ಪೋಸ್ಟ್‌ಗಳ ಮೇಲೆ ನಿಗಾ: ಪ್ರಚೋದನಾತ್ಮಕ ಪೋಸ್ಟ್ ಕಳುಹಿಸುವವರ ಮೇಲೆ ಹದ್ದುಗಣ್ಣು
ಡಿ.ಜೆ. ಹಳ್ಳಿ - ಕೆ.ಜಿ. ಹಳ್ಳಿ ಗಲಭೆ ಪ್ರಕರಣ: ಮತ್ತೆ 85 ಬಂಧನ
Team Udayavani, Aug 17, 2020, 6:44 AM IST
ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪ್ರಕರಣದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಹಾಕುವವರ ವಿರುದ್ಧ ಕಠಿನ ಕ್ರಮಕ್ಕೆ ಸರಕಾರ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಗಳು ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಸವಾಲಾಗುತ್ತಿರುವುದರಿಂದ ಈ ಕುರಿತು ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳುವುದಕ್ಕೂ ತೀರ್ಮಾನಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಹಾಕುವವರ ಮೇಲೆ ಹದ್ದಿನ ಕಣ್ಣಿಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಇಂಥ ಘಟನೆ ನಡೆದ ಮೇಲೆ ಕ್ರಮ ತೆಗೆದುಕೊಳ್ಳುವುದು ಒಂದು ಭಾಗ. ಘಟನೆ ಆಗುವ ಮುನ್ನವೇ ಯಾವ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂದು ಚರ್ಚಿಸಲಾಗುತ್ತಿದೆ ಎಂದು ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬೊಮ್ಮಾಯಿ ತಿಳಿಸಿದರು.
ಮುಂದಿನ ವಾರದಲ್ಲಿ ಸೈಬರ್ ಕ್ರೈಮ್ ಪೊಲೀಸರ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರೊಂದಿಗೂ ಸಭೆ ನಡೆಸಿ, ದುರ್ಬಳಕೆ ಮೇಲೆ ನಿರಂತರ ನಿಗಾ ಇಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ ಮುಂಜಾಗ್ರತೆಯಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಆಗಸ್ಟ್ 18ರ ವರೆಗೂ ಜಾರಿಯಲ್ಲಿರಲಿದೆ ಎಂದರು.
ಮತ್ತೆ 85 ಮಂದಿ ಬಂಧನ
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ರವಿವಾರ ಇಬ್ಬರು ಎಸ್‌ಡಿಪಿಐ ಕಾರ್ಯಕರ್ತರ ಸಹಿತ ಮತ್ತೆ 85 ಮಂದಿಯನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 370ಕ್ಕೆ ಏರಿದೆ.
ಗೋವಿಂದಪುರದ ಎಸ್‌ಡಿಪಿಐ ಜಂಟಿ ಕಾರ್ಯದರ್ಶಿ ಸಲೀಂ ಖಾನ್, ಫೈರೋಜ್ ಪ್ರಮುಖ ಬಂಧಿತರು. ಇದಲ್ಲದೆ ಶನಿವಾರ ರಾತ್ರಿಯೂ ಕಾರ್ಯಾಚರಣೆ ನಡೆಸಿ ಕೆಲವರನ್ನು ಬಂಧಿಸಲಾಗಿತ್ತು.
52 ಪ್ರಕರಣ ದಾಖಲು
ಗಲಭೆಗೆ ಸಂಬಂಧಿಸಿದಂತೆ ಕೆ.ಜಿ. ಹಳ್ಳಿಯಲ್ಲಿ 14 ಮತ್ತು ಡಿ.ಜೆ. ಹಳ್ಳಿಯಲ್ಲಿ ಮತ್ತೆ 38 ಪ್ರಕರಣಗಳ ಸಹಿತ ಒಟ್ಟು 52 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೋಷಕರ ಅಳಲು
ಶನಿವಾರ ತಡರಾತ್ರಿ ಹಲವರನ್ನು ಬಂಧಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಆರೋಪಿಗಳ ಪೋಷಕರು ಹೈಡ್ರಾಮಾ ಸೃಷ್ಟಿಸಿದ ಘಟನೆ ರವಿವಾರ ಬೆಳಗ್ಗೆ ನಡೆಯಿತು. ಡಿ.ಜೆ. ಹಳ್ಳಿ ಠಾಣೆ ಬಳಿ ಜಮಾಯಿಸಿದ್ದ ಪೋಷಕರು ಮತ್ತು ಕುಟುಂಬಸ್ಥರು, ಪೊಲೀಸರು ಮಕ್ಕಳನ್ನು ಸುಮ್ಮನೆ ಕರೆದುಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದರು.
ಬಿಜೆಪಿ ಪರಿಶೀಲನ ಸಮಿತಿ ಭೇಟಿ
ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಅರವಿಂದ ಲಿಂಬಾವಳಿ ಮತ್ತು ಸಂಸದ ಪಿ.ಸಿ. ಮೋಹನ್ ನೇತೃತ್ವದ ಬಿಜೆಪಿ ಪರಿಶೀಲನ ತಂಡ ರವಿವಾರ ಡಿ.ಜೆ. ಹಳ್ಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ, ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಶಾಸಕರ ಮನೆ ಮತ್ತು ಪೊಲೀಸ್ ಠಾಣೆ ಗುರಿಯಾಗಿರಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದರು.
ರಾಹುಲ್ ಗಾಂಧಿ ಮೌನವೇಕೆ: ರವಿಶಂಕರ್ ಪ್ರಶ್ನೆ
ಬಿಜೆಪಿ, ಆರೆಸ್ಸೆಸ್ ಸಂಘಟನೆಗಳು ಭಾರತದಲ್ಲಿ ಫೇಸ್‌ಬುಕ್- ವಾಟ್ಸ್ ಆ್ಯಪ್‌ಗಳನ್ನು ನಿಯಂತ್ರಿಸುತ್ತಿವೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ.
‘ಇಂದು ಮಾಹಿತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವಗೊಳಿಸಲಾಗಿದೆ. ಅದೀಗ ನಿಮ್ಮ ಕುಟುಂಬದ ನಿಯಂತ್ರಣದಲ್ಲಿಲ್ಲ. ಅಂದಹಾಗೆ ಬೆಂಗಳೂರಿನಂಥ ಗಲಭೆ ವಿಚಾರಗಳ ಬಗ್ಗೆ ನಿಮ್ಮ ಖಂಡನೆಗಳನ್ನು ಇದುವರೆಗೂ ನಾವು ಕೇಳಿಲ್ಲ. ಈ ಬಗ್ಗೆ ನೀವೇಕೆ ಮಾತನಾಡುತ್ತಿಲ್ಲ? ನಿಮ್ಮ ಧೈರ್ಯ ಎಲ್ಲಿ ಮಾಯವಾಗಿದೆ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
‘ತಮ್ಮ ಪಕ್ಷದ ಜನರ ಮೇಲೆ ಪ್ರಭಾವ ಬೀರಲು ಸಾಧ್ಯವಾಗದೆ ಸೋತವರು ಇಂಥ ಹೇಳಿಕೆ ನೀಡುತ್ತಲೇ ಇರುತ್ತಾರೆ. ಚುನಾವಣೆಯ ಪೂರ್ವದಲ್ಲಿ ಜನರನ್ನು ಸೆಳೆಯಲು, ಸೋಷಿಯಲ್ ಮೀಡಿಯಾ ದತ್ತಾಂಶ ಪಡೆಯಲು ನೀವು ಕೇಂಬ್ರಿಜ್ ಅನಾಲಿಟಿಕಾ ಮತ್ತು ಫೇಸ್‌ಬುಕ್ ಜತೆ ಮೈತ್ರಿ ಮಾಡಿಕೊಂಡಿದ್ದು ಜಗತ್ತಿಗೆಲ್ಲ ಗೊತ್ತಿರುವ ವಿಚಾರ’ ಎಂದು ಟೀಕಿಸಿದ್ದಾರೆ.
ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಎಲ್ಲ ರೀತಿಯ ಭದ್ರತೆ ಒದ ಗಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅವರ ಮನೆ ಬಳಿಯೂ ಸೂಕ್ತ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ.
– ಬಸವರಾಜ ಬೊಮ್ಮಾಯಿ, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.