![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 26, 2017, 3:50 AM IST
ಕೆ.ಆರ್.ಪೇಟೆ: ಮುನ್ಸೂಚನೆ ನೀಡದೆ ಏಕಾಏಕಿ ಹೇಮಾವತಿ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಯಬಿಟ್ಟಿದ್ದರಿಂದ ನೀರಿನ ಸೆಳೆತಕ್ಕೆ ಸಿಲುಕಿದ್ದ 6 ಮಂದಿಯನ್ನು ಕುರಿಗಾಹಿ ಯುವಕನೊಬ್ಬ ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಅಕ್ಕಿ ಹೆಬ್ಟಾಳು ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಶನಿ ವಾರ ಸಂಭವಿಸಿದೆ. ಇದೇ ಗ್ರಾಮದ ರವಿ (30) ಆರೂ ಮಂದಿಯ ಜೀವ ಉಳಿಸಿದ ಸಾಹಸಿ.
ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯದಿಂದ ನೀರನ್ನು ಹರಿಸಲು ನಿರ್ಧರಿಸಲಾಗಿತ್ತು. ಅದರಂತೆ ಹೇಮಾವತಿ ಜಲಾಶಯದ ಅಧಿಕಾರಿಗಳು ಶನಿವಾರ ಬೆಳಗ್ಗೆ ಹೇಮಾವತಿ ನದಿಗೆ ಹೆಚ್ಚುವರಿ ನೀರನ್ನು ಹರಿಯಬಿಟ್ಟಿದ್ದು, ಘಟನೆಗೆ ಕಾರಣವಾಗಿದೆ.
ಅಕ್ಕಿಹೆಬ್ಟಾಳು ಗ್ರಾಮದ ಲಕ್ಷ್ಮಣ್, ಚಲುವ ನಾಯಕ್, ಕೋಮಲಾ, ರಾಜಮಣಿ, ಶೋಭಾ, ಲತಾಮಣಿ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ನದಿ ಮಧ್ಯಭಾಗದಲ್ಲಿ ಬಂಡೆಯ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದರು. ಈ ವೇಳೆ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗಿದ್ದು, 6 ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗ ಲಾರಂಭಿಸಿದ್ದಾರೆ. ಇದರಿಂದ ವಿಚಲಿತರಾದವರು ಜೋರಾಗಿ ಕೂಗಾಡಲು ಶುರು ಮಾಡಿದ್ದಾರೆ.
ನದಿಯ ಸಮೀಪದಲ್ಲೇ ಕುರಿ ಮೇಯಿಸುತ್ತಿದ್ದ ರವಿ, ಕಲ್ಲನ್ನು ಬಿಗಿಯಾಗಿ ತಬ್ಬಿ ಹಿಡಿದುಕೊಳ್ಳಿ ಎಂದು ದಡದಿಂದಲೇ ಸೂಚನೆ ನೀಡಿದ್ದಾರೆ. ಅನಂತರ ತನ್ನ ಸ್ನೇಹಿತನಿಗೆ ಕರೆ ಮಾಡಿ ಟ್ಯೂಬ್‌ಗಳನ್ನು ತರುವಂತೆ ತಿಳಿಸಿದ್ದಾರೆ.
ಬಳಿಕ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವರನ್ನು ಪ್ರಾಣದ ಹಂಗು ತೊರೆದು ಟ್ಯೂಬ್ ಬಳಸಿ ಒಬ್ಬೊಬ್ಬರನ್ನಾಗಿ ದಡಕ್ಕೆ ತಂದು ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕನ ಸಮಯ ಪ್ರಜ್ಞೆ ಹಾಗೂ ಧೈರ್ಯವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.