ಸಾರಿಗೆ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಗಂಭೀರ ಕ್ರಮ : ಡಿಸಿಎಂ ಸವದಿ
Team Udayavani, Apr 9, 2021, 6:35 PM IST
ಬೆಂಗಳೂರು : ಸಾರಿಗೆ ನೌಕರರ ಮುಷ್ಕರದ ನಡುವೆಯೂ ಕೆಲವು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಜನಸೇವೆಗೆ ಸ್ಪಂದಿಸಲು ಮುಂದಾಗುತ್ತಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲವು ಕಾರ್ಮಿಕ ಮುಖಂಡರೊಂದಿಗೆ ಸೇರಿ ಈ ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡುತ್ತಾ ಅವರ ಕೆಲಸಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇಂಥ ಕೃತ್ಯಕ್ಕೆ ಮುಂದಾಗುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.
ಬಹುತೇಕ ಸಾರಿಗೆ ನೌಕರರಿಗೆ ತಮ್ಮ ವೇತನ ಹೆಚ್ಚಳವಾದರೆ ಸಾಕು. ಈ ಮುಷ್ಕರವಾಗಲೀ ಅಥವಾ ವೇತನಾ ಆಯೋಗದ ಶಿಫಾರಸ್ಸುಗಳ ಜಾರಿಯಾಗಲಿ ಅವಶ್ಯವಿಲ್ಲ ಎಂಬ ಮನೋಭಾವನೆಯಿಂದ ಸ್ವಯಂ ಪ್ರೇರಿತರಾಗಿ ಕರ್ತವ್ಯ ನಿರ್ವಹಿಸಲು ಮುಂದಾಗುತ್ತಿದ್ದಾರೆ. ಆದರೆ ಈ ಮುಷ್ಕರವನ್ನೇ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿದವರು ಇವರಿಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಇಂತಹ ಕಾನೂನು ವಿರೋಧಿ ದುಷ್ಕೃಗಳನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಕರೆಗೆ ಓಗುಟ್ಟು ಯಾರೇ ಕರ್ತವ್ಯಕ್ಕೆ ಹಾಜರಾದರೂ ಅಂತಹವರಿಗೆ ಸೂಕ್ತ ರಕ್ಷಣೆ ಕಲ್ಪಿಸುವುದು ನಮ್ಮ ಸರ್ಕಾರದ ಹೊಣೆಯಾಗಿದೆ. ಆದ್ದರಿಂದ ಈ ಬಗ್ಗೆ ಯಾರೂ ಅಂಜಿಕೆ ಪಡಬೇಕಾಗಿಲ್ಲ ಎಂದರು.
ನಮ್ಮ ಸರ್ಕಾರ ಪದೇಪದೇ ವಿನಂತಿಸಿಕೊಂಡಿದ್ದರೂ ಸಹ ಸಾರಿಗೆ ನೌಕರರ ಮುಷ್ಕರ ಇಂದು ಮೂರನೆಯ ದಿನಕ್ಕೂ ಮುಂದುವರೆದು ರಾಜ್ಯಾದ್ಯಂತ ಅಸಂಖ್ಯಾತ ಪ್ರಯಾಣಿಕರಿಗೆ ತೊಂದರೆಯಾಗಿರುವುದು ತೀರಾ ಬೇಸರದ ಬೆಳವಣಿಗೆಯಾಗಿದೆ. ನಾಡಿನಾದ್ಯಂತ ಈ ಮುಷ್ಕರದಿಂದ ಸಾರ್ವಜನಿಕರೂ ಬೇಸತ್ತು ಮುಷ್ಕರ ನಿರತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಮುಷ್ಕರವನ್ನು ತಕ್ಷಣ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಲು ನಾನು ಮನವಿ ಮಾಡಿಕೊಳ್ಳುತ್ತೇನೆ.
ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಮಾಡುವ ವಿಚಾರದಲ್ಲಿ ಸರ್ಕಾರ ಮೀನಮೇಷ ನಡೆಸುತ್ತಿಲ್ಲ. ಪ್ರಸ್ತುತ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ಈ ಬಗ್ಗೆ ಚುನಾವಣಾ ಆಯೋಗದ ಅನುಮತಿಗಾಗಿ ಸ್ವಲ್ಪ ಕಾಯುವುದು ಅನಿವಾರ್ಯವಾಗಿದೆ. ಆದರೆ ಈ ಅಂಶವನ್ನೂ ತಪ್ಪಾಗಿ ಬಿಂಬಿಸಿ ಮುಗ್ಧ ಸಾರಿಗೆ ನೌಕರರನ್ನು ಹಾದಿ ತಪ್ಪಿಸಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಹುನ್ನಾರವನ್ನು ಕೆಲವರು ನಡೆಸುತ್ತಿರುವುದು ವಿಷಾದನೀಯ. ಅಷ್ಟೇಅಲ್ಲ, ಸಾರಿಗೆ ನಿಗಮಗಳಿಗೆ ಸಂಬಂಧವೇ ಇಲ್ಲದವರು ಸಾರಿಗೆ ನೌಕರರ ಮನಸ್ಸಿನಲ್ಲಿ ಸರ್ಕಾರದ ಬಗ್ಗೆ ಹುಳಿ ಹಿಂಡುತ್ತಾ ಸ್ವಯಂ ಘೋಷಿತ ಮುಖಂಡರಾಗಲು ಹವಣಿಸುತ್ತಿದ್ದಾರೆ. ಇಂತಹವರ ಬಗ್ಗೆ ನಮ್ಮ ನೌಕರ ಬಾಂಧವರು ಎಚ್ಚರಿಕೆಯಿಂದಿರಬೇಕು ಎಂದರು.
ಆದರೆ ಇಷ್ಟೆಲ್ಲಾ ಕುತಂತ್ರ-ಪ್ರಚೋದನೆಗಳ ನಡುವೆಯೂ ಕಳೆದೆರಡು ದಿನಗಳಿಂದ ನಮ್ಮ ನಾಲ್ಕೂ ಸಾರಿಗೆ ನಿಗಮಗಳ ಸಾವಿರಾರು ಬಸ್ಸುಗಳು ಸಂಚರಿಸಲು ಧೈರ್ಯದಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಂಥ ನಮ್ಮ ಕೆಲವು ಸಾರಿಗೆ ಸಿಬ್ಬಂದಿಗಳ ಸೇವಾಮನೋಭಾವವನ್ನು ನಾನು ಮುಕ್ತ ಕಂಠದಿಂದ ಪ್ರಶಂಸಿಸುತ್ತೇನೆ.
ಇದೇ ರೀತಿ ನಮ್ಮ ಮನವಿಗೆ ಓಗುಟ್ಟು ಖಾಸಗಿ ವಾಹನ ಮಾಲೀಕರೂ ತಮ್ಮ ಬಸ್ಸು, ಮ್ಯಾಕ್ಸಿಕ್ಯಾಬ್, ಮತ್ತಿತರ ವಾಹನಗಳ ಸೇವೆಯನ್ನು ವ್ಯಾಪಕವಾಗಿ ಒದಗಿಸಿಕೊಟ್ಟು ಸಾರ್ವಜನಿಕರಿಗೆ ಸ್ಪಂದಿಸಿರುವುದು ಸಹ ಶ್ಲಾಘನೀಯ. ಇದೇ ರೀತಿ ಮುಂದೆಯೂ ಅವರ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದರು.
ವಾಹನಗಳ ದಾಖಲಾತಿ ಸಿಂಧುತ್ವ ವಿಸ್ತರಣೆ
ಈ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೋಟಾರು ವಾಹನಗಳ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ರಡಿಯಲ್ಲಿ ವಿತರಿಸಿರುವ ಎಲ್ಲಾ ತರಹದ ದಾಖಲಾತಿಗಳ ಪೈಕಿ, ದಿನಾಂಕ: 01.02.2020 ರಿಂದ ಸಿಂಧುತ್ವ ಮುಕ್ತಾಯಗೊಂಡಿರುವಂತಹ ದಾಖಲಾತಿಗಳಿಗೆ ಸೀಮಿತಗೊಳಿಸಿ ಸಿಂಧುತ್ವದ ಅವಧಿಯನ್ನು ದಿನಾಂಕ: 30.06.2021 ರವರೆಗೆ ವಿಸ್ತರಿಸಲಾಗಿದೆ.
ನಮ್ಮ ಸಾರಿಗೆ ನೌಕರ ಬಾಂಧವರು ಯಾವುದೇ ವದಂತಿಗಳಿಗೆ ಕಿವಿಕೊಡದೇ ಮತ್ತು ಪ್ರಚೋದನೆಗೆ ಒಳಗಾಗದೇ ಮುಷ್ಕರವನ್ನು ಕೈಬಿಟ್ಟು ಕೂಡಲೇ ಕರ್ತವ್ಯಕ್ಕೆ ಮರಳುವ ಮೂಲಕ ಸಾರಿಗೆ ನಿಗಮಗಳ ಘನತೆ ಗೌರವಗಳನ್ನು ಮತ್ತಷ್ಟು ಹೆಚ್ಚಿಸುವಂತಾಗಲಿ ಎಂದು ನಾನು ಕಳಕಳಿಯಿಂದ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan: ದರ್ಶನ್ ಜಾಮೀನು ರದ್ದತಿಗೆ ಸುಪ್ರೀಂ ಮೊರೆ ಹೋಗಲು ಸಿದ್ಧತೆ
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Session: ವಕ್ಫ್ ಜೊತೆ ಬಿಪಿಎಲ್ ಹೋರಾಟಕ್ಕೆ ಬಿಜೆಪಿ ಸಜ್ಜು
Operation Fear: ಕಾಂಗ್ರೆಸ್ ಶಾಸಕರ ಮೇಲೆ ನಿಗಾ ವಹಿಸಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.