ಕಾಲೇಜು ಆರಂಭವಾದರೂ ಆನ್ ಲೈನ್ ಕ್ಲಾಸ್ ಗೆ ಮೊರೆಹೋದ ಬಹುತೇಕ ವಿದ್ಯಾರ್ಥಿಗಳು
ಕಾಲೇಜು ತೆರೆದಿದೆ, ಆದರೆ ನಿರೀಕ್ಷಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿಲ್ಲ!
Team Udayavani, Nov 17, 2020, 10:42 AM IST
ಬೆಂಗಳೂರಿನ ಕಾಲೇಜೊಂದರಲ್ಲಿ ಕಂಡು ಬಂದ ದೃಶ್ಯ
ಬೆಂಗಳೂರು: ರಾಜ್ಯಾದ್ಯಂತ ಪದವಿ ಕಾಲೇಜು ಆರಂಭವಾಗಿದ್ದು, ನಿರೀಕ್ಷಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗದೇ ಇದ್ದರೂ, ತರಗತಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಪಾಠ ಆರಂಭಿಸಿದ್ದಾರೆ.
ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ಹಾಗೂ ಪದವಿ ತರಗತಿಯ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಬೋಧನೆ (ಭೌತಿಕ ತರಗತಿ) ಮಂಗಳವಾರದಿಂದ ಆರಂಭವಾಗಿದೆ. ಸರ್ಕಾರದ ಸೂಚನೆಯಂತೆ ಎಲ್ಲ ಕಾಲೇಜುಗಳ ಆಡಳಿತ ಮಂಡಳಿ ಮಕ್ಕಳ ಸುರಕ್ಷಿತೆಗೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಲು ಬೇಕಾದ ವೇಳಾಪಟ್ಟಿಯನ್ನು ತಯಾರಿಸಿಕೊಂಡಿದ್ದಾರೆ.
ಆನ್ ಲೈನ್ ಮತ್ತು ಆಫ್‌ಲೈನ್ ಎರಡು ಆಯ್ಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಮೊದಲ ದಿನ ಆನ್ ಲೈನ್ ತರಗತಿಯಲ್ಲಿ ಭಾಗಿಯಾಗಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಬುಧವಾರದಿಂದ ತರಗತಿ ಬೋಧನೆಗೆ ಹಾಜರಾಗಲಿದ್ದಾರೆ ಎಂದು ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ:ಇಂದಿನಿಂದ ಕಾಲೇಜು ಆರಂಭ: ಕೋವಿಡ್ ಟೆಸ್ಟ್ ಕಡ್ಡಾಯ, ಇಂದಿನಿಂದಲೇ ಶೈಕ್ಷಣಿಕ ವರ್ಷಾರಂಭ
ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ಹಾಗೂ ಪದವಿಯ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ಸೆಮಿಸ್ಟರ್ ಗಳ ವಿದ್ಯಾರ್ಥಿಗಳಿಗೆ ಸಂಪರ್ಕ ತರಗತಿಗಳನ್ನು ನಡೆಸಲು ಬೇಕಾದ ತಯಾರಿ ಮಾಡಿಕೊಂಡಿದ್ದಾರೆ.
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಮೊದಲ ದಿನ ನಿರೀಕ್ಷೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿರಲಿಲ್ಲ. ಪ್ರಾಧ್ಯಾಪಕರು ಕಾಲೇಜಿನಿಂದಲೇ ಆನ್ ಲೈನ್ ತರಗತಿ ನಡೆಸುತ್ತಿದ್ದಾರೆ. ಹಾಗೆಯೇ ಇನ್ನು ಕೆಲವು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಬೇಕಾದ ಪಠ್ಯ ಸಾಮಗ್ರಿ ಸಿದ್ಧಪಡಿಸುತ್ತಿದ್ದಾರೆ. ಇನ್ನು ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೊದಲ ದಿನ ಲ್ಯಾಬ್ ಆಧಾರಿತ ಪ್ರಾಯೋಗಿಕ ತರಗತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಎಂಟು ತಿಂಗಳ ಬಳಿಕ ಕಾಲೇಜು ಆರಂಭ: ಮೊದಲ ದಿನ ವಿದ್ಯಾರ್ಥಿಗಳಿಂದ ಸಾಧಾರಣ ಸ್ಪಂದನೆ
ಕಾಲೇಜು ಆರಂಭವಾಗಿದೆ. ವಿದ್ಯಾರ್ಥಿಗಳ ಸುರಕ್ಷತಗೆ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳು ತಮ್ಮ ಎಚ್ಚರಿಕೆಯಲ್ಲಿರಬೇಕು. ಸಾಮಾಜಿಕ ಅಂತರ ಸಹಿತವಾಗಿ ಎಲ್ಲ ಸುರಕ್ಷತಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲ ವಿದ್ಯಾರ್ಥಿಗಳು ಶುಭವಾಗಲಿ.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.