ಸಿದ್ದರಾಮಯ್ಯ ಸೀದಾರುಪಯ್ಯ
Team Udayavani, Feb 28, 2018, 3:29 AM IST
ದಾವಣಗೆರೆ: ಕರ್ನಾಟಕ ದಲ್ಲಿ ಆಡಳಿತದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ಸರಕಾರ ವಲ್ಲ. ಇಲ್ಲಿರೋದು “ಸೀದಾರುಪಯ್ಯ’ ಸರಕಾರ. ಇದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರಕಾರವನ್ನು ಲೇವಡಿ ಮಾಡಿದ ಪರಿ. ಮಂಗಳವಾರ, ಇಲ್ಲಿನ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 75ನೇ ಜನ್ಮದಿನದ ಅಂಗವಾಗಿ ರಾಜ್ಯ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಅನ್ನದಾತರ ಬೃಹತ್ ಸಮಾವೇಶದಲ್ಲಿ ಬಿಎಸ್‌ವೈಗೆ ನೇಗಿಲು ಹಸ್ತಾಂತರಿಸಿ, ಸಮ್ಮಾನಿಸಿ ಹಾಗೂ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯ ಸರಕಾರದ ಆಡಳಿತ ವೈಖರಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಈ ಹಿಂದೆ ಬೆಂಗಳೂರಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದಲ್ಲಿ ಟೆನ್ ಪರ್ಸಂಟೇಜ್ ಸರಕಾರ ನಡೆಯುತ್ತಿದೆ ಎಂದು ಆರೋಪಿಸಿದ್ದ ಮೋದಿ, ಈ ಬಾರಿ ನೇರವಾಗಿ ಸಿದ್ದರಾಮಯ್ಯ ವಿರುದ್ಧವೇ ತಮ್ಮ ವಾಗ್ಬಾಣ ಬಿಟ್ಟರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರದಿಂದ ಯಾವ ಕೆಲಸವೂ ಸುಮ್ಮನೆ ಆಗದು. “ಸೀದಾರುಪಯ್ಯ’ದಿಂದ (ನೇರ ಹಣ ಕೊಟ್ಟರೆ) ಮಾತ್ರ ಎಲ್ಲವೂ ಆಗಲಿವೆ. ಇಂತಹ ಸರಕಾರ ನಿಮಗೆ ಬೇಕೆ ಎಂದು ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಮಂತ್ರಿ ಮಹೋದಯರ ಮನೆಯಲ್ಲಿ ಬಂಡಲ್‌ಗಟ್ಟಲೆ ನೋಟುಗಳು ಸಿಗುತ್ತವೆ. ಇದು ಯಾರ ಹಣ, ಎಲ್ಲಿಂದ ಸಂಪಾದಿಸಿದ್ದು ಎಂದು ಯಾರ ಹೆಸರೂ ಪ್ರಸ್ತಾವಿಸದೆ ತರಾಟೆಗೆ ತೆಗೆದುಕೊಂಡರು. ಪಕ್ಷದ ಹೈಕಮಾಂಡ್‌ನ್ನು ಖುಷಿ ಪಡಿಸೋದು, ಇಲ್ಲಿ ಜನರಿಗೆ ಸುಳ್ಳು ಹೇಳುತ್ತ ಮೋಸ ಮಾಡಿದ್ದು ಹೊರತು ಪಡಿಸಿದರೆ ರಾಜ್ಯ ಸರಕಾರ ರೈತರ, ಜನರ ಹಿತಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ರಾಜ್ಯ ಸರಕಾರದ ಪಾಪದ ಕೃತ್ಯ ದಿಂದ ಜನತೆ ಬೇಸತ್ತಿದ್ದಾರೆ. ಈ ಸರಕಾರವನ್ನು ದ್ವೇಷಿಸುತ್ತಿದ್ದಾರೆ. ಅವರ ಸಿಟ್ಟಿನಿಂದ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ ರಕ್ಷಣೆ ಸಾಧ್ಯವಿಲ್ಲ. ಕಾಂಗ್ರೆಸ್ ಆಡಳಿತದ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗಿದೆ. ಭಾರತದ ಭಾಗ್ಯ ಬದಲಾಗಲು ಮೊದಲು ಹಳ್ಳಿ ಮತ್ತು ರೈತರ ಬದುಕು ಬದಲಾಗ ಬೇಕಿದೆ. ಕರ್ನಾಟಕದ ಜನ ಭೂಮಿ ಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದವರು. ಈ ಮುಷ್ಟಿ ಅಕ್ಕಿ ಅಭಿಯಾನ ರೈತರು, ಜನಸಾಮಾನ್ಯರ ಆಸೆ, ಅಪೇಕ್ಷೆ ಈಡೇರಿಕೆಗೆ ಮುನ್ನುಡಿ ಬರೆಯಲಿ ಎಂದು ಹೇಳಿದರು.
ಅನುದಾನ ಬಳಕೆ ಮಾಡಿಲ್ಲ
ಕೇಂದ್ರ ಜಾರಿ ಮಾಡಿದ ಯೋಜನೆ ಗಳಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಮುಖ್ಯವಾಗಿ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಿದ ಅನೇಕ ಯೋಜ ನೆಗಳ ಅನುದಾನವನ್ನು ಸಂಪೂರ್ಣ ಖರ್ಚು ಮಾಡದೆ ಉಳಿಸಿಕೊಂಡಿದೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇದ್ದಾಗ ಕೇಂದ್ರ ಹಣಕಾಸು ಆಯೋಗದಿಂದ ಕೊಟ್ಟದ್ದು ಬರೀ 73 ಸಾವಿರ ಕೋಟಿ ರೂ. ನಮ್ಮ ಸರಕಾರ ಆಯೋಗದ ಮೂಲಕ 2 ಲಕ್ಷ ಕೋ. ರೂ. ಬಿಡುಗಡೆ ಮಾಡಿದೆ. ಆದರೆ, ಈ ಹಣ ಜನರ ಅಭಿವೃದ್ಧಿಗಾಗಿ ಸದ್ಬಳಕೆಯಾಗಿಲ್ಲ ಎಂದರು. ಶಿಕ್ಷಣ, ಆರೋಗ್ಯ, ಜಲ ಮರುಪೂರಣ, ಸ್ಮಾರ್ಟ್ ಸಿಟಿ ಸಹಿತ ವಿವಿಧ ಯೋಜನೆಗಳಿಗಾಗಿ ಕೇಂದ್ರ ನೀಡಿರುವ ಅನುದಾನವನ್ನು ಈ ರಾಜ್ಯ ಖರ್ಚೇ ಮಾಡಿಲ್ಲ ಎಂದು ಆರೋಪಿಸಿದರು.
ಬೆಂಬಲ ಬೆಲೆ ಹೆಚ್ಚು ಮಾಡಿದ್ದೇ ನಾವು: ದೇಶವನ್ನು ಒಂದೇ ಕುಟುಂಬ ದವರು 48 ವರ್ಷ ಆಳಿದರೂ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಬದಲಾ ಯಿಸಲು ಮುಂದಾಗಿರಲಿಲ್ಲ. ನಾವು ಅಧಿಕಾರಕ್ಕೆ ಬಂದ 48 ತಿಂಗಳಲ್ಲೇ ಬೆಂಬಲ ಬೆಲೆ ಒಂದೂವರೆ ಪಟ್ಟು ಹೆಚ್ಚಳ ಮಾಡಿದೆವು. ಜೊತೆಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿದೆವು ಎಂದು ಮೋದಿ ಹೇಳಿದರು.
ನಾನೇನಾದರೂ ರೈತರಿಗೆ 10 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದರೆ ಬಹುದೊಡ್ಡ ನಾಯಕ ಎಂದು ಬಿಂಬಿಸಲಾಗುತ್ತಿತ್ತು. ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಸಾಕಷ್ಟು ಅನುಕೂಲ ಆಗಿದೆ. ಕೃಷಿ ಉತ್ಪನ್ನವನ್ನು ಜಮೀನಿ ನಿಂದ ಮಾರುಕಟ್ಟೆಗೆ ಕೊಂಡೊ ಯ್ಯುವವರೆಗೆ ಏನಾದರೂ ಹಾನಿ ಗೊಳಗಾದಲ್ಲಿ ಅದಕ್ಕೆ ಕನಿಷ್ಠ ಬೆಂಬಲ ಬೆಲೆಯಂತೆ ಪರಿಹಾರ ದೊರೆಯಲಿದೆ. ರೈತರ ಆದಾಯ ದುಪ್ಪಟ್ಟು ಮಾಡುವ ಜೊತೆಗೆ ಅವರ ಬದುಕು ಸುಧಾರಿಸಲು ವೈಜ್ಞಾನಿಕ ಕ್ರಮ ಅನುಸರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯಾಧ್ಯಕ್ಷ ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮುರುಳೀ ಧರರಾವ್, ಕೇಂದ್ರ ಸಚಿವರಾದ ಅನಂತಕುಮಾರ, ಸದಾನಂದ ಗೌಡ, ರಮೇಶ ಜಿಗಜಣಗಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ, ಸಂಸದರಾದ ಜಿ.ಎಂ. ಸಿದ್ದೇಶ್ವರ, ಶೋಭಾ ಕರಂದ್ಲಾಜೆ, ಶ್ರೀರಾಮುಲು ಮುಂತಾದವರಿದ್ದರು.
ಮುಷ್ಟಿ ಅಕ್ಕಿ ಅಭಿಯಾನ
ಅಮೆರಿಕದ ಲಿಬರ್ಟಿ ಪ್ರತಿಮೆ ವಿಶ್ವದ ಅತಿ ವಿಖ್ಯಾತ. ಅದರಂತೆ ಗುಜರಾತ್‌ನಲ್ಲಿ ಸರ್ದಾರ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ಸ್ಥಾಪಿಸಲು ಕೃಷಿ ಉಪಕರಣಗಳು, ನಿಷ್ಪ್ರಯೋಜಕ ಕಬ್ಬಿಣದ ತುಂಡು ನೀಡುವಂತೆ ಜನರಲ್ಲಿ ಮನವಿ ಮಾಡಿದಾಗ, ಅದಕ್ಕೆ ರೈತರು, ಜನಸಾಮಾನ್ಯರು ಅಭೂತಪೂರ್ವವಾಗಿ ಸ್ಪಂದಿಸಿದರು. ಮುಂದೆ ಆ ಪ್ರತಿಮೆ ಲಿಬರ್ಟಿ ಪ್ರತಿಮೆಗಿಂತ ಜನಪ್ರಿಯವಾಗಲಿದೆ. ಕರ್ನಾಟಕದ ಜನತೆ ಪರಿಶ್ರಮಿಗಳು, ಒಳ್ಳೆಯವರು. ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಮನೋಭಾವದವರು. ಈ ರೈತ ಸಮಾವೇಶದಲ್ಲಿ ಮುಷ್ಟಿ ಅಕ್ಕಿ ಅಭಿಯಾನ ಪಟೇಲ್ ಪ್ರತಿಮೆ ನಿರ್ಮಾಣದ ಯಶಸ್ಸಿನ ರೀತಿಯಲ್ಲಿ ಸಾಗಲಿ. ಮುಂದೆ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು ನವ ಕರ್ನಾಟಕ ನಿರ್ಮಾಣಕ್ಕೆ ನಾಂದಿಯಾಗಲಿ ಎಂದು ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.