ಕಂಬಳಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ
Team Udayavani, Nov 7, 2017, 12:33 PM IST
ಬೆಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಅವಕಾಶ ಕಲ್ಪಿಸಿದ್ದನ್ನು ಪ್ರಶ್ನಿಸಿ ಮತ್ತು ಕಂಬಳ ಕ್ರೀಡೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಇದರಿಂದಾಗಿ ಕಂಬಳ ಕ್ರೀಡೆಗೆ ಇದ್ದ ಆತಂಕ ದೂರವಾದಂತಾಗಿದ್ದು, ಕರಾವಳಿ ಜನತೆ ನಿಟ್ಟುಸಿರು ಬಿಡುವಂತಾಗಿದೆ. ನವೆಂಬರ್‌ನಿಂದ ಕರಾವಳಿಯಲ್ಲಿ ಕಂಬಳ ಕ್ರೀಡೆ ಆರಂಭವಾಗುತ್ತಿರುವುದರಿಂದ ಸುಪ್ರೀಂಕೋರ್ಟ್ ತೀರ್ಮಾನಕ್ಕೆ ಆ ಭಾಗದ ಜನ ಕಾಯುತ್ತಿದ್ದರು.
ಸುಗ್ರೀವಾಜ್ಞೆ ಮೂಲಕ ಕಂಬಳಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಪೇಟಾ ಸಂಘಟನೆ, ಕಂಬಳಕ್ಕೆ ತಡೆಯಾಜ್ಞೆ ನೀಡಬೇಕು ಎಂದೂ ಕೋರಿತ್ತು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ತಡೆಯಾಜ್ಞೆ ಕೋರಿಕೆಯನ್ನು ತಿರಸ್ಕರಿಸಿ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆ ವೇಳೆ ಪೇಟಾ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿದೆ.
ಏನಿದು ಪ್ರಕರಣ?: ಈ ಹಿಂದೆ ಸುಪ್ರೀಂಕೋರ್ಟ್ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿತ್ತು. ಇದನ್ನು ಮುಂದಿಟ್ಟುಕೊಂಡು ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಪೇಟಾ ಸಂಘಟನೆ ಕಂಬಳ ಕ್ರೀಡೆ ನಿಷೇಧಿಸುವಂತೆ ಕೋರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಪೀಠ, ಜಲ್ಲಿಕಟ್ಟು ಮಾದರಿಯಲ್ಲಿ ಕಂಬಳ ಮತ್ತು ಎತ್ತಿನಗಾಡಿ ಓಡಿಸುವ ಸ್ಪರ್ಧೆಯನ್ನು ರಾಜ್ಯದಲ್ಲಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ತಕರಾರು ಅರ್ಜಿ ಸಲ್ಲಿಸಿತ್ತು.
ರಾಜ್ಯ ಸರ್ಕಾರವೂ ಕಂಬಳವನ್ನು ಬೆಂಬಲಿಸಿತ್ತಾದರೂ ಅದಕ್ಕೆ ಕಾನೂನು ಮಾನ್ಯತೆ ಇಲ್ಲದ ಕಾರಣ ಹೈಕೋರ್ಟ್‌ನಲ್ಲಿ ಕಂಬಳಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಮಧ್ಯೆ ಜಲ್ಲಿಕಟ್ಟು ನಿಷೇಧಿಸಿದ ಸುಪ್ರೀಂಕೋರ್ಟ್ ಆದೇಶ ವಿರೋಧಿಸಿ ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಅಲ್ಲಿನ ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಕಾನೂನು ಮಾನ್ಯತೆ ನೀಡಲು ಸುಗ್ರೀವಾಜ್ಞೆ ಹೊರಡಿಸಿ ಅದಕ್ಕೆ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿ ಜಲ್ಲಿಕಟ್ಟು ಕ್ರೀಡೆ ಪುನಾರಂಭಗೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.
ಇದರಿಂದ ಪ್ರೇರಿತರಾದ ಕರಾವಳಿ ಭಾಗದ ಜನ ಆ ಭಾಗದಲ್ಲಿ ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಕಂಬಳಕ್ಕೆ ಕಾನೂನು ಮಾನ್ಯತೆ ನೀಡಿ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದರು. ಈ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 1960 ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತಂದು ಕಂಬಳ ಹಾಗೂ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಕಾನೂನಿನ ಮಾನ್ಯತೆ ನೀಡಿತ್ತು. ಈ ಕುರಿತು ಸುಗ್ರೀವಾಜ್ಞೆ ಹೊರಡಿಸಿತ್ತು.
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಪೇಟಾ ಸಂಸ್ಥೆ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಕಂಬಳ ಕ್ರೀಡೆಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕು ಮತ್ತು ಅರ್ಜಿ ಇತ್ಯರ್ಥವಾಗುವವರೆಗೆ ಕಂಬಳಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ, ತಡೆಯಾಜ್ಞೆ ಕೋರಿಕೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಕಂಬಳ ಪ್ರೇಮಿಗಳಲ್ಲಿ ಹರ್ಷ
ಮಂಗಳೂರು: ಕರಾವಳಿ ಸೇರಿದಂತೆ ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕಂಬಳ ಆಯೋಜನೆಗೆ ತಲೆದೋರಿದ್ದ ಆತಂಕ ಸದ್ಯಕ್ಕೆ ದೂರವಾಗಿದೆ. ಜಿಲ್ಲಾ ಕಂಬಳ ಸಮಿತಿ ಈಗಾಗಲೇ ಕಂಬಳ ಆಯೋಜನೆಗೆ ವೇಳಾಪಟ್ಟಿ ಪ್ರಕಟಿಸಿದೆ. ನ.11ರಂದು ಮೂಡಬಿದಿರೆ ಕಡಲಕೆರೆ ನಿಸರ್ಗಧಾಮದಲ್ಲಿ ಮೊದಲ ಕಂಬಳ ನಡೆಯಲಿದೆ.
ಆ ಮೂಲಕ ವಿಜಯೋತ್ಸವ ಆಚರಿಸುವುದಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಪೆಟಾದ ಅರ್ಜಿಯನ್ನು ನ.6ರಂದು ಸುಪ್ರೀ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ಅನಿಶ್ಚಿತ ಪರಿಸ್ಥಿತಿ ತಲೆದೋರಿತ್ತು. ಕಂಬಳ ನಡೆಸಲು ಅವಕಾಶ ನೀಡಿ ಈಗಾಗಲೇ ರಾಷ್ಟ್ರಪತಿಯವರು ಅಧ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಆ.20ರಂದು ಇದರ ಅಧಿಸೂಚನೆಯಾಗಿದ್ದು 2018 ಜ. 20ರವರೆಗೆ ಈ ಅಧ್ಯಾದೇಶ ಊರ್ಜಿತದಲ್ಲಿರುತ್ತದೆ.
ಇದರ ನಡುವೆ ಕಂಬಳ ಆಯೋಜನೆಗೆ ಕಾನೂನು ರೂಪಿಸುವ ಮಸೂದೆ ಮತ್ತೆ ವಿಧಾನಸಭೆಯಲ್ಲಿ ಅನುಮೋದನೆಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾಯೊನ್ಮುಖವಾಗಿದ್ದು ಮಸೂದೆಗೆ ಈಗಾಗಲೇ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಿ ಅನುಮೋದನೆಗೊಳ್ಳುವ ನಿರೀಕ್ಷೆಯೂ ಇದೆ.
ಪ್ರತಿವಾದಿಯಾಗಿ ಪರಿಗಣಿಸಲು ಅರ್ಜಿ
ಪೆಟಾದವರ ಅರ್ಜಿ ವಿಚಾರಣೆ ವೇಳೆ ನಮ್ಮನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಮುಂದಾಗಿದೆ. ಈ ಬಗ್ಗೆ ಸಮಿತಿ ಸಂಜಯ್ ಲುಲಿ ಅವರನ್ನು ನ್ಯಾಯವಾದಿಯಾಗಿ ಸಮಿತಿ ನೇಮಿಸಿದ್ದು ಅವರು ಶೀಘ್ರ ಅರ್ಜಿ ಸಲ್ಲಿಸಲಿದ್ದಾರೆ. ಕಂಬಳಕ್ಕೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿರುವುದು ಸಂತಸ ತಂದಿದೆ’ ಎಂದು ಈ ಸಮಿತಿ ಅಧ್ಯಕ್ಷ ಹಾಗೂ ಕಂಬಳದ ಬಗ್ಗೆ ನಿರಂತರ ಕಾನೂನು ಸಮರ ನಡೆಸುತ್ತಿರುವ ಅಶೋಕ್ ರೈ ಅವರು ತಿಳಿಸಿದ್ದಾರೆ.
“ಕಂಬಳಕ್ಕೆ ತಡೆಯಾಜ್ಞೆ ದೊರಕದು ಎಂಬ ವಿಶ್ವಾಸ ನಮ್ಮಲಿತ್ತು. ತಡೆ ನೀಡಲು ಸುಪ್ರಿಂಕೋರ್ಟ್ ನಿರಾಕರಿಸಿರುವುದು ಸಂತಸ ತಂದಿದೆ. ಕಂಬಳವನ್ನು ಜಲ್ಲಿಕಟ್ಟುಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕಂಬಳ ಜಾನಪದ ಕ್ರೀಡೆಯಾಗಿದ್ದು ಇದರಲ್ಲಿ ಧಾರ್ಮಿಕ ಆಚರಣೆಗಳು ಸಮ್ಮಿಲಿತವಾಗಿದೆ’.
-ಬಾರ್ಕೂರು ಶಾಂತಾರಾಮ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.