ಖುಲಾಸೆ ಪ್ರಕರಣಗಳ ಮರು ಪರಿಶೀಲನೆ ಕುರಿತ ಮಾಹಿತಿ ಸಲ್ಲಿಕೆ
Team Udayavani, Sep 7, 2019, 3:00 AM IST
ಬೆಂಗಳೂರು: “ಖುಲಾಸೆ ಪ್ರಕರಣಗಳ ಮರು ಪರಿಶೀಲನೆಗೆ ಸಂಬಂಧಿಸಿದಂತೆ ಮೂರು ಹಂತದ ಖುಲಾಸೆ ಪರಿಶೀಲನಾ ಸಮಿತಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಮಿತಿಗಳು ತಮ್ಮ ಕರ್ತವ್ಯ ಹಾಗೂ ಹೊಣೆಗಾರಿಕೆ ನಿಭಾಯಿಸುತ್ತಿವೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ.
ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ.ಮೊಹ ಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ಸಲ್ಲಿಸಿದರು.
ಖುಲಾಸೆ ಪ್ರಕರಣಗಳ ಮರು ಪರಿಶೀಲನೆಗೆ ಸಂಬಂಧಿಸಿ ದಂತೆ ಸುಪ್ರೀಂಕೋರ್ಟ್ 2014ರ ಜ.14ರಂದು ಕೊಟ್ಟ ನಿರ್ದೇಶನಗಳ ಪಾಲನೆಗೆ 2014ರ ಅ.20ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸುಪ್ರೀಕೋರ್ಟ್‌ನ ನಿರ್ದೇಶನಗಳನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತರಲಾಗುತ್ತಿದೆ. ಅದನ್ನೇ ಮುಂದುವರಿಸಲಾಗುವುದು ಎಂದು ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರದ ಆದೇಶದಂತೆ ಖುಲಾಸೆ ಪ್ರಕರಣ ಗಳ ಮರು ಪರಿಶೀಲನೆಗೆ ರಾಜ್ಯ ವಲಯ ಹಾಗೂ ಜಿಲ್ಲಾ ಮಟ್ಟದಲ್ಲಿ 3 ಹಂತದ ಸಮಿತಿಗಳನ್ನು ರಚಿಸಲಾ ಗಿದೆ. 2016ರಿಂದ 2019ರ ಮಾರ್ಚ್‌ವರೆಗೆ ರಾಜ್ಯ ಮಟ್ಟದ 8, ವಲಯ ಮಟ್ಟದ 143 ಹಾಗೂ ಜಿಲ್ಲಾ ಮಟ್ಟದ 697 ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ. ಇದೇ ಅವಧಿ ಯಲ್ಲಿ ವಲಯ ಮಟ್ಟದ 19,574, ಜಿಲ್ಲಾ ಮಟ್ಟದ 67, 605 ಸೇರಿ ರಾಜ್ಯ ಮಟ್ಟದಲ್ಲಿ ಒಟ್ಟು 86, 187 ಖುಲಾಸೆ ಪ್ರಕರಣಗಳ ಮರು ಪರಿಶೀಲನೆ ನಡೆಸಲಾಗಿದೆ.
ಅಲ್ಲದೆ, 2015ರಿಂದ 2019ರ ಮಾರ್ಚ್‌ವರೆಗೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವಲಯ ಮಟ್ಟದಲ್ಲಿ 1,271 ಹಾಗೂ ಜಿಲ್ಲಾ ಮಟ್ಟದಲ್ಲಿ 974 ತನಿಖಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಸರ್ಕಾರ ನೀಡಿದ ಮಾಹಿತಿಯಲ್ಲಿ ಹೇಳಲಾಗಿದೆ.
ಆದ್ದರಿಂದ ಸುಪ್ರೀಂಕೋರ್ಟ್ ನಿರ್ದೇಶನ ಪಾಲಿಸಲಾಗುತ್ತಿಲ್ಲ, ಖುಲಾಸೆ ಪ್ರಕರಣಗಳ ಮರು ಪರಿಶೀಲನೆಗೆ ನಿಯಮಿತವಾಗಿ ಸಭೆಗಳು ನಡೆಯುತ್ತಿಲ್ಲ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿಲ್ಲ ಎಂಬ ಅರ್ಜಿದಾರರ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.