ಚುನಾವಣಾ ಸ್ಪರ್ಧೆಗೆ ಸುಮಲತಾ ಪೂರ್ವಸಿದ್ಧತೆ
Team Udayavani, Feb 8, 2019, 12:45 AM IST
ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಂಬರೀಶ್ ಪತ್ನಿ ಸುಮಲತಾ ತೆರೆ-ಮರೆಯಲ್ಲಿ ಪೂರ್ವ ಸಿದ್ಧತೆ ಆರಂಭಿಸಿದ್ದಾರೆ. ರಾಜಕಾರಣದಲ್ಲಿ ಅಂಬರೀಶ್ ಜತೆ ಆಪ್ತರಾಗಿದ್ದ ನಾಯಕರೊಂದಿಗೆ ಚರ್ಚಿಸಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ಪಡೆಯು ತ್ತಿದ್ದಾರೆ. ಜತೆಗೆ ಚಿತ್ರರಂಗದ ಗಣ್ಯರೊಂದಿಗೆ ಮಾತುಕತೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಮೈತ್ರಿ ಅಭ್ಯರ್ಥಿ ಮಾಡುವಂತೆ ಒತ್ತಡ: ಅಂಬರೀಶ್ ರಾಜಕಾರಣದಲ್ಲಿದ್ದ ಸಮಯದಲ್ಲಿ ಅವರಿಗೆ ಆಪ್ತರಾಗಿದ್ದ ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಸೇರಿ ಹಲವಾರು ನಾಯಕರು ಸುಮಲತಾ ಅವರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಂಬರೀಶ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜೆಡಿಎಸ್‌ನ ಹಲವು ನಾಯಕರೂ ಕೂಡ ಸುಮಲತಾ ಅವರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರೆ ಜೆಡಿಎಸ್‌ಗೆ ರಾಜಕೀಯ ಲಾಭವಾಗಲಿದೆ. ಅದಕ್ಕಾಗಿ ಸುಮಲತಾ ಅವರನ್ನೇ ಕಣಕ್ಕಿಳಿಸುವಂತೆ ಪರೋಕ್ಷವಾಗಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಆದರೆ, ದೇವೇಗೌಡರ ಕುಟುಂಬದ ಮೂರನೇ ತಲೆಮಾರು ನಿಖೀಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಆಲೋಚಿಸುತ್ತಿದ್ದು, ಮೈತ್ರಿಯಾದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಬಗ್ಗೆ ವರಿಷ್ಠರಲ್ಲಿ ಜಿಜ್ಞಾಸೆ ಮೂಡಿಸಿದೆ. ಜೆಡಿಎಸ್‌ನ ಕೆಲ ನಾಯಕರು ಸುಮಲತಾಗೆ ಟಿಕೆಟ್ ನೀಡಿದಲ್ಲಿ ಹಾಲಿ ಪಕ್ಷದ ವರ್ಚಸ್ಸಿಗೆ ಉಂಟಾಗಿರುವ ಹಾನಿ ಹಾಗೂ ಜನರ ಮನಸ್ಸಿನಲ್ಲಿ ಪಕ್ಷದ ಬಗ್ಗೆ ಉಂಟಾಗಿರುವ ಅಸಮಾಧಾನವನ್ನು ದೂರ ಮಾಡಬಹುದೆಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಅಭಿಮಾನಿಗಳ ಒತ್ತಡ: ಜೆಡಿಎಸ್ ನಾಯಕರು ಅಂಬರೀಶ್ ಕುಟುಂಬದ ವಿರುದ್ಧ ಹಗುರವಾದ ಮಾತುಗಳನ್ನು ಹರಿಯಬಿಟ್ಟ ನಂತರವಂತೂ ಸುಮಲತಾ ಚುನಾವಣಾ ಸ್ಪರ್ಧೆಗೆ ಎಲ್ಲೆಡೆಯಿಂದ ಒತ್ತಡ ಹೆಚ್ಚಿದೆ. ಅಂಬರೀಶ್ ಅಭಿಮಾನಿಗಳಂತೂ ಸುಮಲತಾ ಅವರನ್ನು ಚುನಾವಣಾ ಅಖಾಡ ಪ್ರವೇಶಿಸುವಂತೆ ಒತ್ತಾಯಿಸುತ್ತಿದ್ದು, ಅಂತಿಮವಾಗಿ ಸುಮಲತಾ ಶೀಘ್ರವೇ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅಂಬರೀಶ್ ಅಭಿಮಾನಿಗಳು ಈಗಾಗಲೇ ಗ್ರಾಮಮಟ್ಟದಲ್ಲಿ ಸುಮಲತಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಾ ಪೂರ್ವ ತಯಾರಿ ಆರಂಭಿಸಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿ ಯಾಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಯಾದರೂ ಕಣಕ್ಕಿಳಿಸಲು ನಿರ್ಧರಿಸಿ ಸುಮಲತಾ ಅವರ ಮನವೊಲಿಸುತ್ತಿದ್ದಾರೆ.
ತೆಲುಗು, ತಮಿಳು ಚಿತ್ರರಂಗ ಬೆಂಬಲ: ಜೆಡಿಎಸ್ ನಾಯಕರ ಮಾತುಗಳಿಂದ ಧೃತಿಗೆಡದಂತೆ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳದಂತೆ ತಮಿಳು ಚಿತ್ರರಂಗದ ರಜನೀಕಾಂತ್, ತೆಲುಗು ಚಿತ್ರರಂಗದ ಚಿರಂಜೀವಿ, ಮೋಹನ್‌ಬಾಬು ಸೇರಿ ಅನೇಕ ಗಣ್ಯರು ಸುಮಲತಾ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಪ್ರಯತ್ನ ನಡೆಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡಿ ಜತೆಗೆ ನಿಲ್ಲುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸುಮಲತಾ ಪರ ನಿಂತಿದೆ. ಸುಮಲತಾ ಚುನಾವಣೆಗೆ ಸ್ಪರ್ಧಿಸಿದರೆ ಪ್ರಚಾರದ ಉಸ್ತುವಾರಿಯನ್ನು ವಹಿಸಿಕೊಳ್ಳುವುದಾಗಿ ದರ್ಶನ್, ಯಶ್ ಸೇರಿದಂತೆ ಅಂಬಿ ಆಪ್ತರಾಗಿದ್ದ ನಟ-ನಟಿಯರೆಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೆ.
ಪರಿಸ್ಥಿತಿ ನಿಭಾಯಿಸುವ ಬಗ್ಗೆ ಆಲೋಚನೆ: ರಾಜಕೀಯ ಬೆಳವಣಿಗೆಗಳು, ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನಾಯಕರ ಅಭಿಪ್ರಾಯ, ಸಲಹೆ, ಸೂಚನೆ, ಮಾರ್ಗದರ್ಶನಗಳನ್ನೆಲ್ಲಾ ತಾಳೆ ಹಾಕುತ್ತಿರುವ ಸುಮಲತಾ, ಚುನಾವಣೆಗೆ ಸ್ಪರ್ಧಿಸುವುದರಿಂದ ಕುಟುಂಬದ ಮೇಲೆ ಉಂಟಾಗಬಹುದಾದ ಪರಿಣಾಮ, ರಾಜಕೀಯ ಅನುಭವವಿಲ್ಲದೆ ಪ್ರವೇಶ ಮಾಡಿ ಮುಖಭಂಗಕ್ಕೆ ಒಳಗಾಗದಂತೆ ಹಾಗೂ ಅಂಬರೀಶ್ ಗೌರವಕ್ಕೆ ಧಕ್ಕೆ ಉಂಟಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.
ಇದರ ನಡುವೆಯೂ ಲೋಕಸಭಾ ಚುನಾವಣಾ ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧರಾಗಿರುವಂತೆ ಕಂಡು ಬಂದಿರುವ ಸುಮಲತಾ, ಅಧಿಕೃತವಾಗಿ ರಾಜಕೀಯ ಪ್ರವೇಶವನ್ನು ಖಚಿತ ಪಡಿಸಬೇಕಿದೆ. ಅದು ಶೀಘ್ರವೇ ಹೊರಬೀಳಲಿದೆ ಎನ್ನುವುದು ಅಭಿಮಾನಿಗಳ ಮಾತಾಗಿದೆ. ಸುಮಲತಾ ಫೆ.11ರಿಂದ 15ರವರೆಗೆ ಮಲೇಷಿಯಾ ಪ್ರವಾಸಕ್ಕೆ ತೆರಳಲಿದ್ದು, ಅದಕ್ಕೆ ಮುನ್ನ ಅಥವಾ ನಂತರ ತಮ್ಮ ನಿರ್ಧಾರ ಪ್ರಕಟಿಸಬಹುದೆಂದು ತಿಳಿದು ಬಂದಿದೆ.
ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.