ಬಿಜೆಪಿಗೆ ಬಿಸಿ ತಂದ ಸಿದ್ದರಾಮೋತ್ಸವದ ಯಶಸ್ಸು : ಇಕ್ಕಟ್ಟಿಗೆ ಸಿಲುಕಿದ ಸಿಎಂ ಬೊಮ್ಮಾಯಿ
Team Udayavani, Aug 4, 2022, 9:53 AM IST
ಬೆಂಗಳೂರು: ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಾ ಹೈರಾಣಾಗಿದ್ದ ರಾಜ್ಯ ಸರಕಾರಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವದ ಯಶಸ್ಸು ಈಗ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಪಕ್ಷ ಹಾಗೂ ಹೈಕಮಾಂಡ್ ನ ವಿಮರ್ಶೆಯ ನಿಕಶಕ್ಕೆ ಒಳಗಾಗುವ ಸಾಧ್ಯತೆ ನಿಚ್ಚಳವಾಗಿದೆ.
ಬೊಮ್ಮಾಯಿ ಅವರ ಕಾರ್ಯಶೈಲಿ, ಕಡತ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಂಘಪರಿವಾರದ ಮುಖಂಡರು ಇತ್ತೀಚೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಸೃಷ್ಟಿಯಾದ ಸೈದ್ಧಾಂತಿಕ ಅಸಮಾಧಾನ ಬೊಮ್ಮಾಯಿ ಸರಕಾರವನ್ನು ಅಲ್ಲಾಡಿಸಿತ್ತು. ಈ ಮಧ್ಯೆ ಸಿದ್ದರಾಮಯ್ಯ ಅಮೃತ ಮಹೋತ್ಸವದ ಯಶಸ್ಸು ಮಲಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಡಿದೆಬ್ಬಿಸಿದ್ದು ರಾಜಕೀಯವಾಗಿ ಬೊಮ್ಮಾಯಿ ಸರಕಾರಕ್ಕೆ ಬಹುದೊಡ್ಡ ಹಿನ್ನಡೆಯನ್ನು ಸೃಷ್ಟಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿರುವ ಸಂದರ್ಭದಲ್ಲೇ ಹುಟ್ಟಿರುವ ಈ ಬೆಳವಣಿಗೆ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದನ್ನೂ ಓದಿ:ಸ್ವಾತಂತ್ರ್ಯೋತ್ಸವ ಸಂದರ್ಭ ಉಗ್ರ ಕೃತ್ಯ?: ಕಟ್ಟುನಿಟ್ಟಿನ ಸೂಚನೆ ನೀಡಿದ ಗುಪ್ತಚರ ಇಲಾಖೆ
ಇದೆಲ್ಲದರ ಬೆನ್ನಲ್ಲೇ ಬಿಜೆಪಿ ಸಂಘಟನಾತ್ಮಕ ಚಿಂತನೆಗಾಗಿ ತನ್ನ ಎಲ್ಲ ಪ್ರಕೋಷ್ಠಗಳ ಮುಖ್ಯಸ್ಥರು ಹಾಗೂ ಸಂಚಾಲಕರ ಸಭೆ ಕರೆದಿದೆ. ನೂತನ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ನೇತೃತ್ವದಲ್ಲಿ ಮಧ್ಯಾಹ್ನ ಒಂದು ಗಂಟೆಯಿಂದ ರಾತ್ರಿಯವರೆಗೂ ಸಭೆ ನಡೆಯಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಂಘ ಪರಿವಾರದ ಹಿರಿಯೊರಬ್ಬರನ್ನು ಇಂದೇ ಭೇಟಿ ಮಾಡಲು ನಿರ್ಧರಿಸಿರುವುದು ಕುತೂಹಲ ಮೂಡಿಸಿದೆ.
ಅಧಿಕಾರಿಗಳಿಗೆ ಕರೆ: ಇದೆಲ್ಲದರ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಬೆಳಗ್ಗೆ ಡಿಜಿಪಿ ಪ್ರವೀಣ್ ಸೂದ್ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರನ್ನು ಕರೆಸಿ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಿಎಂ ಬೊಮ್ಮಾಯಿ, ಗೃಹ ಸಚಿವರ ಅನುಪಸ್ಥಿತಿಯಲ್ಲಿ ಈ ಮಾಹಿತಿ ಸಂಗ್ರಹಣೆ ನಡೆದಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.