ಕೋಲಾರದಿಂದ ವರುಣಾಕ್ಕೆ? ತಳಮಳ ಸೃಷ್ಟಿಸಿದ ರಾಹುಲ್ ಸಲಹೆ ; ಗೊಂದಲದಲ್ಲಿ ಸಿದ್ದರಾಮಯ್ಯ
Team Udayavani, Mar 19, 2023, 7:10 AM IST
ಬೆಂಗಳೂರು: ಸಿದ್ದರಾಮಯ್ಯ ಕೋಲಾರದ ಬದಲು ವರುಣಾದಲ್ಲಿ ಸ್ಪರ್ಧಿಸುವುದು ಸೂಕ್ತ ಎಂದು ಖುದ್ದು ರಾಹುಲ್ ಗಾಂಧಿ ಸಲಹೆ ನೀಡಿದ್ದು, ಇದು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್‌ನಲ್ಲಿ ಹಲವು ವಿದ್ಯಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಕೋಲಾರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದ ಸಿದ್ದರಾಮಯ್ಯ ಅವರಿಗೂ ಈ ಬೆಳವಣಿಗೆ ತೀವ್ರ ಮುಜುಗರ ಉಂಟುಮಾಡಿದೆ.
ದಿಲ್ಲಿಯಲ್ಲಿ ಶುಕ್ರವಾರ ನಡೆದ ಕೇಂದ್ರ ಚುನಾವಣ ಸಮಿತಿ ಸಭೆಯಲ್ಲಿ ಕೋಲಾರದ ಬಗ್ಗೆ ಪ್ರಸ್ತಾವವಾಗುತ್ತಲೇ ರಾಹುಲ್ ಗಾಂಧಿ, “ಅಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಸೂಕ್ತವಲ್ಲ’ ಎಂದು ಹೇಳಿದ್ದು, ಸದ್ಯಕ್ಕೆ ಅಲ್ಲಿನ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಿಲ್ಲ.
ಎಐಸಿಸಿಯಿಂದ ನಡೆಸಲಾದ ನಾಲ್ಕೂ ಸಮೀಕ್ಷೆಗಳಲ್ಲಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಗೆಲುವು ಕಷ್ಟ. ಅವರನ್ನು ವಿಪಕ್ಷಗಳು ಸೋಲಿಸುತ್ತವೆ ಎಂಬ ಅಂಶ ವ್ಯಕ್ತವಾಗಿರುವುದರಿಂದ ರಾಹುಲ್ ಈ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ರಾಹುಲ್ ಸಲಹೆಯನ್ನು ಒಪ್ಪುವಂತೆಯೂ ಇಲ್ಲ, ನಿರಾಕರಿಸುವಂತೆಯೂ ಇಲ್ಲ ಎಂಬ ಸಂದಿಗ್ಧ ಸ್ಥಿತಿ ಸಿದ್ದರಾಮಯ್ಯರದ್ದಾಗಿದೆ. ಇದು ಅವರ ಆಪ್ತರು ಹಾಗೂ ಕೋಲಾರದ ಮುಖಂಡರಲ್ಲಿ ತಳಮಳ ಮತ್ತು ಗೊಂದಲ ಸೃಷ್ಟಿಸಿದೆ.
ಇನ್ನೊಂದೆಡೆ, ಕಾಂಗ್ರೆಸ್ ವಿರುದ್ಧ ರಾಜಕೀಯ ದಾಳಿಗೆ ಸಮಯ ಬರಲಿ ಎಂದು ಕಾಯುತ್ತಿದ್ದ ಬಿಜೆಪಿಗೆ ಇದರಿಂದ ಅಸ್ತ್ರ ಸಿಕ್ಕಂತಾಗಿದ್ದು, “ವಲಸೆ ರಾಮಯ್ಯ’ ಎಂಬ ಟೀಕೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕೋಲಾರದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ನಡುವೆ ಪ್ರತ್ಯೇಕ ಮಾತುಕತೆ ನಡೆಯಿತು. ನೀವು ಕೋಲಾರದಿಂದ ಸ್ಪರ್ಧಿಸುವುದು ಸೂಕ್ತವಲ್ಲ. ಅಲ್ಲಿ ನೀವು ಸ್ಪರ್ಧಿಸಿದರೆ ಗೆಲುವಿಗೆ ಹೆಚ್ಚು ಶ್ರಮ ಹಾಕಬೇಕಾದೀತು. ನಿಮಗೆ ರಾಜ್ಯ ಪ್ರವಾಸ ಮಾಡಲು ಕಷ್ಟವಾದೀತು. ಹೀಗಾಗಿ ಯೋಚಿಸಿ ಎಂದು ವರಿಷ್ಠರು ಸಲಹೆ ನೀಡಿದರು ಎನ್ನಲಾಗಿದೆ.
ನಿಗದಿತ ಕಾರ್ಯಕ್ರಮ ರದ್ದು
ಕೋಲಾರದ ಬದಲು ವರುಣಾದಿಂದಲೇ ಸ್ಪರ್ಧೆ ಒಳಿತು ಎಂಬ ಸಲಹೆಯನ್ನೂ ಹೈಕಮಾಂಡ್ ನೀಡಿದೆ. ಆದರೆ ಅಂತಿಮ ನಿರ್ಧಾರ ಸಿದ್ದರಾಮಯ್ಯರದ್ದೇ ಎನ್ನಲಾಗಿದೆ. ರಾಹುಲ್ ಸಲಹೆ ಬಳಿಕವೂ ಕೋಲಾರಕ್ಕೆ ಪಟ್ಟು ಹಿಡಿಯುವುದು ಬೇಡ ಎಂದು ಸಿದ್ದರಾಮಯ್ಯ ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ರಾಹುಲ್ ಅವರ ದಿಢೀರ್ ಸಲಹೆಯಿಂದ ಸಿದ್ದರಾಮಯ್ಯ ಸ್ವಲ್ಪ ನಿರಾಶರಾಗಿದ್ದು, ಶನಿವಾರ ಹಾಗೂ ಸೋಮವಾರ ಕೋಲಾರದಲ್ಲಿ ನಿಗದಿಯಾಗಿದ್ದ ತನ್ನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ದಿಲ್ಲಿಯಿಂದ ಮರಳಿದ ಕೂಡಲೇ ಆಪ್ತರೊಂದಿಗೆ ಸಭೆ ನಡೆಸಿದರು.
ಕೋಲಾರದಲ್ಲಿ ಸ್ಪರ್ಧಿಸದಿರುವುದು ಸಿದ್ದರಾಮಯ್ಯ ಅವರದೇ ತೀರ್ಮಾನ ಎಂದು ಕೋಲಾರ ಜಿಲ್ಲಾ ನಾಯಕರು ಮೊದಲಿಗೆ ಸಭೆಗೆ ಬಾರದೆ ಅತೃಪ್ತಿ ಹೊರಹಾಕಿದರು. ಮಾಜಿ ಸಚಿವರಾದ ನಸೀರ್ ಅಹಮದ್, ಎಂ.ಆರ್.ಸೀತಾರಾಂ ಮಾತ್ರ ಬಂದಿದ್ದರು. ಬಳಿಕ ಮಧ್ಯಾಹ್ನ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲ ನಾಯಕರೂ ಭಾಗವಹಿಸಿದ್ದರು.
ಯಾವುದೇ ಕಾರಣಕ್ಕೂ ತೀರ್ಮಾನ ಬದಲಿಸಬೇಡಿ. ನಾವು ದಿಲ್ಲಿಗೆ ನಿಯೋಗ ಕೊಂಡೊಯ್ದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುತ್ತೇವೆ. ನೀವೇ ಸ್ಪರ್ಧಿಸಬೇಕು ಎಂದು ಕೋಲಾರ ಜಿಲ್ಲಾ ನಾಯಕರು ಒತ್ತಡ ಹೇರಿದರು.
ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಈಗ ನೀವು ಹಿಂದೆ ಸರಿದರೆ ಬೇರೆಯೇ ಸಂದೇಶ ಹೋಗುತ್ತದೆ ಹಾಗೂ ನಮಗೆ ತೀವ್ರ ಹಿನ್ನಡೆಯಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ನೀವು ಬರಲೇಬೇಕು ಎಂದು ಪಟ್ಟು ಹಿಡಿದರು. ಆದರೆ ಸಿದ್ದರಾಮಯ್ಯ ಅವರು, ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನೇನೂ ಮಾಡಲಾಗದು ಎಂದರು ಎಂದು ತಿಳಿದು ಬಂದಿದೆ.
2 ಕಡೆ ಸ್ಪರ್ಧೆಗೂ ಚಿಂತನೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಮುಖಂಡರ ಒತ್ತಡ ಹೆಚ್ಚಾದರೆ ಹಾಗೂ ಹೈಕಮಾಂಡ್ ಒಪ್ಪಿದರೆ ಸಿದ್ದರಾಮಯ್ಯ ವರುಣಾ ಹಾಗೂ ಕೋಲಾರದಿಂದಲೂ ಸ್ಪರ್ಧಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಬಿಜೆಪಿ-ಜೆಡಿಎಸ್ ತಂತ್ರಗಾರಿಕೆ ಏನು?
ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧಿಸಿದರೆ ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯತಂತ್ರವೂ ಬದಲಾಗಲಿದೆ. ವರುಣಾದಲ್ಲಿ ಬಿಜೆಪಿ ವಿಜಯೇಂದ್ರ ಅವರನ್ನು ಕಣಕ್ಕಿಳಿಸ ಬಹುದು. ಜೆಡಿಎಸ್‌ನಿಂದಲೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜಿ.ಟಿ.ದೇವೇಗೌಡರಿಗೆ ಹೊಣೆಗಾರಿಕೆ ನೀಡುವ ಸಾಧ್ಯತೆ ಇದೆ. ಸಿದ್ದರಾಮಯ್ಯರ ಸ್ಪಷ್ಟ ನಿರ್ಧಾರದ ಬಳಿಕ ಈ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿವೆ.
ಕೋಲಾರ ಯಾಕೆ ಬೇಡ?
-ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವುದು.
-ಮತ ವಿಭಜನೆಯ ಆತಂಕ.
-ಸಿದ್ದರಾಮಯ್ಯ ಸೋಲಿಗೆ ಜೆಡಿಎಸ್, ಬಿಜೆಪಿ ಕೈಜೋಡಿಸಬಹುದು
-ಪಕ್ಷದಲ್ಲೇ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಅಸಮಾಧಾನ.
ವರುಣಾ ಹೇಗೆ ಸುರಕ್ಷಿತ?
-ಕುರುಬ ಮತದಾರರ ಸಂಖ್ಯೆ ಹೆಚ್ಚು.
-ಹಿಂದೆ ಪ್ರತಿನಿಧಿಸಿದ್ದ ಪರಿಚಿತ ಕ್ಷೇತ್ರ.
-ಪ್ರಚಾರದ ಉಸ್ತುವಾರಿಯನ್ನು ಪುತ್ರ ನೋಡಿಕೊಳ್ಳಬಹುದು.
-ರಾಜ್ಯ ಪ್ರವಾಸಕ್ಕೆ ಹೆಚ್ಚು ಗಮನ ನೀಡಲು ಸಾಧ್ಯವಾದೀತು.
ಸಿದ್ದರಾಮಯ್ಯ ಕೋಲಾರಕ್ಕೆ ಹೋದಾಗಲೇ ಗೆಲ್ಲುವುದಿಲ್ಲ ಎಂಬ ವರದಿಗಳು ಬಂದಿದ್ದವು. ಅದೇ ಕಾರಣಕ್ಕೆ ಅಲ್ಲಿ ಸ್ಪರ್ಧೆ ಬೇಡ ಎಂದು ಹೈಕಮಾಂಡ್ ಹೇಳಿರಬಹುದು. ಅವರಿಗೆ ಅಲೆದಾಟ ತಪ್ಪಿದ್ದಲ್ಲ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಸಿದ್ದರಾಮಯ್ಯ ಅನಗತ್ಯವಾಗಿ ಓಡಾಡಿ ಅಲ್ಲಿ, ಇಲ್ಲಿ ಎಂದು ಕಥೆ ಹೇಳುತ್ತಾರೆ. ಅವರು ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಹೇಳಿದ್ದೆ. ನನ್ನ ಪ್ರಕಾರ ಅವರು ವರುಣಾದಲ್ಲೇ ಸ್ಪರ್ಧಿಸುತ್ತಾರೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.