ಸಿದ್ದರಾಮಯ್ಯಗೆ “ಮೀಟರ್’ ಇದೆಯೇ?
Team Udayavani, Sep 25, 2017, 8:48 AM IST
ಬೆಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ “ಮೀಟರ್ ಇಲ್ಲ’ ಎಂಬ ಪದ ಬಳಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ತಮಗೆ ಮೀಟರ್ ಇದೆಯೇ ಎಂಬುದನ್ನು ಅರಿತುಕೊಳ್ಳಲಿ’ ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ಎಸ್.ಸುರೇಶಕುಮಾರ್ ಟೀಕಿಸಿದ್ದಾರೆ.
“ಮೀಟರ್ ಎಂಬುದು ಭೂಗತ ಜಗತ್ತಿನಲ್ಲಿ, ರೌಡಿಗಳ ಸಾಮ್ರಾಜ್ಯದಲ್ಲಿ ಪ್ರಚಲಿತವಾಗಿರುವ ಪದ. ಮುಖ್ಯಮಂತ್ರಿಯಂತಹ ಗೌರವಯುತ ಸ್ಥಾನದಲ್ಲಿರುವವರು ಅದನ್ನು ಬಳಸಬಾರದಿತ್ತು. ಆದರೆ, ಸಿದ್ದರಾಮಯ್ಯ ಭೂಗತ ಜಗತ್ತಿನ ಶಬ್ದವನ್ನು ಬಳಸಿಕೊಳ್ಳುವ ಮೂಲಕ ಸಮಾಜಕ್ಕೆ ಕೆಟ್ಟ ಉದಾಹರಣೆಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಜನರ ಚಪ್ಪಾಳೆ ಗಿಟ್ಟಿಸಲು ಹೋಗಿ ಸಣ್ಣವರಾಗಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸುರೇಶ್‌ಕುಮಾರ್, ಮೀಟರ್ ಪದವನ್ನು ಯಾರ ಬಗ್ಗೆಯೂ ನಾನು ಬಳಸುವುದಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಗತ್ಯ ಪ್ರತಿಕ್ರಿಯೆ ಕೊಡಬೇಕಾಗಿರುವುದರಿಂದ ಆ ಪದವನ್ನು ಅನಿವಾರ್ಯವಾಗಿ ಬಳಸಬೇಕಾಗಿದೆ. ಯಡಿಯೂರಪ್ಪ ಅವರಿಗೆ ಮೀಟರ್ ಇಲ್ಲ ಎಂದು ನಡತೆ ಪ್ರಮಾಣಪತ್ರ ಕೊಟ್ಟಿರುವ ಅವರಿಗೆ ಅದು ಇದೆಯೇ? ಒಬ್ಬ ಮುಖ್ಯಮಂತ್ರಿಯಾಗಿ ಅವರ ಪಕ್ಷದ ಅಧ್ಯಕ್ಷೆ, ಉಪಾಧ್ಯಕ್ಷರ ಭೇಟಿಗೆ ಅವಕಾಶ ಕೇಳುವ ಮೀಟರ್ ಇದೆ ಎಂದು
ಎಂದಿಗೂ ರುಜುವಾತು ಪಡಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬೀದಿ ದಾಸಯ್ಯನಂತೆ ಹೇಳಿಕೆ
ಶಿವಮೊಗ್ಗ: ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಘನತೆಗೆ ಗೌರವ ತರುವಂಥದ್ದಲ್ಲ. ಬೀದಿಯಲ್ಲಿ ಹೋಗುವ ದಾಸಯ್ಯರಂತೆ ಹೇಳಿಕೆ ನೀಡತೊಡಗಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಇದೀಗ ಮಾಜಿ ಮುಖ್ಯಮಂತ್ರಿ
ಇರಬಹುದು, ಏಪ್ರಿಲ್ ನಂತರ ಸಿದ್ದರಾಮಯ್ಯ ಕೂಡ ಮಾಜಿ ಮುಖ್ಯಮಂತ್ರಿ ಆಗುತ್ತಾರೆ. ಸಿದ್ದರಾಮಯ್ಯಗೆ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ ಎಂದೆನಿ ಸಿರಬೇಕು. ಹೀಗಾಗಿ ಏನೇನೋ ಹೇಳಿಕೆ ನೀಡತೊಡಗಿದ್ದಾರೆ ಎಂದು ಲೇವಡಿ ಮಾಡಿದರು. ಯಡಿಯೂರಪ್ಪ ಓರ್ವ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಹೌದು. ಅವರ ವಿರುದ್ಧ ಸಿಎಂ ಬಳಸಿರುವ ಪದ ಅಕ್ಷಮ್ಯ ಅಪರಾಧ. ಸಿದ್ದರಾಮಯ್ಯ ಕೂಡಲೇ ಯಡಿಯೂರಪ್ಪ, ಬಿಜೆಪಿ ಹಾಗೂ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ವಿನಯ್ ನನ್ನ ಪಿಎ ಅಲ್ಲ: “ವಿನಯ್ ನನ್ನ ಆಪ್ತ ಸಹಾಯಕ ಅಲ್ಲ. ನನಗೂ ಆತನಿಗೂ ಯಾವುದೇ ಸಂಬಂಧವಿಲ್ಲ’ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಸಂಬಂಧ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ಇನ್ನು ಮುಂದೆ ವಿನಯ್ ಈಶ್ವರಪ್ಪರ ಪಿಎ ಎಂದು ಅನಗತ್ಯ ಸಂಬಂಧ ಕಲ್ಪಿಸಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಬಾರದು ಎಂದು ಆದೇಶ ನೀಡಿದೆ. ಹೀಗಾಗಿ ವಿನಯ್, ಕೆ.ಎಸ್. ಈಶ್ವರಪ್ಪರ ಆಪ್ತ ಸಹಾಯಕ ಎಂದು ಪ್ರಸಾರ ಮಾಡಬಾರದು. ವಿನಯ್ ಹಾಗೂ ಸಂತೋಷ್ ನಡುವೆ ನಡೆದಿರುವ ಘಟನೆ ವೈಯಕ್ತಿಕ. ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ’ ಎಂದು ತಿಳಿಸಿದರು.
“ಮತಭಿಕ್ಷೆ ಕೇಳುವವರೆಲ್ಲ ದಾಸಯ್ಯರೇ’
ಪ್ರಜಾಪ್ರಭುತ್ವದಲ್ಲಿ ಮತಭಿಕ್ಷೆ ಕೇಳುವವರೆಲ್ಲರೂ ದಾಸಯ್ಯರೇ. ಜನರೇ ಮಾಲೀಕರು. ನಾವೆಲ್ಲ ಸಾರ್ವಜನಿಕರ ಮುಂದೆ ದಾಸಯ್ಯರೇ. ಮತಭಿಕ್ಷೆಗೆ ಜನರ ಬಳಿ ಹೋಗಲೇಬೇಕು. ಈಶ್ವರಪ್ಪ ಅವರಿಗೆ ಬುದ್ಧಿ ಕಡಿಮೆ, ಮೆದುಳಿಲ್ಲ. ಹಾಗಾಗಿ ಏನೇನೋ ಮಾತನಾಡುತ್ತಾರೆ.
●ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರಿಗೆ ಅಹಂಕಾರ ಬಂದಿದೆ. ಈಶ್ವರಪ್ಪ ಅವರಿಗೆ ತಲೆ ಸರಿಯಿಲ್ಲ ಎನ್ನಲು ಸಿದ್ದರಾಮಯ್ಯ ವೈದ್ಯರೇ? ಯಡಿಯೂರಪ್ಪ ಬಗ್ಗೆ ಮೀಟರ್ ಇಲ್ಲ ಎಂಬ ಪದ ಬಳಸುವ ಮೂಲಕ ಮುಖ್ಯಮಂತ್ರಿ ಹುದ್ದೆಗೆ ಕಳಂಕ ತಂದಿದ್ದಾರೆ.
● ಜಗದೀಶ್ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ
ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಯಾವ ಕ್ಷೇತ್ರದಿಂದಾದರೂ ಸ್ಪರ್ಧಿಸಲಿ ಅವರ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧ. ಮುಂಬರುವ ದಿನಗಳಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದೇನೆ. ಕಾಂಗ್ರೆಸ್ ವರಿಷ್ಠರು ಸೂಚಿಸಿದಲ್ಲಿ ಪಕ್ಷದಿಂದಲೇ ಬಿಎಸ್‌ವೈ ವಿರುದ್ಧ ಸ್ಪರ್ದಿಸುವೆ.
●ವರ್ತೂರು ಪ್ರಕಾಶ್, ಶಾಸಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.