Shivamogga; ಲೈಂಗಿಕ ದೌರ್ಜನ್ಯ ಕೇಸ್: ಬಿಜೆಪಿ ಯುವ ಮುಖಂಡ ಅರುಣ್ ಕುಗ್ವೆ ಬಂಧನ
Team Udayavani, Jun 23, 2024, 6:47 PM IST
ಸಾಗರ: ಯುವತಿಯೊಬ್ಬಳಿಗೆ ಮದುವೆ ಆಗುವ ಆಸೆ ತೋರಿಸಿ ನಾಲ್ಕು ವರ್ಷಗಳಿಂದ ದೈಹಿಕ ಸಂಬಂಧ ಬೆಳೆಸಿ, ಲೈಂಗಿಕ ದೌರ್ಜನ್ಯ ನಡೆಸುವ ಜೊತೆಗೆ ಕುಟುಂಬಕ್ಕೆ ಜೀವ ಬೆದರಿಕೆಯನ್ನೂ ಒಡ್ಡಿರುವ ಪ್ರಕರಣದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಎಂಬಾತನನ್ನು ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ.
ಯುವತಿಯು ಶಿವಮೊಗ್ಗ ನಗರದ ಮಹಿಳಾ ಠಾಣೆಯಲ್ಲಿ ದಾಖಲಿಸಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಅರುಣ್ ಕುಗ್ವೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿಯೇ ಅರುಣ್ ಕುಗ್ವೆ ಅವರ ಪರಿಚಯವಾಗಿದೆ. ಸ್ನೇಹ ಪ್ರೀತಿಗೆ ತಿರುಗಿ ಒಂದೇ ಸಮುದಾಯದವರಾದ ಹಿನ್ನೆಲೆಯಲ್ಲಿ ಎರಡೂ ಮನೆಗಳಿಗೆ ಸಂಬಂಧ ಒಪ್ಪಿಗೆಯಾಗಿದೆ. ಉದ್ಯಮಿ ಮತ್ತು ರಾಜಕಾರಣಿ ಎಂದು ಹೇಳಿಕೊಂಡಿದ್ದ ಅರುಣ್ ಮುಂದೆ ವಿವಾಹವಾಗುವ ಹುಸಿ ಭರವಸೆ ನೀಡಿ ಜೋಗ, ಸಾಗರ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಲಾತ್ಕಾರವಾಗಿ ವಿಡಿಯೋ ಚಿತ್ರೀಕರಣ, ಫೋಟೋ ತೆಗೆದುಕೊಂಡಿದ್ದಾನೆ ಎಂದು ಮೂಲತಃ ಸಾಗರದವರಾದ ಯುವತಿ ದೂರಿನಲ್ಲಿ ವಿವರಿಸಿದ್ದಾರೆ.
ಇತ್ತೀಚೆಗೆ ಬೇರೆ ಹುಡುಗಿಯರೊಂದಿಗೆ ಸಂಬಂಧ ಹೊಂದಿರುವ ಮಾಹಿತಿ ಕುರಿತು ವಿಚಾರಿಸಿದರೆ ಜೀವ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿ ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆದಿದ್ದೆ. ಆಗ ಸಾಗರ ಗ್ರಾಮಾಂತರ ಠಾಣೆಯಲ್ಲಿ ನನ್ನನ್ನೇ ಮದುವೆಯಾಗುವುದಾಗಿ ಮಾತು ಕೊಟ್ಟ ಹಿನ್ನೆಲೆಯಲ್ಲಿ ದೂರು ವಾಪಾಸು ಪಡೆದಿದ್ದೆ. ಈಗ ಬೇರೊಬ್ಬ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಶ್ನಿಸಿದ್ದಕ್ಕೆ ಆತ ಹಾಗೂ ಆತನ ಸೋದರ ಗಣೇಶ್ ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯುವತಿ ದೂರಿದ್ದಾರೆ.
ಅರುಣ್ ಕುಗ್ವೆ ಮತ್ತು ಗಣೇಶ್ ಇಬ್ಬರ ಮೇಲೆ ಐಪಿಸಿ ಸೆಕ್ಷನ್ 354, 376, 506 ಮೊದಲಾದ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅರುಣ್ ಕುಗ್ವೆ ಮೇಲೆ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿದ್ದು, ಗಡಿಪಾರು ಸೂಚನೆಯನ್ನೂ ಹಿಂದೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಗಂಭೀರತೆಯನ್ನು ಆಧರಿಸಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅರುಣ್ ಕುಗ್ವೆ ಜತೆಯಲ್ಲಿ ಎರಡನೇ ಆರೋಪಿಯಾಗಿ ಆತನ ಸೋದರ ಗಣೇಶ್ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.