ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್!
Team Udayavani, Jun 17, 2024, 7:00 AM IST
ಬೆಂಗಳೂರು: ರೇಣುಕಾಸ್ವಾಮಿಯ ದೇಹದ 4 ಭಾಗಕ್ಕೆ ಕರೆಂಟ್ ಶಾಕ್ ಕೊಟ್ಟು ಹಿಂಸಿಸಿದ ಮೆಗ್ಗರ್ ಉಪಕರಣ ಹಾಗೂ ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ಎಸೆದಿದ್ದಾರೆ ಎನ್ನಲಾದ ರೇಣುಕಾಸ್ವಾಮಿಯ ಮೊಬೈಲ್‌ಗಾಗಿ ಖಾಕಿ ತೀವ್ರ ಶೋಧ ನಡೆಸುತ್ತಿದೆ.
ಮೆಗ್ಗರ್‌ನಿಂದ ರೇಣುಕಸ್ವಾಮಿ ದೇಹದ 4 ಭಾಗಗಳಿಗೆ ಕರೆಂಟ್ ಶಾಕ್ ಕೊಟ್ಟಿರುವ ಮೆಗ್ಗರ್ ಸಾಧನವನ್ನು ಆರೋಪಿಗಳು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಎಸೆದಿರುವ ಸುಳಿವು ಸಿಕ್ಕಿದೆ. ಇದರ ಬೆನ್ನಲ್ಲೇ ಪೊಲೀಸರು ಆ ಸಾಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ರೇಣುಕಸ್ವಾಮಿಯ ದೇಹದ ಬರೋಬ್ಬರಿ 39 ಕಡೆ ಗಾಯಗಳಾಗಿರುವ ಗುರುತು ಪತ್ತೆಯಾಗಿದೆ. ಇನ್ನು ಮೆಗ್ಗರ್‌ನಿಂದ ಕರೆಂಟ್ ಶಾಕ್ ಕೊಟ್ಟಿದ್ದ ನಂದೀಶ್ ಹಾಗೂ ಪವನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಇದನ್ನು ಎಸೆದಿರುವ ಜಾಗದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಎಲೆಕ್ಟ್ರಿಕ್ ಮೆಗ್ಗರ್ ಸಿಕ್ಕಿದರೆ ರೇಣುಕಸ್ವಾಮಿಯನ್ನು ಹಿಂಸಿಸಿ ಹತ್ಯೆ ಮಾಡಿರುವುದಕ್ಕೆ ಇದು ಪ್ರಬಲ ಸಾಕ್ಷ್ಯವಾಗಲಿದೆ. ಶವ ಸಾಗಿಸುವ ವಿಚಾರದ ಬಗ್ಗೆ ನಟ ದರ್ಶನ್ ಜತೆಗೆ ಚರ್ಚಿಸಲು ಆರೋಪಿಗಳು ತೆರಳಿರುವ ವೇಳೆ ರೇಣುಕಸ್ವಾಮಿಗೆ ಕರೆಂಟ್ ಶಾಕ್ ಕೊಡಲು ಬಳಸಿದ್ದ ಎಲೆಕ್ಟ್ರಾನಿಕ್ ಮೆಗ್ಗರ್ ಅನ್ನು ಮಾರ್ಗ ಮಧ್ಯೆ ಎಸೆದಿದ್ದಾರೆ ಎಂಬುದು ಗೊತ್ತಾಗಿದೆ.
ಮೊಬೈಲ್‌ಗಾಗಿ ಹುಡುಕಾಟ
ರೇಣುಕಾಸ್ವಾಮಿಯ ಮೃತದೇಹವನ್ನು ಸುಮ್ಮನಹಳ್ಳಿಯ ರಾಜಕಾಲುವೆಗೆ ಎಸೆದ ಬಳಿಕ ಅದೇ ಜಾಗದಲ್ಲಿ ರೇಣುಕಾಸ್ವಾಮಿ ಹಾಗೂ ಆರೋಪಿಯೊಬ್ಬನ ಮೊಬೈಲ್ ಸೇರಿ ಒಟ್ಟು 2 ಮೊಬೈಲ್ ಅನ್ನು ಮೋರಿಗೆ ಎಸೆದಿದ್ದಾರೆ. ಮೋರಿಗೆ ಎಸೆದಿರುವ ಮೊಬೈಲ್ ಪೈಕಿ ಆರೋಪಿಯೊಬ್ಬನಿಗೆ ಸೇರಿದ ಮೊಬೈಲ್‌ನಲ್ಲಿ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿರುವ ವೀಡಿಯೊವನ್ನು ಚಿತ್ರೀಕರಿಸಲಾಗಿತ್ತು ಎಂಬ ಸಂಗತಿ ಆರೋಪಿಗಳ ವಿಚಾರಣೆ ವೇಳೆ ತಿಳಿದು ಬಂದಿದೆ. ರೇಣುಕಸ್ವಾಮಿ ಪಟ್ಟಣಗೆರೆಯ ಶೆಡ್‌ನಲ್ಲಿ ಕೊಲೆಯಾಗಿರುವ ಸಂಗತಿ ಪೊಲೀಸರ ಗಮನಕ್ಕೆ ಬಾರದಿರಲಿ ಎಂಬ ಕಾರಣಕ್ಕೆ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಆರೋಪಿಗಳು ಆತನ ಮೊಬೈಲ್ ಅನ್ನು ಸ್ವಿಚ್x ಆಫ್ ಮಾಡಿ ಮೋರಿಗೆ ಎಸೆದಿದ್ದಾರೆ ಎನ್ನಲಾಗಿದೆ. ಇದೀಗ ರೇಣುಕಾಸ್ವಾಮಿ ಮೊಬೈಲ್ ಜತೆಗೆ ಹಲ್ಲೆ ನಡೆಸಿರುವ ವೀಡಿಯೋ ಚಿತ್ರಿಕರಿಸಿದ ಮೊಬೈಲ್ ಪತ್ತೆಯಾದರೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಸುತ್ತಿಕೊಂಡಿರುವ ಉರುಳು ಇನ್ನಷ್ಟು ಬಿಗಿಯುವ ಸಾಧ್ಯತೆಗಳಿವೆ.
ಚಿತ್ರಹಿಂಸೆ ಕೊಟ್ಟಿದ್ದಕ್ಕೆ ಸಿಕ್ಕಿವೆ ಪುರಾವೆ?
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದು ಆತನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳು ಖಾಕಿ ಕೈ ಸೇರಿವೆ. ಥಳಿಸಿದ್ದು ಮಾತ್ರವಲ್ಲದೇ ಮರ್ಮಾಂಗಕ್ಕೂ ಕಾಲಿನಿಂದ ಒದ್ದಿದ್ದಾರೆ. ಒಂದು ಮೂಲದ ಪ್ರಕಾರ ಮರ್ಮಾಂಗಕ್ಕೂ ವಿದ್ಯುತ್ ಶಾಕ್ ಕೊಟ್ಟಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಎರಡೂ ಭುಜದಲ್ಲಿ 5 ಕಡೆ ಸುಟ್ಟಿರುವ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ. ತಲೆ ಮೇಲೆ 4 ಬಲವಾದ ಗಾಯಗಳಾಗಿವೆ.
ಶವದಲ್ಲಿದ್ದ ಚಿನ್ನದ ಸರವನ್ನೂ ಬಿಡಲಿಲ್ಲ!
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘಗಳ ಅಧ್ಯಕ್ಷ ಆರೋಪಿ ರಾಘವೇಂದ್ರ, ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಆತನ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿದ್ದಾನೆ. ಇದೀಗ ಪೊಲೀಸರು ಚಿತ್ರದುರ್ಗದಲ್ಲಿರುವ ಆತನ ಮನೆಯಲ್ಲಿ ಮತ್ತೂಮ್ಮೆ ಮಹಜರು ನಡೆಸಿ ಕದ್ದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ರೇಣುಕಸ್ವಾಮಿ ಕೊಲೆಯಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ರಾಘವೇಂದ್ರ ಸ್ಥಳದಿಂದ ಹೋಗಿದ್ದ. ಅನಂತರ ಆತನಿಗೆ ಕರೆ ಮಾಡಿದ ಇತರ ಆರೋಪಿಗಳು 10 ಲಕ್ಷ ರೂ. ದುಡ್ಡಿನ ಆಮಿಷವೊಡ್ಡಿ ಶವ ಸಾಗಿಸಲು ಸಹಾಯ ಕೇಳಿದ್ದರು. ಈ ವೇಳೆ ರಾಘವೇಂದ್ರ ರೇಣುಕಾಸ್ವಾಮಿ ಧರಿಸಿದ್ದ ಚಿನ್ನದ ಸರ, ಉಂಗುರ, ಬೆಳ್ಳಿ ಖಡಗ, ವಾಚ್ ಅನ್ನು ಲಪಟಾಯಿಸಿದ್ದ. ಬಳಿಕ ಬೆಂಗಳೂರಿನ ಲಾಡ್ಜ್ವೊಂದರಲ್ಲಿ ರೂಮ್ ಮಾಡಿ ತನ್ನ ಪತ್ನಿಯನ್ನು ಚಿತ್ರದುರ್ಗದಿಂದ ಕರೆಸಿ ಆಕೆಯ ಕೈಗೆ ಕದ್ದ ಸೊತ್ತು ಕೊಟ್ಟಿದ್ದ. ಪತ್ನಿ ಅದನ್ನು ತೆಗೆದುಕೊಂಡು ಚಿತ್ರದುರ್ಗಕ್ಕೆ ತೆರಳಿದ್ದಳು.
ದರ್ಶನ್ ಮನೆಯಲ್ಲೇ ನಡೆದಿತ್ತಾ ಸ್ಕೆಚ್?
ರೇಣುಕಾಸ್ವಾಮಿ ಶವ ಎಸೆಯುವ ಬಗ್ಗೆ ನಟ ದರ್ಶನ್ ಮನೆಯಲ್ಲೇ ಸ್ಕೆಚ್ ಹಾಕಿದ್ದರು ಎಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಆರೋಪಿಗಳು ಗಾಬರಿಯಾಗಿದ್ದರು. ಈ ವೇಳೆ ಶೆಡ್ ಬಳಿ ಬಂದು ರೇಣುಕಾಸ್ವಾಮಿ ಮೃತಪಟ್ಟಿರುವ ವಿಚಾರ ತಿಳಿದು ದರ್ಶನ್ ಶವ ಎಸೆಯುವ ಬಗ್ಗೆ ಏನಾದರೂ ಮಾಡಿ ಎಂದು ಹೇಳಿದ್ದರು ಎನ್ನಲಾಗಿದೆ. ಇದಾದ ಕೆಲ ಸಮಯದ ಅನಂತರ ಆರೋಪಿ ವಿನಯ್ ಹಾಗೂ ಗ್ಯಾಂಗ್ ಆರ್‌ಆರ್ ನಗರದ ದರ್ಶನ್ ಅವರ ಐಡಿಯಲ್ ಹೋಂನಲ್ಲಿ ಶವ ಬಿಸಾಡುವ ಬಗ್ಗೆ ಚರ್ಚಿಸಿದ್ದರು. ಇದೇ ವೇಳೆ ತನ್ನ ಹೆಸರು ಬಾರದಂತೆ ಶವ ಎಸೆಯಲು 30 ಲಕ್ಷ ರೂಪಾಯಿಗೆ ದರ್ಶನ್ ಡೀಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಒಗೆಯದೇ ಇಟ್ಟಿದ್ದ ಬಟ್ಟೆಯಿಂದ ದರ್ಶನ್‌ಗೆ ಸಂಕಷ್ಟ
ಶುಕ್ರವಾರ ತಡರಾತ್ರಿ ದರ್ಶನ್ ಮನೆಯಲ್ಲಿ ಪೊಲೀಸರು ಮಹಜರು ನಡೆಸಿದ್ದರು. ಹತ್ಯೆ ದಿನ ದರ್ಶನ್ ಧರಿಸಿದ್ದ ಬಟ್ಟೆ, ಶೂ ವಶಕ್ಕೆ ಪಡೆದ ಪೊಲೀಸರು ಅದನ್ನು ಎಫ್ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಬಟ್ಟೆಯನ್ನು ಒಗೆಯದೇ ಇದ್ದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಸ್ಥಳದ ಕುರುಹುಗಳು ಪತ್ತೆಯಾದರೆ ದರ್ಶನ್‌ಗೆ ಸಂಕಷ್ಟ ಎದುರಾಗಲಿದೆ. ಮನೆಯ ಸಿಸಿ ಟಿವಿಯ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಕೀಲರಿಂದ ದರ್ಶನ್ ಭೇಟಿ
ಬೆಂಗಳೂರು: ದರ್ಶನ್ ಪರ ವಕೀಲ ರಂಗನಾಥ್ ರವಿವಾರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ನಟ ದರ್ಶನ್ ಅವರನ್ನು ಭೇಟಿಯಾಗಿ ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ಚರ್ಚಿಸಿದ್ದಾರೆ. ಅನಂತರ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಪೊಲೀಸ್ ಕಸ್ಟಡಿ ಅಂತ್ಯವಾದ ಮೇಲೆ ಸೆಷನ್ಸ್ ನ್ಯಾಯಾಲಯದಲ್ಲಿ ಮೊದಲಿಗೆ ಜಾಮೀನು ಅರ್ಜಿ ಸಲ್ಲಿಸುತ್ತೇವೆ. ಆರೋಪಿಗಳನ್ನು ಶನಿವಾರವೇ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದರಿಂದ ತನಿಖೆ ಪೂರ್ಣಗೊಂಡಿದೆ ಎಂದು ಭಾವಿಸಿ¨ªೆವು ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.