ಕೆಎಸ್‌ಆರ್‌ಪಿಯಿಂದ ಯುವತಿಯರಿಗೆ ಸ್ವರಕ್ಷಣ ತರಬೇತಿ
Team Udayavani, Aug 12, 2021, 6:30 AM IST
ಬೆಂಗಳೂರು: ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್‌ಆರ್‌ಪಿ) ಪಡೆಯಿಂದ ರಾಜ್ಯದ ಸರಕಾರಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಾಗೂ ಆಸಕ್ತ ಯುವತಿಯರಿಗೆ “ಶಸ್ತ್ರ ರಹಿತ ಸ್ವಯಂ ರಕ್ಷಣ'(ಅನ್ ಆರ್ಮ್ಡ್ ಕಂಬ್ಯಾಟ್ ಫಾರ್ ಸೆಲ್ಫ್ ಡಿಫೆನ್ಸ್) ತರಬೇತಿ ನೀಡಲಾಗುತ್ತಿದೆ. ಕೆಎಸ್‌ಆರ್‌ಪಿಯ ಮಹಿಳಾ ಅಧಿಕಾರಿ ಹಾಗೂ ಸಿಬಂದಿ ವರ್ಗದವರು 13ರಿಂದ 25 ವರ್ಷದ ಹೆಣ್ಣು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.
ಕೆಎಸ್‌ಆರ್‌ಪಿಯ ಬೆಳಗಾವಿಯ ಎರಡನೇ ಬೆಟಾಲಿಯನ್ ಮತ್ತು ಬೆಂಗಳೂರಿನ 9ನೇ ಬೆಟಾಲಿಯನ್‌ನಲ್ಲಿ ಮಹಿಳಾ ಅಧಿಕಾರಿ-ಸಿಬಂದಿ ಇದ್ದು, ಈ ಪೈಕಿ 60-70 ಮಂದಿಯನ್ನು ಆಯ್ಕೆ ಮಾಡಿ, ಅವರಿಗೆ ಇಲಾಖೆಯ ಸೆಲ್ಫ್ ಡಿಫೆನ್ಸ್‌ನಲ್ಲಿ ನುರಿತ ಮಹಿಳಾ ಅಧಿಕಾರಿಯೊಬ್ಬರಿಂದ ಆರೇಳು ತಿಂಗಳುಗಳಿಂದ ಕಠಿನ ತರಬೇತಿ ನೀಡಲಾಗಿತ್ತು. ಈ ತಂಡದವರು ಇನ್ನು ತರಬೇತಿ ನೀಡಲಿದ್ದಾರೆ.
ರಾಜ್ಯದಲ್ಲಿ 14 ಕೆಎಸ್‌ಆರ್‌ಪಿ ಪಡೆಗಳಿದ್ದು, ಪ್ರತಿ ಪಡೆಗೆ ಎರಡು ಜಿಲ್ಲೆಗಳನ್ನು ಸೇರಿಸಲಾಗಿದೆ. ಹಾಗೆಯೇ ಪ್ರತಿ ಜಿಲ್ಲೆಗೆ ನಾಲ್ಕು ಅಧಿಕಾರಿ-ಸಿಬಂದಿಯನ್ನು ನೇಮಿಸಲಾಗಿದೆ. ಅವರು ಆಯಾ ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ, ಪೊಲೀಸ್ ಶಾಲೆ ಮಕ್ಕಳು, ಅಧಿಕಾರಿ-ಸಿಬಂದಿ ಮಕ್ಕಳು, ಆಸಕ್ತ ಯುವತಿಯರಿಗೆ ನಿಗದಿತ ಸಮಯದಲ್ಲಿ ತರಬೇತಿ ನೀಡುತ್ತಿದ್ದಾರೆ. 12 ದಿನಗಳಿಂದ ತರಬೇತಿ ನೀಡುತ್ತಿದ್ದು, 20 ದಿನಗಳಿಗೆ ಒಂದು ಕೋರ್ಸ್ ಮುಗಿಸಲಿದ್ದಾರೆ ಎಂದು ಕೆಎಸ್‌ಆರ್‌ಪಿಯ ಹಿರಿಯ ಅಧಿಕಾರಿಗಳು ತಿಳಿಸಿದರು.
ವಾರದಲ್ಲಿ ಒಂದೆರಡು ದಿನ :
ಶಾಲಾ-ಕಾಲೇಜು ಆರಂಭವಾದ ಬಳಿಕ ವಾರಕ್ಕೆ ಒಂದು ಅಥವಾ ಎರಡು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಎಸ್‌ಪಿಸಿ ಜತೆಗೆ ಯುಎಸಿ :
ನ್ಯಾಷನಲ್ ಕೆಡೆಟ್ ಕ್ರಾಪ್ಸ್(ಎನ್‌ಸಿಸಿ) ಮಾದರಿಯಲ್ಲಿಯೇ ನಾಲ್ಕು ವರ್ಷಗಳಿಂದ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಕೆಎಸ್‌ಆರ್‌ಪಿ ಸ್ಟುಡೆಂಟ್ ಪೊಲೀಸ್ ಕೆಡೆಟ್(ಎಸ್‌ಪಿಸಿ) ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲಾ ಸರಕಾರಿ, ಕೇಂದ್ರಿಯ ಮತ್ತು ನವೋದಯ ಮತ್ತು ಬೆಂಗಳೂರಿನ ಬಿಬಿಎಂಪಿ ಶಾಲಾ-ಕಾಲೇಜುಗಳ 13-25 ವರ್ಷದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಾರಕ್ಕೆ ಎರಡು ದಿನ ತರಬೇತಿ ನೀಡುತ್ತಿದ್ದಾರೆ. ಅಂತಹ ಸ್ಥಳದಲ್ಲಿಯೇ ಈಗ “ಶಸ್ತ್ರರಹಿತ ಸ್ವಯಂ ರಕ್ಷಣ'(ಅನ್ ಆರ್ಮಡ್ ಕೊಬ್ಯಾಟ್ “ಯುಎಸಿ’ ಅಥವಾ ಸೆಲ್ಫ್ ಡಿಫೆನ್ಸ್) ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿರಲಿವೆ ತರಬೇತಿಯಲ್ಲಿ? : 20 ಮಂದಿಗೆ ಇಬ್ಬರು ತರಬೇತುದಾರರನ್ನು ನೇಮಿಸಲಾಗಿದೆ. ಮೊದಲ ಎರಡು ದಿನ ಮಕ್ಕಳನ್ನು ಮಾನಸಿಕವಾಗಿ ಸದೃಢರನ್ನಾಗಿಸಲಾಗುತ್ತದೆ. ಬಳಿಕ ವ್ಯಾಯಾಮ, ಕರಾಟೆಯ ಪ್ರಾಥಮಿಕ ಕಸರತ್ತು, ಪಂಚ್, ಕಿಕ್, ಬ್ಲಾಕ್ ಮಾಡುವುದು ಮತ್ತು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದಾಗ ಯಾವ ರೀತಿ ರಕ್ಷಣೆ, ಸರಗಳ್ಳತನಕ್ಕೆ ಯತ್ನಿಸಿದಾಗ ಹೇಗೆ ನಿಭಾಯಿಸಬೇಕು ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ವಿದ್ಯಾರ್ಥಿನಿಯರು, ಯುವತಿಯರಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಯಾವುದೇ ಸಂದರ್ಭದಲ್ಲಿ ಸ್ವಯಂ ರಕ್ಷಿಸಿಕೊಳ್ಳಲು ತರಬೇತಿ ನೀಡುತ್ತಿದ್ದೇವೆ. -ಆಲೋಕ್ ಕುಮಾರ್, ಕೆಎಸ್‌ಆರ್‌ಪಿ ಎಡಿಜಿಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.