TAPAS UAV ಚಿತ್ರದುರ್ಗದಿಂದ ಹಾರಿ ಕಾರವಾರದ ಅರಬ್ಬಿಯಲ್ಲಿ ಲ್ಯಾಂಡಿಂಗ್
ಸುರಕ್ಷಿತವಾಗಿ ಇಳಿಯುವ ಮೂಲಕ ಹೊಸ ಮೈಲಿಗಲ್ಲು ಸಾಧನೆ
Team Udayavani, Jun 18, 2023, 8:50 PM IST
ಕಾರವಾರ: ಚಿತ್ರದುರ್ಗದಿಂದ ರೆಕ್ಕಿ ಬಿಚ್ಚಿ ಗರಿಗೆದರಿ ಹಾರಿದ ತಪಸ್ ಕಾರವಾರದ ನೌಕಾನೆಲೆ ವ್ಯಾಪ್ತಿಯ ಅರಬ್ಬಿಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ.
ತಪಸ್- 201 ಏರಿಯಲ್ ವೆಹಿಕಲ್‌ನ (ಯುಎವಿ) ಕಮಾಂಡ್ ಮತ್ತು ಕಂಟ್ರೋಲ್ ಸಾಮರ್ಥ್ಯಗಳ ಪ್ರಾಯೋಗಿಕ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಕಾರವಾರ ನೌಕಾನೆಲೆಯಿಂದ 285 ಕಿ.ಮೀ. ದೂರದಲ್ಲಿರುವ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಿಂದ ತಪಸ್ ಹಾರಾಟ ನಡೆಸಿ, ನೌಕಾನೆಲೆಯಿಂದ 148 ಕಿ.ಮೀ. ದೂರದ ಕಡಲಿನಲ್ಲಿದ್ದ ಐಎನ್‌ಎಸ್ ಸುಭದ್ರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ.
ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ಏರಿಯಲ್ ವೆಹಿಕಲ್‌ನ ಸಾಮರ್ಥ್ಯ ಪರೀಕ್ಷೆಗಾಗಿ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಿಂದ ಹಾರಾಟಕ್ಕೆ ಚಾಲನೆ ನೀಡಿತ್ತು. ಈ ಏರಿಯಲ್ ವೆಹಿಕಲ್‌ನ ನಿಯಂತ್ರಣಕ್ಕಾಗಿ ಐಎನ್‌ಎಸ್ ಸುಭದ್ರಾದಲ್ಲಿ ಒಂದು ಗ್ರೌಂಡ್ ಕಂಟ್ರೋಲ್ ಸ್ಟೇಷನ್ (ಜಿಸಿಎಸ್) ಮತ್ತು ಎರಡು ಶಿಪ್ ಡೇಟಾ ಟರ್ಮಿನಲ್ (ಎಸ್‌ಡಿಟಿ) ಸ್ಥಾಪಿಸಲಾಗಿದೆ. 20,000 ಅಡಿ ಎತ್ತರದಲ್ಲಿ ಹಾರಾಡಿದ ತಪಸ್, ಚಿತ್ರದುರ್ಗದಿಂದ 3.30 ಗಂಟೆಗಳ ತಡೆರಹಿತ ಹಾರಾಟ ನಡೆಸಿ ಕಾರವಾರದ ಅರಬ್ಬಿ ಸಮುದ್ರದಲ್ಲಿದ್ದ ಐಎನ್‌ಎಸ್ ಸುಭದ್ರಾ ಇಳಿದಾಣದ ಮೇಲೆ ಸುರಕ್ಷಿತವಾಗಿ ಇಳಿದಿದೆ. ಪ್ರಾಯೋಗಿಕ ಪರೀಕ್ಷೆಯ ಬಳಿಕ ಮತ್ತೆ ಚಿತ್ರದುರ್ಗದ ಎಟಿಆರ್‌ಗೆ ಸುರಕ್ಷಿತವಾಗಿ ತಲುಪಿದೆ.
ಮಧ್ಯಮ ಎತ್ತರದ ಈ ತಪಸ್- 201ನ್ನು ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ಎಡಿಇ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಈ ವೆಹಿಕಲ್, 24ರಿಂದ 30 ಗಂಟೆಗಳಷ್ಟು ಹಾರಾಟ ನಡೆಸುವ ಮೂಲಕ ಮೂರೂ ಸಶಸ್ತ್ರ ಪಡೆಗಳಿಗೆ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಪಾತ್ರಗಳನ್ನು ನಿರ್ವಹಿಸಲು ಅಭಿವೃದ್ಧಿಪಡಿಸಲಾಗಿದೆ. ಪ್ರಿಡೇಟರ್ ಡ್ರೋನ್‌ಗಳ ಭಾರತೀಯ ಆವೃತ್ತಿ ಎಂದು ಕರೆಯಲ್ಪಡುವ ಈ ತಪಸ್, ಮಧ್ಯಮ ಶ್ರೇಣಿಯ ಎಲೆಕ್ಟ್ರೋ ಆಪ್ಟಿಕ್, ಲಾಂಗ್ ರೇಂಜ್ ಎಲೆಕ್ಟ್ರೋ ಆಪ್ಟಿಕ್, ಸಿಂಥೆಟಿಕ್ ಅಪರ್ಚರ್ ರಾಡಾರ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್, ಸಂವಹನ ಬುದ್ಧಿವಂತಿಕೆ ಮತ್ತು ದಿನವಿಡೀ ಕಾರ್ಯಕ್ಷಮತೆಯನ್ನು ಹೊಂದಿದೆ. ನಿತ್ಯದ ಪೇಲೋಡ್‌ಗಳಂತಹ ವಿಭಿನ್ನ ಸಂಯೋಜನೆಯ ಪೇಲೋಡ್‌ಗಳನ್ನು ಸಾಗಿಸಲು ಸಮರ್ಥವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.