ದ್ವಿತೀಯ ಪಿಯು ಕನ್ನಡ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ
Team Udayavani, Mar 17, 2019, 12:26 AM IST
ಬೆಂಗಳೂರು: ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ನೀಡಿರುವ ಮಾಹಿತಿಯ ಮೇರೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಡರಾತ್ರಿ ಪ್ರಶ್ನೆಪತ್ರಿಕೆ ಪರಿಶೀಲಿಸಿ, ಸೋರಿಕೆ ಆಗದೇ ಇರುವ ಬಗ್ಗೆ ಖಚಿತಪಡಿಸಿದ್ದಾರೆ.
ಶನಿವಾರ ನಡೆದ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಶುಕ್ರವಾರ ತಡರಾತ್ರಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಸಿಸಿಬಿ ಪೊಲೀಸರಿಂದ ಮಾಹಿತಿ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ಕಾಪಿ ಹರಿದಾಡುತ್ತಿದೆ ಎಂದು ಪೊಲೀಸರು ವಿವರ ನೀಡಿದ್ದರು. ಅದರಂತೆ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪಿಯು ಇಲಾಖೆ ನಿರ್ದೇಶಕರು ಮತ್ತು ಪರೀಕ್ಷಾ ವಿಭಾಗದ ನಿರ್ದೇಶಕರು ಪ್ರಶ್ನೆ ಪತ್ರಿಕೆ ಶೇಖರಿಸಿಡುವ ಸ್ಟ್ರಾಂಗ್ ರೂಂಗೆ ಪ್ರವೇಶ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಕಾಪಿ ಮತ್ತು ವಿದ್ಯಾರ್ಥಿಗಳಿಗೆ ನೀಡಬೇಕಾದ ಪ್ರಶ್ನೆ ಪತ್ರಿಕೆಯನ್ನು ತುಲನೆ ಮಾಡಿದ್ದಾರೆ. ಎರಡಕ್ಕೂ ಹೋಲಿಕೆಯಾಗದೇ ಇರುವುದರಿಂದ ಯಾವುದೇ ಆತಂಕ ಎದುರಾಗಿಲ್ಲ. ಆದರೂ ಇಲಾಖೆಯಿಂದ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇಲಾಖೆ ನಿರ್ದೇಶಕ ಡಾ| ಪಿ.ಸಿ. ಜಾಫರ್ ಮತ್ತು ತಂಡ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಪ್ರಶ್ನೆ ಪತ್ರಿಕೆಯನ್ನು ಕ್ರಾಸ್ ಚೆಕ್ ಮಾಡಿದರು. ಯಾವುದೇ ರೀತಿಯಲ್ಲಿ ಸೋರಿಕೆ ಆಗಿಲ್ಲ ಎಂಬುದು ಬಳಿಕ ದೃಢಪಟ್ಟಿತು ಎಂದೂ ಮೂಲಗಳು ತಿಳಿಸಿವೆ.
ಪ್ರಶ್ನೆ ಪತ್ರಿಕೆ ಕ್ಲಿಷ್ಟತೆ ಪರಿಶೀಲಿಸಲು ಸಮಿತಿ
ದ್ವಿತೀಯ ಪಿಯುಸಿ ಜೀವಶಾಸ್ತ್ರ ಪರೀಕ್ಷೆ ಕ್ಲಿಷ್ಟವಾಗಿತ್ತು ಎಂದು ವಿದ್ಯಾರ್ಥಿಗಳು ಸಹಾಯವಾಣಿಗೆ ನೀಡಿರುವ ದೂರಿನನ್ವಯ ಸತ್ಯಾಸತ್ಯತೆ ಪರಿಶೀಲಿಸಲು ತಜ್ಞರ ಸಮಿತಿ ರಚನೆ ಮಾಡಲಾಗಿದೆ.
ಜೀವಶಾಸ್ತ್ರ ಪರೀಕ್ಷೆಗೆ ನೀಡಿರುವ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯದ ಹೊರಗಿನ ಅಂಶಗಳ ಆಧಾರದಲ್ಲಿ ಪ್ರಶ್ನೆ ನೀಡಲಾಗಿದೆಯೇ ಅಥವಾ ಪಠ್ಯದಿಂದಲೇ ಪ್ರಶ್ನೆಗಳನ್ನು ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ತ್ರಿಸದಸ್ಯರ ಸಮಿತಿ ರಚನೆ ಮಾಡಿದ್ದೇವೆ. ಕೃಪಾಂಕ ನೀಡಬೇಕೇ ಅಥವಾ ಬೇರೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸಮಿತಿ ವರದಿ ನೀಡಿದ ಬಳಿಕವಷ್ಟೇ ತೀರ್ಮಾನಿಸಬೇಕಾಗುತ್ತದೆ ಎಂದು ಪದವಿಪೂರ್ವ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ನಕಲಿ ಪ್ರಶ್ನೆ ಪತ್ರಿಕೆ ಹರಿಬಿಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಪ್ರಶ್ನೆ ಪತ್ರಿಕೆ ಖಜಾನೆಯಲ್ಲಿಟ್ಟು 24 x 7 ಲೈವ್ ಸ್ಟ್ರೀಮಿಂಗ್ ಮಾಡಲಾಗುವುದರಿಂದ ಅದೆಲ್ಲವನ್ನು ಪರಿಶೀಲಿಸಿದ್ದೇವೆ. ಯಾವುದೇ ರೀತಿಯಲ್ಲೂ ಸೋರಿಕೆ ಆಗಿಲ್ಲ.
-ಡಾ| ಪಿ.ಸಿ.ಜಾಫರ್, ನಿರ್ದೇಶಕ, ಪಿಯು ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.