ಶಾಲೆಗಳು ಚಿಂತಾಜನಕ; ವಿದ್ಯುತ್, ನೀರು, ಉತ್ತಮ ಕಟ್ಟಡ, ಶೌಚಾಲಯ ಇಲ್ಲವೇ ಇಲ್ಲ
11 ಸಾವಿರ ಸರಕಾರಿ ಶಾಲೆಗಳಲ್ಲಿ "ಡಿ' ಗ್ರೇಡ್ ಮೂಲಸೌಕರ್ಯ
Team Udayavani, Jun 7, 2022, 7:05 AM IST
ಬೆಂಗಳೂರು: ರಾಜ್ಯದ 11 ಸಾವಿರ ಶಾಲೆ ಗಳು ಕುಡಿಯುವ ನೀರು, ಶೌಚಾಲಯ, ಉತ್ತಮ ಕಟ್ಟಡ, ಕಾಂಪೌಂಡ್, ವಿದ್ಯುತ್ ಮತ್ತಿತರ ಹಲವು ಸೌಕರ್ಯಗಳಿಲ್ಲದೆ ಸೊರಗಿವೆ. ಹೀಗಾಗಿ ಅವುಗಳಲ್ಲಿ “ಡಿ’ ದರ್ಜೆಯ ಸೌಲಭ್ಯಗಳಿವೆ. ಕೊರೊನಾ ಅನಂತರ ಎರಡು ವರ್ಷಗಳ ಬಳಿಕ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗಿದೆ. ಆದರೆ ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಶಾಲೆಗಳು ಆರಂಭವಾಗಿದೆ ಬಿಟ್ಟರೆ ಮಕ್ಕಳಿಗೆ ಸಮವಸ್ತ್ರ ದೊರೆತಿಲ್ಲ. ಈ ಬಾರಿ ಸೈಕಲ್ ಮತ್ತು ಶೂಗಳನ್ನು ನೀಡಿಲ್ಲ. ಸಮರ್ಪಕವಾಗಿ ಪಠ್ಯ ಪುಸ್ತಕ ಗಳು ಸಿಕ್ಕಿಲ್ಲ. ಇವುಗಳ ಜತೆಗೆ ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿಯೂ ಇಲಾಖೆ ಮುಂದಾಗದಿರುವುದ ರಿಂದ ಮಕ್ಕಳಿಗೆ ಸಮಸ್ಯೆಯಾಗಿದೆ.
23 ಸಾವಿರ ಶಾಲೆಗಳಲ್ಲಿ ಮೈದಾನವಿಲ್ಲ
ರಾಜ್ಯದ ಅರ್ಧಕ್ಕರ್ಧ ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ರಾಜ್ಯದಲ್ಲಿ ಪ್ರಸ್ತುತ 47,395 ಶಾಲೆಗಳಿದ್ದು, ಈ ಪೈಕಿ 23,022 ಶಾಲೆಗಳಲ್ಲಿ ಆಟದ ಮೈದಾನವಿಲ್ಲ ಎಂಬ ದತ್ತಾಂಶವನ್ನು ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ಸಾಧನಾ ಟ್ರ್ಯಾಕಿಂಗ್ ವ್ಯವಸ್ಥೆ (ಸ್ಯಾಟ್) ನೀಡಿದೆ.
881 ಶಾಲೆಗಳಿಗೆ ವಿದ್ಯುತ್ ಇಲ್ಲ!
ರಾಜ್ಯದ ಸುಮಾರು 881 ಶಾಲೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಸರಕಾರ ಕಡು ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದೆ. ಆದರೆ ಇಷ್ಟು ಶಾಲೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬುದು ವಿಪರ್ಯಾಸ.
ಅದೇ ರೀತಿ 5,140 ಶಾಲೆಗಳಲ್ಲಿ ಕಾಂಪೌಂಡ್ ಇಲ್ಲ. ಸುಮಾರು 200ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ. 893 ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯದ ಸುಮಾರು 10,725 ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳಿಲ್ಲ ಎಂಬುದು ತಿಳಿದು ಬಂದಿದೆ.
ಪ್ರಯೋಜನವಾಗದ ಯೋಜನೆ
ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಪ್ರತೀ ಬಾರಿಯೂ ಅನುದಾನದ ಕೊರತೆ ಎದುರಾಗುತ್ತದೆ. ಆದರೆ ಕೇಂದ್ರ ಸರಕಾರವು ಆರಂಭಿಸಿರುವ “ಮನೆ ಮನೆಗೆ ಗಂಗಾ’ ಯೋಜನೆಯ ಅಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯು ಸರಕಾರಿ ಶಾಲೆಗಳಿಗೂ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಆದರೂ ಹಲವು ಸರಕಾರಿ ಶಾಲೆಗಳಿಗೆ ಇನ್ನೂ ಈ ಮೂಲ ಸೌಕರ್ಯದ ಭಾಗ್ಯ ದೊರೆತಿಲ್ಲ.
ಸರಕಾರಿ ಶಾಲೆಗಳಿಗೆ
ಮೂಲ ಸೌಕರ್ಯ ಕಲ್ಪಿಸಲು
600 ಕೋಟಿ ರೂ. ಮೀಸಲಿಡಲಾಗಿದೆ. ಅಗತ್ಯ ಇರುವ ಕಡೆ ಪ್ರಸ್ತಾವ ಸಲ್ಲಿಸಿ ಅನುದಾನ ಪಡೆದುಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆ ಅಡಿ ಸರಕಾರಿ ಶಾಲೆಗಳಿಗೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡಲಾಗುತ್ತದೆ.
–ಡಾ| ಆರ್. ವಿಶಾಲ್ ,
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.