ಜಿಎಸ್‌ಟಿ ಪಾವತಿಗೆ ಸೆಪ್ಟೆಂಬರ್ ಗಡುವು ಮುಕ್ತಾಯ
Team Udayavani, Oct 21, 2017, 9:20 AM IST
ಬೆಂಗಳೂರು: ಜಿಎಸ್‌ಟಿಯಡಿ ಸೆಪ್ಟೆಂಬರ್ ತಿಂಗಳ ವಹಿವಾಟಿಗೆ ಸಂಬಂಧಪಟ್ಟಂತೆ ತೆರಿಗೆ (ಆರ್3ಬಿ) ಪಾವತಿಗೆ ನೀಡಲಾಗಿದ್ದ ಅವಧಿ ಶುಕ್ರವಾರ ಮುಕ್ತಾಯವಾಗಿದ್ದು, ಶನಿವಾರದಿಂದ ಪ್ರತಿ ದಿನದ ವಿಳಂಬ ಪಾವತಿಗೆ 100 ರೂ. ದಂಡ ವಿಧಿಸಲಾಗುತ್ತದೆ.
ಅಂತಾರಾಷ್ಟ್ರೀಯ ಜಿಎಸ್‌ಟಿ, ಕೇಂದ್ರ ಜಿಎಸ್‌ಟಿ ಹಾಗೂ ರಾಜ್ಯ ಜಿಎಸ್‌ಟಿಯಡಿ ತೆರಿಗೆ ಪಾವತಿಸದಿದ್ದರೆ ದಿನಕ್ಕೆ ತಲಾ
100ರೂ.ನಂತೆ ದಂಡ ತೆರಬೇಕಾಗುತ್ತದೆ. ಈ ರೀತಿ ಗರಿಷ್ಠ 5000ರೂ.ವರೆಗೆ ದಂಡ ವಿಧಿಸಲು ಅವಕಾಶವಿದ್ದು, ವ್ಯಾಪಾರ- ವಹಿವಾಟುದಾರರು ಸಕಾಲದಲ್ಲಿ ತೆರಿಗೆ ಪಾವತಿಸಿದರೆ ದಂಡದ ಹೊರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ನೂತನ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಜುಲೈ 1ರಿಂದ ಜಾರಿಯಾಗಿದ್ದು, ಜುಲೈ ತಿಂಗಳ ವಹಿವಾಟಿಗೆ ಸೂಕ್ತ ತೆರಿಗೆಯನ್ನು ಆಗಸ್ಟ್
20ನೇ ತಾರೀಖೀನೊಳಗೆ ಪಾವತಿಸಬೇಕಿತ್ತು. ವಿಳಂಬ ಪಾವತಿಗೆ ದಿನವೊಂದಕ್ಕೆ 100ರೂ. ದಂಡ ವಿಧಿಸಲಾಗುತ್ತದೆ. ಆದರೆ ದೇಶಾದ್ಯಂತ ಹೊಸ ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಹಿನ್ನೆಲೆಯಲ್ಲಿ ಜುಲೈ ತಿಂಗಳ ತೆರಿಗೆ ಪಾವತಿಯಲ್ಲಿನ ವಿಳಂಬಕ್ಕೆ ದಂಡ ವಿಧಿಸುವುದನ್ನು ಕೇಂದ್ರ ಸರ್ಕಾರ ಕೈಬಿಟ್ಟಿತ್ತು. ಆಗಸ್ಟ್ ತಿಂಗಳ ವಹಿವಾಟಿಗೆ ತೆರಿಗೆ ಪಾವತಿಸಲು ಸೆ.20 ಕಡೆಯ ದಿನವಾಗಿತ್ತು. ವಿಳಂಬ ತೆರಿಗೆ ಪಾವತಿಗೆ ಈಗಾಗಲೇ ದಂಡ ವಿಧಿಸಲಾಗುತ್ತಿದೆ.
ಸೆಪ್ಟೆಂಬರ್ ವಹಿವಾಟಿಗೆ ಸಂಬಂಧಪಟ್ಟಂತೆ ತೆರಿಗೆ ಪಾವತಿಗೆ ಅ.20 ಕಡೆಯ ದಿನವಾಗಿದ್ದು, ಶುಕ್ರವಾರ ಮುಕ್ತಾಯವಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ವಿಳಂಬ ಪಾವತಿಗೆ ದಂಡ ಹಾಕುವ ಪ್ರಕ್ರಿಯೆ ಕೈಬಿಡುವ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾಗಿ ದಂಡದ ಹೊರೆ ತಪ್ಪಿಸಿಕೊಳ್ಳಲು ವ್ಯಾಪಾರ- ವಹಿವಾಟುದಾರರು ತೆರಿಗೆ ಪಾವತಿಗೆ ಮುಗಿಬಿದ್ದಿದ್ದು
ಕಂಡುಬಂತು. ಶುಕ್ರವಾರದೊಳಗೆ ತೆರಿಗೆ ಪಾವತಿಸಲಾಗದವರು ಪ್ರತಿ ದಿನದ ವಿಳಂಬ ಪಾವತಿಗೆ 100ರೂ. ದಂಡ ತೆರಬೇಕಾಗುತ್ತದೆ. ಈ ದಂಡ ಮೊತ್ತವನ್ನು ಗರಿಷ್ಠ 5000ರೂ. ವರೆಗೆ ಸಂಗ್ರಹಿಸಲಷ್ಟೇ ಅವಕಾಶವಿದ್ದು, ನಂತರವೂ ತೆರಿಗೆ ಪಾವತಿಸದಿದ್ದರೆ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮ ಜರುಗಿಸಲಿದೆ.
ಅ.27ರಂದು ವಿಶೇಷ ಸಂವಾದ
ಎಫ್ಕೆಸಿಸಿಐ ಜಿಎಸ್‌ಟಿ ಕುರಿತಂತೆ ಅ.27ರಂದು ಸಂಸ್ಥೆಯಲ್ಲೇ ವಿಶೇಷ ಸಂವಾದ ಆಯೋಜಿಸಿದ್ದು, ಕೇಂದ್ರ ಜಿಎಸ್‌ಟಿ ವಿಭಾಗದ ಪ್ರಮುಖರು ಹಾಗೂ ರಾಜ್ಯದಲ್ಲಿರುವ ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಜಿಎಸ್‌ಟಿ ಕುರಿತಂತೆ ವ್ಯಾಪಾರ- ವ್ಯವಹಾರಸ್ಥರ ಗೊಂದಲ ನಿವಾರಿಸಿ ಕೊಳ್ಳಲು, ಸ್ಪಷ್ಟತೆ ಪಡೆದುಕೊಳ್ಳಲು ಅನುಕೂಲವಾಗುವಂತೆ ಎಫ್ ಕೆಸಿಸಿಐ ವತಿಯಿಂದ ಅ.27ರಂದು ವಿಶೇಷ ಸಂವಾದ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಜಿಎಸ್‌ಟಿ ನೀತಿ ನಿರೂಪಣಾ ತಂಡದ ಪ್ರಮುಖರು, ತಾಂತ್ರಿಕ ತಜ್ಞ ಅಧಿಕಾರಿಗಳು, ರಾಜ್ಯದಲ್ಲಿರುವ ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿ ವಿಭಾಗದ ಹಿರಿಯ ಅಧಿಕಾರಿಗಳು
ಭಾಗವಹಿಸಲಿದ್ದಾರೆ. ವ್ಯಾಪಾರ- ವ್ಯವಹಾರಸ್ಥರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನೇರ ಉತ್ತರ ನೀಡಲಿದ್ದಾರೆಂದು ರಾಜ್ಯ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ.ಮನೋಹರ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.