ಪ್ರತ್ಯೇಕ ಪ್ರಕರಣ: ಕೆರೆಯಲ್ಲಿ ಮುಳುಗಿ ಆರು ಮಂದಿ ಸಾವು
Team Udayavani, Oct 9, 2019, 3:04 AM IST
ಚಿಕ್ಕಮಗಳೂರು/ಹಾಸನ: ಪ್ರತ್ಯೇಕ ಪ್ರಕರಣದಲ್ಲಿ ಈಜಲು ಹೋಗಿದ್ದ ಆರು ಮಂದಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ ಗ್ರಾಮದಲ್ಲಿ ಸೋಮವಾರ ಆಯುಧ ಪೂಜೆ ಮುಗಿಸಿಕೊಂಡು ಕೆಂದಿನಕಟ್ಟೆ ಕೆರೆಯಲ್ಲಿ ಈಜಲು ಹೋಗಿದ್ದ ನಗರದ ಹೌಸಿಂಗ್ ಬೋರ್ಡ್ ನಿವಾಸಿಗಳಾದ ಜೀವಿತ್(14), ಮುರುಳಿ ಕಾರ್ತಿಕ್(15) ಮತ್ತು ಚಿರಾಗ್(16) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮುರಳಿ ಕಾರ್ತಿಕ್ ಮತ್ತು ಜೀವಿತ್ ನಗರದ ಬಿಜಿಎಸ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದರು. ಚಿರಾಗ್ ಸಾಯಿ ಏಂಜೆಲ್ಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸೋಮವಾರ ಸಂಜೆಯೇ ಮುರಳಿ ಕಾರ್ತಿಕ್ ಹಾಗೂ ಜೀವಿತ್ ಮೃತದೇಹ ಪತ್ತೆಯಾಗಿತ್ತು. ಆದರೆ, ಚಿರಾಗ್ ದೇಹ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ನಂತರ ಮಂಗಳವಾರ ಬೆಳಗ್ಗೆ ಆತನ ದೇಹ ಪತ್ತೆಯಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆ ಆಲೂರು ತಾಲೂಕಿನ ಹುಣಸುವಳ್ಳಿ ಗ್ರಾಮದ ಸಮೀಪ ಹಾದುಹೋಗಿರುವ ಯಗಚಿ ನದಿಯಲ್ಲಿ ಈಜಲು ಹೋಗಿದ್ದ ಹುಣಸುವಳ್ಳಿ ನಿವಾಸಿ ರತನ್ (21), ದೊಡ್ಡಕಣಗಾಲು ಗ್ರಾಮದ ಭೀಮರಾಜ್ (24) ಮತ್ತು ಮನು (22) ಎಂಬುವವರು ಮುಳುಗಿ ಮೃತಪಟ್ಟಿದ್ದಾರೆ. ಆಯಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಯುವಕರು ಯಗಚಿ ನದಿಯಲ್ಲಿ ಈಜಲು ತೆರಳಿದ್ದರು. ಮೃತದೇಹಕ್ಕಾಗಿ ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹುಣಸುವಳ್ಳಿಯ ಸಂಜಯ್ ಮತ್ತು ದೊಡ್ಡಕಣಗಾಲು ನಿವಾಸಿ ಧನು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರತ್ಯೇಕ ವಿದ್ಯುತ್ ಅವಘಡ: ಮೂವರ ದುರ್ಮರಣ
ಹಗರಿಬೊಮ್ಮನಹಳ್ಳಿ: ವಿಜಯದಶಮಿ ಆಯುಧ ಪೂಜೆ ದಿನದಂದೇ ತಾಲೂಕಿನ ನಕ್ರಾಳ್ ತಾಂಡಾ ಹಾಗೂ ಕಡಲಬಾಳು ಗ್ರಾಮದಲ್ಲಿ ಸೋಮವಾರ ಸಂಭವಿಸಿದ ಪ್ರತ್ಯೇಕ ವಿದ್ಯುತ್ ಅವಘಡದಲ್ಲಿ ಮೂವರು ಮೃತಪಟ್ಟಿದ್ದಾರೆ. ತಾಲೂಕಿನ ನಕ್ರಾಳ್ ತಾಂಡಾದ ಹೊಲದಲ್ಲಿ ಹರಿದುಬಿದ್ದ 11 ಕೆ.ವಿ. ವಿದ್ಯುತ್ ತಂತಿ ಕಾಲಿಗೆ ತಗುಲಿ ತಾಂಡಾದ ಕೊಟ್ರೇಶ್‌ನಾಯ್ಕ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲೈನ್‌ಮ್ಯಾನ್, ಜೆಇ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಮನೆ ಮುಂದೆ ಒಣಗಿ ಹಾಕಿದ್ದ ಬಟ್ಟೆ ತೆಗೆಯುತ್ತಿದ್ದ ವೇಳೆ ಕಟ್ಟಿದ್ದ ತಂತಿ ಮೂಲಕ ವಿದ್ಯುತ್ ಪ್ರವಹಿಸಿದ್ದರಿಂದ ಮಾಬುನ್ನಿ(23), ಕುದುರಿ ಮಂಜುಳಾ (35) ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.