ಘಟಾನುಘಟಿ ನಾಯಕರನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ಮುಗಿಸಿದರು: ಶ್ರೀರಾಮುಲು
ಮೀಸಲಾತಿ ಅನುಷ್ಠಾನಕ್ಕೂ ಮುನ್ನ ಜಾತಿಯ ಕುಲ ಶಾಸ್ತ್ರ ಅಧ್ಯಯನ ನಡೆಯಬೇಕು
Team Udayavani, Oct 27, 2022, 2:43 PM IST
ಮೈಸೂರು: ‘ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಹಲವು ದಶಕಗಳಿಂದ ಹೋರಾಟ ನಡೆದಿತ್ತು,ಆ ಬಳಿಕವೇ ಮೀಸಲಾತಿ ಹೆಚ್ಚಳ ಅನುಷ್ಠಾನ ಮಾಡಲಾಗಿದೆ’ ಎಂದು ಸಚಿವ ಬಿ ಶ್ರೀರಾಮುಲು ಗುರುವಾರ ಹೇಳಿದ್ದಾರೆ.
ಏಕಾಏಕಿ ಸಾಧ್ಯವಿಲ್ಲ
ಎಸ್ಸಿ, ಎಸ್ಟಿ ಬಳಿಕ ಉಳಿದ ಸಮುದಾಯಗಳಿಂದ ಮೀಸಲಾತಿಗೆ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಸಮುದಾಯವನ್ನು ಮೀಸಲಾತಿಗೆ ಸೇರಿಸಲು ನಮ್ಮ ಅಭ್ಯಂತರವಿಲ್ಲ. ಮೀಸಲಾತಿ ಅನುಷ್ಠಾನಕ್ಕೂ ಮುನ್ನ ಸಂಬಂಧಪಟ್ಟ ಜಾತಿಯ ಕುಲ ಶಾಸ್ತ್ರ ಅಧ್ಯಯನ ನಡೆಯಬೇಕು. ಮೀಸಲಾತಿ ಅನುಷ್ಠಾನಕ್ಕಾಗಿ ಸಮಿತಿಯನ್ನು ರಚಿಸಬೇಕು. ಆ ಸಮಿತಿ ನೀಡುವ ವರದಿಯನ್ವಯ ಮುಂದಿನ ಕ್ರಮಕೈಗೊಳ್ಳಬೇಕು.ಏಕಾಏಕಿ ಮೀಸಲಾತಿ ಅನುಷ್ಠಾನ ಹೆಚ್ಚಳ ಸಾಧ್ಯವಿಲ್ಲ ಎಂದರು.
ಮೀರ್ ಸಾದಿಕ್
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಾಗ್ದಾಳಿ ನಡೆಸಿ, ‘ಸಿದ್ದರಾಮಯ್ಯ ಮೀರ್ ಸಾದಿಕ್ ರಾಜಕಾರಣಿ. ಹಿಂದುಳಿದ ವರ್ಗಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ.ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಶ್ರೀನಿವಾಸ್ ಪ್ರಸಾದ್ ಮೊದಲಾದ ಘಟಾನುಘಟಿ ಎಸ್ಸಿ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಿದರು’ ಎಂದರು.
ರಾಜಕೀಯ ಇಚ್ಛಾಶಕ್ತಿ
ಎಸ್ಸಿ-ಎಸ್ಟಿ ಮೀಸಲಾತಿ ಅನುಷ್ಠಾನ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ರೆಡಿಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಮೀಸಲಾತಿ ಹೆಚ್ಚಳ ಸಂಬಂಧ ಯಾರ ಕಾಲದಲ್ಲೋ ಸಮಿತಿ ರಚನೆ ಆಗಿರಬಹುದು. ಆದರೆ ಮೀಸಲಾತಿ ಹೆಚ್ಚಳ ಅನುಷ್ಠಾನಕ್ಕೆ ತಂದಿರುವುದು ನಮ್ಮ ಸರ್ಕಾರ.ಅವರಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ. ಹೀಗಾಗಿ ಮೀಸಲಾತಿ ಹೆಚ್ಚಳ ಅನುಷ್ಠಾನಕ್ಕೆ ತಂದಿರಲಿಲ್ಲ. ನಮಗೆ ರಾಜಕೀಯ ಇಚ್ಛಾಶಕ್ತಿ ಇರುವುದರಿಂದ ಮೀಸಲಾತಿ ಹೆಚ್ಚಳ ಅನುಷ್ಠಾನಕ್ಕೆ ತಂದಿದ್ದೇವೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದ ಮೀಸಲಾತಿ ಹೆಚ್ಚಳ ಅನುಷ್ಠಾನಗೊಂಡಿದೆ’ ಎಂದರು.
ಕಾಡುಗೊಲ್ಲ ಸಮುದಾಯಕ್ಕೆ ಅಪಮಾನ
‘ಕಾಂಗ್ರೆಸ್ಸಿನಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ವೇಳೆ ಕಾಡುಗೊಲ್ಲ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ರಾಹುಲ್ ಗಾಂಧಿ ಭೇಟಿ ಮಾಡಿ, ಸಂವಾದಕ್ಕೆ ಮುಂದಾಗಿದ್ದ ಕಾಡುಗೊಲ್ಲರಿಗೆ ತಡೆಯೊಡ್ಡಲಾಗಿದೆ. ಕಾಡುಗೊಲ್ಲರು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಅಡ್ಡಿಪಡಿಸಲಾಗಿದೆ. ಇದು ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ವಿರೋಧಿತನಕ್ಕೆ ಸಾಕ್ಷಿಯಾಗಿದೆ’ ಎಂದರು.
ಬಸ್ ಪ್ರಯಾಣ ದರ ಹೆಚ್ಚಳವಿಲ್ಲ
‘ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಪ್ರಸ್ತಾಪವಿಲ್ಲ. ಸದ್ಯಕ್ಕೆ ಸಾರಿಗೆ ಬಸ್ ದರ ಹೆಚ್ಚಳ ಮಾಡುವುದಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ಸುಗಳ ನಿಯೋಜನೆ ಮಾಡಲು ಆದ್ಯತೆ ನೀಡಲಾಗಿದೆ. ಎಲೆಕ್ಟ್ರಿಕ್ ಬಸ್ಸುಗಳನ್ನು ಸೇವೆಗೆ ಸಮರ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.