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಮ್ಮ ಬಳಿಯಿರುವ ದಾಖಲೆಗಳ ಜತೆಗೆ ಶಿವಕುಮಾರ್ ಅವರ ಆಸ್ತಿ ಮೌಲ್ಯ, ಅವರ ಆದಾಯದ ಮೂಲ, ಕುಟುಂಬ ಸದಸ್ಯರ ಆದಾಯ ಮೂಲ, ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಷೇರುಗಳನ್ನು ತಾಳೆ ನೋಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.