ರಾಜ್ಯದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಕುಶಲತೆ ವೃದ್ಧಿ : ಡಿಸಿಎಂ
Team Udayavani, Jul 16, 2021, 3:08 PM IST
ಬೆಂಗಳೂರು: ಪಾಲಿಟೆಕ್ನಿಕ್ ವಿದ್ಯಾರ್ಥಿಗಳಲ್ಲಿ ಕುಶಲತೆ ಹೆಚ್ಚಿಸುವ ದೃಷ್ಟಿಯಿಂದ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ (ಬಿಸಿಐಸಿ) ನಡುವೆ ಶುಕ್ರವಾರ ಮಹತ್ವದ ಒಪ್ಪಂದ ಆಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ರಾಜ್ಯ ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮತ್ತು ಬಿಸಿಐಸಿ ಅಧ್ಯಕ್ಷ ಟಿ.ಆರ್.ಪರಶುರಾಮನ್ ಅವರುಗಳು ಒಪ್ಪಂದಕ್ಕೆ ಸಹಿ ಹಾಕಿದರು.
ಬಳಿಕ ಮಾಧ್ಯಮಗಳಿಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಮಾಹಿತಿ ನೀಡಿದರು.
“ರಾಜ್ಯದ ಯುವಜನರಲ್ಲಿ ಕುಶಲತೆ ಹೆಚ್ಚಿಸಿ ಉತ್ತಮ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಸರಕಾರ ಈಗಾಗಲೇ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದು, ಅದಕ್ಕೆ ಪೂರಕವಾಗಿ ಹೊಸದಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದರು.
ಉದ್ಯೋಗ, ಉದ್ಯಮಶೀಲತೆ, ಸಂಶೋಧನೆ ಹಾಗೂ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕೈಗಾರಿಕೆಗಳಿಗೆ ಹಾಗೂ ಉದ್ಯೋಗ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಹೊಸ ಪಠ್ಯಕ್ರಮ ರಚನೆ ಮಾಡಲು ಈ ಒಪ್ಪಂದ ಬಹಳ ಸಹಕಾರಿ ಆಗಲಿದೆ. ಈ ಬಗ್ಗೆ ಈಗಾಗಲೇ ಸರಕಾರ ಮತ್ತು ಬಿಸಿಐಸಿ ನಡುವೆ ಕೆಲ ಸುತ್ತಿನ ಮಾತುಕತೆ ನಡೆದಿದೆ. ಕೈಗಾರಿಕೆಗಳ ನೆರವಿನಿಂದಲೇ ವಿದ್ಯಾರ್ಥಿಗಳನ್ನು ನುರಿತ ತಂತ್ರಜ್ಞರನ್ನಾಗಿ ರೂಪಿಸಲು ಇದೊಂದು ಮಹತ್ವದ ಕ್ರಮ ಎಂದು ಅವರು ತಿಳಿಸಿದರು.
ತಾಂತ್ರಿಕ ಶಿಕ್ಷಣ ಇಲ್ಲದೆ ಕೈಗಾರಿಕಾಭಿವೃದ್ಧಿ ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈ ಒಪ್ಪಂದಕ್ಕೆ ಬಹಳ ಪ್ರಾಮುಖ್ಯತೆ ಇದೆ ಎಂದು ಡಿಸಿಎಂ ಪ್ರತಿಪಾದಿಸಿದರು.
ಒಪ್ಪಂದದಲ್ಲಿ ಇನ್ನೇನಿದೆ?
ಈ ಒಪ್ಪಂದದಲ್ಲಿ ಇನ್ನಷ್ಟು ಮಹತ್ವದ ಅಂಶಗಳಿದ್ದು, ಆ ಬಗ್ಗೆ ಡಿಸಿಎಂ ಅವರು ನೀಡಿದ ಮಾಹಿತಿ ಹೀಗಿದೆ:
* ವರ್ತಮಾನದ ಜಾಗತಿಕ ಕೈಗಾರಿಕಾ ವ್ಯವಸ್ಥೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಬಿಸಿಐಸಿ ಮತ್ತು ತಾಂತ್ರಿಕ ಶಿಕ್ಷಣ ಸಹಯೋಗದಲ್ಲಿ ಬಿಸಿಐಸಿ- ಡಿಟಿಇ ಕೇಸ್ ಸೆಂಟರ್ ಸ್ಥಾಪನೆಯಾಗಲಿದೆ.
* ಕೈಗಾರಿಕೆಗಳು ಆರು ತಿಂಗಳ ಇಂಟರ್ನ್‌ಶಿಪ್ ವ್ಯವಸ್ಥೆ ಹಾಗೂ ಉದ್ಯೋಗಾವಕಾಶ ಕಲ್ಪಿಸಲು ವಿದ್ಯಾರ್ಥಿಗಳ ವ್ಯಕ್ತಿಚಿತ್ರಣವನ್ನು ಆನ್‌ಲೈನ್ ಮೂಲಕ ನೋಡಿ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
* ತಾಂತ್ರಿಕ ಶಿಕ್ಷಣ ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ಒದಗಿಸಲು ನೆರವಾಗುವುದು, ಅಧ್ಯಾಪಕರ ಜ್ಞಾನಾಭಿವೃದ್ಧಿಗೆ ನುರಿತ ತಜ್ಞರಿಂದ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು.
* ವಿದ್ಯಾರ್ಥಿಗಳು ಪಠ್ಯದ ಬಗ್ಗೆ ಇನ್ನಷ್ಟು ಆಳವಾಗಿ ತಿಳಿಯಲು ಸಮಕಾಲೀನ ವಿಷಯಗಳ ಬಗ್ಗೆ ಅಧ್ಯಯನಕ್ಕೆ ಅವಕಾಶ ನೀಡುವುದು.
* ಈ ಒಪ್ಪಂದದ ಅಂಶಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ಹಾಗೂ ಎಂಜಿನಿಯರಿಂಗ್ ಮತ್ತು ಡಿಪ್ಲೊಮೋ ವ್ಯಾಸಂಗ, ಭವಿಷ್ಯದಲ್ಲಿ ಕಾರ್ಯಪಡೆ ರಚನೆ ಮಾಡುವುದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ರೂಪುಗೊಳ್ಳಲಿರುವ ಪಠ್ಯಕ್ರಮ ನೆರವಾಗಲಿದೆ.
ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು
ರಾಜ್ಯದ ಸರಕಾರ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದು; ಅದಕ್ಕೆ ಪೂರಕವಾಗಿ ಕೈಗಾರಿಕೆಗಳು ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಸರಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗುಣಮಟ್ಟದ ಕೌಶಲ್ಯತೆಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ಅತ್ಯಗತ್ಯವಾಗಿರುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಈ ಸಂದರ್ಭದಲ್ಲಿ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಯಾಗುತ್ತಿದ್ದು, ಅದರಲ್ಲಿಯೂ ತಾಂತ್ರಿಕ ಶಿಕ್ಷಣಕ್ಕೆ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಈ ಎಲ್ಲ ಅಂಶಗಳನ್ನು ಸರಕಾರ ಪರಿಗಣಿಸಿದೆ. ಸರಿಯಾದ ಸಂದರ್ಭದಲ್ಲಿಯೇ ಆ ನೀತಿ ಜಾರಿಯಾಗುತ್ತಿದೆ. ಈ ಮೂಲಕ ರಾಜ್ಯದ ಪ್ರತಿಯೊಂದು ಸರಕಾರಿ ಶಿಕ್ಷಣ ಸಂಸ್ಥೆಗೆ ಕಾಯಕಲ್ಪ ಸಿಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್.ಮಂಜುನಾಥ್, ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಟಿ.ಆರ್.ಪರಶುರಾಮನ್, ತಾಂತ್ರಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ.ಪದ್ಮಿನಿ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.