State Government; ಮೈತ್ರಿ ಕಹಳೆ: ದಿನಕ್ಕೆ 8 ತಾಸು ಪಾದಯಾತ್ರೆ
ಆ. 3ರ ಬೆಳಗ್ಗೆ 8.30ಕ್ಕೆ ಕೆಂಗೇರಿಯಲ್ಲಿ ಚಾಲನೆ ; ದಿನಕ್ಕೆ 2 ತಂಡಗಳ ನಡಿಗೆ
Team Udayavani, Jul 30, 2024, 7:05 AM IST
ಬೆಂಗಳೂರು: ರಾಜ್ಯ ಸರಕಾರದ ಮೇಲೆ ನಾಲ್ಕು ಆರೋಪಗಳನ್ನು ಹೊರಿಸಿ ರಣಕಹಳೆ ಮೊಳಗಿಸಲು ಟೊಂಕ ಕಟ್ಟಿ ನಿಂತಿರುವ ಬಿಜೆಪಿ-ಜೆಡಿಎಸ್ ಮಿತ್ರಪಕ್ಷಗಳು ಬೆಂಗಳೂರು-ಮೈಸೂರು ನಡುವೆ ಪಾದಯಾತ್ರೆಗೆ ಸರ್ವ ಸಿದ್ಧತೆಗಳನ್ನು ಆರಂಭಿಸಿವೆ. ಆ. 3ರಿಂದ 10ರ ವರೆಗೆ ಪ್ರತೀ ದಿನ ಎರಡು ತಂಡಗಳು ಪಾದಯಾತ್ರೆ ನಡೆಸಲಿದ್ದು, ನಿತ್ಯ ಸರಾಸರಿ 8 ತಾಸು ನಡೆಯಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಪಾದಯಾತ್ರೆ ಅಪರಾಹ್ನ 2 ಗಂಟೆ ವರೆಗೆ ಸಾಗಲಿದೆ. ಭೋಜನದ ಬಳಿಕ ಮತ್ತೊಂದು ತಂಡವು ಸಂಜೆ 4ರಿಂದ 6ರ ವರೆಗೆ ಸಾಗುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಇದರ ಜತೆಗೆ 7 ತಂಡಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಲಾಗಿದೆ.
ಪ್ರತೀ ತಂಡಕ್ಕೆ ಹೊಣೆಗಾರಿಕೆ
ರವಿವಾರವಷ್ಟೇ ಉಭಯ ಪಕ್ಷಗಳ ಸಮನ್ವಯ ಸಭೆ ನಡೆಸಿ ಪಾದಯಾತ್ರೆಯ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಇದಕ್ಕೆ ಪೂರಕವಾಗಿ ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ಬಿಜೆಪಿಯು ಪಾದಯಾತ್ರೆಯ ಯಶಸ್ಸಿಗಾಗಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿಕೊಂಡಿದೆ. ಪಾದಯಾತ್ರೆಯ ನಿರ್ವಹಣೆಗಾಗಿ ತಂಡಗಳನ್ನು ರಚಿಸಿ, ಪ್ರತೀ ತಂಡಕ್ಕೂ ಹೊಣೆಗಾರಿಕೆ ನೀಡಲಾಗಿದೆ.
ಕೆಂಗೇರಿಯಲ್ಲಿ ಚಾಲನೆ
ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆ. 3ರ ಬೆಳಗ್ಗೆ 8.30ಕ್ಕೆ ಕೆಂಗೇರಿ ಬಳಿಯ ಕೆಂಪಮ್ಮ ದೇವಿ ಹಾಗೂ ಪಂಚಮುಖಿ ಗಣಪತಿ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಿ ಪಾದಯಾತ್ರೆಗೆ ಚಾಲನೆ ನೀಡಲು ನಿರ್ಣಯಿಸಲಾಗಿದೆ. ಮಾಜಿ ಸಿಎಂ ಬಿಎಸ್‌ವೈ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ ಸಹಿತ ಉಭಯ ಪಕ್ಷಗಳ ನಾಯಕರು ಚಾಲನೆ ನೀಡಲಿದ್ದಾರೆ ಎಂದರು.
ಮಾರ್ಗ ಇಂದು ಅಂತಿಮ: ಒಟ್ಟು 130 ಕಿ.ಮೀ. ದೂರದ ಪಾದಯಾತ್ರೆ ಇದಾಗಿರಲಿದ್ದು, ನಿತ್ಯ ಸರಾಸರಿ 18-20 ಕಿ.ಮೀ. ಕ್ರಮಿಸ ಬೇಕಿದೆ. ಪಾದಯಾತ್ರೆ ಸಾಗುವ ಮಾರ್ಗ, ವಾಸ್ತವ್ಯ ಹೂಡಬೇಕಾದ ಸ್ಥಳ, ಕಿರು ಸಭೆ ಅಥವಾ ಸಮಾವೇಶ ಏರ್ಪಡಿಸಬೇಕಾದ ಜಾಗ ಇತ್ಯಾದಿಗಳಿನ್ನೂ ಅಂತಿಮಗೊಂಡಿಲ್ಲ. ಇದಕ್ಕಾಗಿ ಮಂಗಳವಾರ ತಾಲೀಮು ನಡೆಸಲಿರುವ ಒಂದು ತಂಡವು ಪಾದಯಾತ್ರೆ ಮಾರ್ಗ ಹಾಗೂ ತಂಗಬೇಕಾದ ಸ್ಥಳದ ಸಮೀಕ್ಷೆ ನಡೆಸಲಿದೆ. ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಪಾದಯಾತ್ರೆಯ ಮಾರ್ಗನಕ್ಷೆ ಬಗ್ಗೆಯೂ ಚರ್ಚೆಗಳು ನಡೆದಿದ್ದು, ಶೀಘ್ರ ಅಂತಿಮಗೊಳ್ಳುವ ಸಾಧ್ಯತೆ ಇದೆ.
7 ದಿನ; 7 ತಂಡ: 7 ದಿನಗಳ ಪಾದಯಾತ್ರೆಯ ನಿರ್ವಹಣೆಗಾಗಿ ದಿನಕ್ಕೊಂದ ರಂತೆ 7 ತಂಡಗಳನ್ನು ರಚಿಸಿದ್ದು, ಅದರಲ್ಲಿ 8 ವಿಧಾನಸಭಾ ಕ್ಷೇತ್ರಗಳ ಶಾಸಕರು, ಪರಾಜಿತ ಅಭ್ಯರ್ಥಿ, ಜಿಲ್ಲಾಧ್ಯಕ್ಷರು, ವಿವಿಧ ಮೋರ್ಚಾ, ಪ್ರಕೋಷ್ಠ, ವಿಭಾಗ ಸೇರಿ ಪಕ್ಷದ ಪದಾಧಿಕಾರಿಗಳು ಇರಲಿದ್ದಾರೆ.
ಪ್ರತೀ ಕ್ಷೇತ್ರದಿಂದ 200-500 ಜನರನ್ನು ಕರೆತರುವ ಗುರಿ: ಪಾದಯಾತ್ರೆ ಮಾಡುವವರಿಗೆ ಪ್ರತೀ ದಿನ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನದ ವ್ಯವಸ್ಥೆಯನ್ನು ತಂಡ ಮಾಡಲಿದ್ದು, ದಾರಿಯುದ್ದಕ್ಕೂ ಧ್ವನಿವರ್ಧಕವುಳ್ಳ ವಾಹನ, ಕಲಾತಂಡಗಳ ನಿರ್ವಹಣೆ, ಮಳೆ ಬಂದರೆ ತಂಗಲು ವ್ಯವಸ್ಥೆ, ವೈದ್ಯೋಪಚಾರ ಇತ್ಯಾದಿ ವ್ಯವಸ್ಥೆ ಇರಲಿದೆ.
ಪ್ರತೀ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 200ರಿಂದ ಗರಿಷ್ಠ 500 ಜನರನ್ನು ಕರೆತರುವ ಗುರಿ ಕೊಡಲಾಗಿದ್ದು, 8 ವಿಧಾನಸಭಾ ಕ್ಷೇತ್ರಗಳಷ್ಟೇ ಅಲ್ಲದೆ ವಿವಿಧ ಮೋರ್ಚಾ, ಪ್ರಕೋಷ್ಠ ಮತ್ತು ವಿಭಾಗಕ್ಕೂ ಈ ರೀತಿಯ ಗುರಿ ನೀಡಲಾಗಿದೆ.
ಹೇಗಿರಲಿದೆ ಮಾರ್ಗ ನಕ್ಷೆ?
ದಿನ 1: ಕೆಂಗೇರಿ ಸಮೀಪದಿಂದ ಬಿಡದಿ
ದಿನ 2: ಬಿಡದಿಯಿಂದ ರಾಮನಗರ
ದಿನ 3: ರಾಮನಗರದಿಂದ ಚನ್ನಪಟ್ಟಣ
ದಿನ 4: ಚನ್ನಪಟ್ಟಣದಿಂದ ಮದ್ದೂರು
ದಿನ 5: ಮದ್ದೂರಿಂದ ಮಂಡ್ಯ
ದಿನ 6: ಮಂಡ್ಯದಿಂದ ಶ್ರೀರಂಗಪಟ್ಟಣ
ದಿನ 7: ಶ್ರೀರಂಗಪಟ್ಟಣದಿಂದ ಮೈಸೂರಿನ ಮಹಾರಾಜಾ ಕಾಲೇಜು
ಮುಡಾ, ವಾಲ್ಮೀಕಿ ನಿಗಮದ ಹಗರಣಗಳನ್ನು ಖಂಡಿಸಿ ಆ. 3ರಿಂದ ಪಾದಯಾತ್ರೆ ನಡೆಸಲಿದ್ದು, ಪಾದಯಾತ್ರೆಯ ಯಶಸ್ಸಿಗಾಗಿ 7 ತಂಡಗಳನ್ನು ರಚಿಸಿದ್ದೇವೆ. ನಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಪಾರದರ್ಶಕ, ಭ್ರಷ್ಟಾಚಾರರಹಿತ ಎಂದೆಲ್ಲ ಹೇಳಿಕೊಂಡು ಅಧಿಕಾರಕ್ಕೆ ಬಂದವರು ಅದಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ದಲ್ಲಿ ಚರ್ಚಿಸಲೆಂದೇ ಇರುವ ವೇದಿಕೆಯಾದ ಅಧಿವೇಶನದಿಂದ ಪಲಾಯನ ಮಾಡಿದ್ದಾರೆ. ಇವರ ವಿರುದ್ಧ ಹೋರಾಡುವ ಅನಿವಾರ್ಯ ಬಂದಿದೆ.
– ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ
ಇಂದಲ್ಲ ನಾಳೆ ಸರಕಾರ ಬೀಳುತ್ತದೆ ಎಂದು ಬಿಜೆಪಿಯವರು ಹೇಳುತ್ತಲೇ ಇರುತ್ತಾರೆ. ಅವರಿಗೆ ಇನ್ನೇನು ಕೆಲಸ? ವಿಪಕ್ಷಗಳು ಕ್ರಿಯಾತ್ಮಕವಾಗಿ ಕೆಲಸ ಮಾಡುವುದಾದರೆ ಮಾಡಲಿ.
-ಡಿ.ಕೆ. ಸುರೇಶ್, ಮಾಜಿ ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.