Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ
ಅ. 20 ದಿನ ಕಳೆದರೂ ಶೇ. 5 ಮಂದಿಗೂ ತಲುಪಿಲ್ಲ ಅಕ್ಕಿ
Team Udayavani, Oct 21, 2024, 7:15 AM IST
ಬೆಂಗಳೂರು: ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆ ಅಡಿ ಪ್ರತೀ ಯೂನಿಟ್‌ಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಬದಲಿಗೆ ನೀಡಲಾಗುವ ನಗದು ವರ್ಗಾವಣೆಯಲ್ಲಿ ವಿಳಂಬವಾಗುತ್ತದೆ. ಆದರೆ ಈ ತಿಂಗಳು ಈ ಎಲ್ಲ ಕಾರ್ಡ್‌ದಾರರಿಗೆ ಪಡಿತರ ಸಿಗುವುದೂ ಅನುಮಾನವಾಗಿದೆ!
ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸರ್ವರ್ ನಿರ್ವಹಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ರಾಜ್ಯಾದ್ಯಂತ ಪಡಿತರ ವಿತರಣೆ ತಡವಾಗಿ ಆರಂಭವಾಗಿರುವುದಲ್ಲದೆ, ಅತ್ಯಂತ ಮಂದಗತಿಯಲ್ಲಿ ನಡೆಯುತ್ತಿದೆ. ಪರಿಣಾಮವಾಗಿ ತಿಂಗಳು ಮುಗಿಯುತ್ತ ಬಂದರೂ ಇದುವರೆಗೆ ಶೇ. 5ರಷ್ಟೂ ಜನರಿಗೂ ಪಡಿತರ ಸಿಕ್ಕಿಲ್ಲ. ಮುಂದಿನ 10 ದಿನಗಳಲ್ಲಿ ಎಲ್ಲರಿಗೂ ಪಡಿತರ ತಲುಪಿಸುವುದೇ ಈಗ ಇಲಾಖೆಗೆ ದೊಡ್ಡ ಸವಾಲಾಗಿದೆ.
ಪಡಿತರ ವಿತರಕರ ಅಂಗಡಿಗಳಲ್ಲಿ ಕಡ್ಡಾಯವಾಗಿ ಪ್ರತೀ ಕಾರ್ಡ್‌ದಾರರ ಹೆಬ್ಬೆಟ್ಟಿನ ಗುರುತು ಪಡೆದು, ಅದು ದೃಢೀಕರಣಗೊಂಡ ಅನಂತರ ಪಡಿತರ ವಿತರಿಸಲಾಗುತ್ತದೆ. ಈ ಪ್ರಕ್ರಿಯೆಗೆ ಈ ಹಿಂದೆ ಹೆಚ್ಚೆಂದರೆ ಒಂದು ನಿಮಿಷ ಹಿಡಿಯುತ್ತಿತ್ತು. ಈಗ ಸರ್ವರ್ ನಿರ್ವಹಣೆ ಹಿನ್ನೆಲೆಯಲ್ಲಿ ಕನಿಷ್ಠ 20 ನಿಮಿಷ ತೆಗೆದುಕೊಳ್ಳುತ್ತಿದೆ. ಪರಿಣಾಮವಾಗಿ ಕಾರ್ಡ್‌ದಾರರು ತಾಸುಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಈ ತಿಂಗಳ ಪಡಿತರ ವಿತರಣೆ ಆರಂಭವಾದಾಗಿನಿಂದ ಈ ಸಮಸ್ಯೆ ಕಂಡುಬರುತ್ತಿದೆ.
1.15 ಕೋಟಿ ಕಾರ್ಡ್: ಪಡಿತರ ವಿತರಣೆ 5.60 ಲಕ್ಷ ಮಂದಿಗೆ
ರಾಜ್ಯದಲ್ಲಿ ಅಂದಾಜು 1.15 ಕೋಟಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿದ್ದು, ಒಟ್ಟು ಸುಮಾರು 22 ಸಾವಿರ ಪಡಿತರ ವಿತರಕ ಅಂಗಡಿಗಳಿವೆ. ಒಂದು ಅಂಗಡಿಯಲ್ಲಿ ದಿನಕ್ಕೆ ಕನಿಷ್ಠ 100 ಕಾರ್ಡ್‌ದಾರರಿಗೆ ಪಡಿತರ ವಿತರಿಸಲು ಸಾಧ್ಯವಾಗುತ್ತಿತ್ತು. ಅದರಂತೆ ಈ ವೇಳೆಗಾಗಲೇ ಶೇ. 60ರಿಂದ 70ರಷ್ಟು ಕುಟುಂಬಗಳಿಗೆ ಪಡಿತರ ತಲುಪಿರುತ್ತಿತ್ತು. ಆದರೆ ಅ. 19ರ ವರೆಗೆ 5.60 ಲಕ್ಷ ಕಾರ್ಡ್‌ದಾರರಿಗೆ ಮಾತ್ರ ಪಡಿತರ ವಿತರಿಸಲು ಸಾಧ್ಯವಾಗಿದೆ. ಇನ್ನೂ 1.10 ಕೋಟಿ ಫಲಾನುಭವಿಗಳು ಪಡಿತರಕ್ಕಾಗಿ ಕಾಯುತ್ತಿದ್ದಾರೆ ಎಂದು ಇಲಾಖೆ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಬೆಳಗ್ಗೆ 7ರಿಂದ ರಾತ್ರಿ 10ರ ವರೆಗೆ ವಿತರಣೆ ಮಾಡುವಂತೆ ಇಲಾಖೆಯು ವಿತರಕರಿಗೆ ಸೂಚನೆ ನೀಡಿದೆ. ರಜಾ ದಿನಗಳಲ್ಲೂ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಪ್ರತೀ ದಿನ ಕನಿಷ್ಠ 10 ಲಕ್ಷ ಕಾರ್ಡ್‌ದಾರರಿಗೆ ಪಡಿತರ ವಿತರಣೆ ಸಾಧ್ಯವಾದರೆ ಮಾತ್ರ ಮಾಸಾಂತ್ಯಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇಲ್ಲವಾದರೆ ವಿತರಣೆಯಾಗದೆ ಉಳಿದ ಆಹಾರ ಧಾನ್ಯವನ್ನು ಲೆಕ್ಕಹಾಕಿ ಬರುವ ತಿಂಗಳ ಹಂಚಿಕೆಯಲ್ಲಿ ಕಡಿತಗೊಳಿಸಲಾಗುತ್ತದೆ. ಆಗ ಕೇಂದ್ರಕ್ಕೆ ಈ ಕುರಿತು ರಾಜ್ಯ ಸರ್ಕಾರವು ಮನವರಿಕೆ ಮಾಡಿಕೊಡಬೇಕಾಗುತ್ತದೆ.
ಅಗತ್ಯಬಿದ್ದರೆ ಅವಧಿ ವಿಸ್ತರಣೆ: ಇಲಾಖೆ
ಸರ್ವರ್‌ನಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ರಾಷ್ಟ್ರೀಯ ದತ್ತಾಂಶ ಕೇಂದ್ರದ (ಎನ್‌ಐಸಿ) ಸುಪರ್ದಿಯಲ್ಲಿದ್ದ ನಿರ್ವಹಣ ವ್ಯವಸ್ಥೆಯನ್ನು ರಾಜ್ಯ ದತ್ತಾಂಶ ಕೇಂದ್ರಕ್ಕೆ (ಕೆಎಸ್‌ಡಿಸಿ) ವರ್ಗಾಯಿಸಲಾಗುತ್ತಿದೆ. ಆ ಮೂಲಕ ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಕಾರ್ಡ್‌ದಾರರ ಹಿತದೃಷ್ಟಿಯಿಂದಲೇ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಸಮರೋಪಾದಿಯಲ್ಲಿ ಸಿಬಂದಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. 2-3 ದಿನಗಳಲ್ಲಿ ಎಂದಿನಂತೆ ಪಡಿತರ ವಿತರಣೆ ಆಗಲಿದೆ. ಅಗತ್ಯಬಿದ್ದರೆ ಪಡಿತರ ವಿತರಿಸುವ ಅವಧಿಯನ್ನು ನಾಲ್ಕಾರು ದಿನ ವಿಸ್ತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಹೆಚ್ಚುವರಿ ನಿರ್ದೇಶಕ (ಐಟಿ) ಚಂದ್ರಕಾಂತ್ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಏನು ಉಪಯೋಗ?
ಎನ್‌ಐಸಿಯಿಂದ ಕೆಎಸ್‌ಡಿಸಿಗೆ ದತ್ತಾಂಶ ವರ್ಗಾವಣೆ ಆಗುವುದರಿಂದ ಸಾಮರ್ಥ್ಯ ವೃದ್ಧಿ ಆಗಲಿದೆ. ಆಗ ಏಕಕಾಲದಲ್ಲಿ ಎಲ್ಲ 22 ಸಾವಿರ ಪಡಿತರ ವಿತರಕರ ಅಂಗಡಿಗಳಲ್ಲಿ ಗರಿಷ್ಠ ಪಡಿತರ ವಿತರಣೆ ಮಾಡಿದರೂ ಯಾವುದೇ ಸಮಸ್ಯೆ ಆಗದು. ಇದೇ ಅವಧಿಯಲ್ಲಿ ಪಡಿತರ ಚೀಟಿ, ತಿದ್ದುಪಡಿ, ಹೆಸರುಗಳ ಸೇರ್ಪಡೆ ಮತ್ತು ಕಡಿತಗೊಳಿಸುವುದನ್ನು ಏಕಕಾಲಕ್ಕೆ ಮಾಡಬಹುದು. ಬೆಂಬಲ ಬೆಲೆಗೆ ಉತ್ಪನ್ನಗಳನ್ನು ನೀಡುವ ರೈತರಿಗೂ ಇದು ಅನುಕೂಲ ಆಗಲಿದೆ. ಭವಿಷ್ಯದ ದೃಷ್ಟಿಯಿಂದ ಇದು ಅಗತ್ಯ.
-ಚಂದ್ರಕಾಂತ್, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ (ಐಟಿ).
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.