ಟಿಕೆಟ್ ಜತೆ ಬಿಜೆಪಿ ಸೇರ್ಪಡೆಗೂ ಸಮೀಕ್ಷೆ
Team Udayavani, Jan 17, 2018, 10:42 AM IST
ಬೆಂಗಳೂರು: ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ ಆಯಿತು, ಇದೀಗ ಅನ್ಯ ಪಕ್ಷಗಳಿಂದ ಬಿಜೆಪಿಗೆ ಬರುವವರನ್ನು ಸೇರಿಸಿಕೊಳ್ಳಲು ಕೂಡ ಸಮೀಕ್ಷೆ! ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿಜೆಪಿ ಸೇರಲು ಮುಂದಾಗಿರುವ ಶಾಸಕರು ಸೇರಿ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಅದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಪರಿಶೀಲಿಸಿದ ಬಳಿಕವೇ ಅಂಥವರಿಗೆ ಮುಂಬರುವ
ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಖಾತರಿಯೊಂದಿಗೆ ಪಕ್ಷಕ್ಕೆ ಬರಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಈ ನಿರ್ಧಾರದಿಂದಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ
ಉದ್ದೇಶದಿಂದ ಅನ್ಯ ಪಕ್ಷಗಳಿಂದ ಶಾಸಕರು ಸೇರಿ ಮುಖಂಡರನ್ನು ಕರೆತಂದು ಟಿಕೆಟ್ ನೀಡಲು ಮುಂದಾಗಿದ್ದ ಬಿಜೆಪಿ ರಾಜ್ಯ ನಾಯಕರ ಯತ್ನಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದಂತಾಗಿದೆ. ಯಾರನ್ನಾದರೂ ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಟಿಕೆಟ್ ನೀಡಿದರೆ ಅದರಿಂದ ಪ್ರತಿಕೂಲ ಪರಿಣಾಮ ಉಂಟಾಗಿ ಕ್ಷೇತ್ರದಲ್ಲಿ ಸೋಲುವಂತಾಗಬಾರದು. ಅದರ ಬದಲು ಪಕ್ಷದಲ್ಲೇ ಸ್ಥಳೀಯ ನಾಯಕತ್ವವನ್ನು ಬೆಳೆಸಿ ಟಿಕೆಟ್ ನೀಡಬೇಕು. ಇಲ್ಲವೇ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನ್ಯ ಪಕ್ಷದವರನ್ನು ಟಿಕೆಟ್ ಖಾತರಿಯೊಂದಿಗೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಅಮಿತ್ ಶಾ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಖಾತರಿಯಾದರೆ ಬಿಜೆಪಿ ಸೇರಲು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹತ್ತಕ್ಕೂ ಹೆಚ್ಚು ಶಾಸಕರು ಮುಂದಾಗಿದ್ದಾರೆ. ಈ ಬಗ್ಗೆ ರಾಜ್ಯದ ಕೆಲ ನಾಯಕರು ಮತ್ತು ಸ್ಥಳೀಯ ಕೆಲವು ಮುಖಂಡರೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಆದರೆ, ಏಕಾಏಕಿ ಇವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಮೊದಲಿನಿಂದಲೂ ಪಕ್ಷಕ್ಕಾಗಿ ದುಡಿದವರು ತಿರುಗಿ ಬೀಳುವ ಸಾಧ್ಯತೆಯಿದ್ದು, ಇದು ಸೋಲಿಗೂ ಕಾರಣವಾಗಬಹುದೆಂಬ ಆತಂಕ ಕಾಡುತ್ತಿದೆ. ಹೀಗಾಗಿ ಪರಿಸ್ಥಿತಿ ಅವಲೋಕನದ
ನಂತರವೇ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ನೀಡಲು ಶಾ ನಿರ್ಧರಿಸಿದ್ದಾರೆ.
ಸಮೀಕ್ಷೆ ಮತ್ತು ಪರಿಶೀಲನೆ: ಈಗಾಗಲೇ ಅನ್ಯ ಪಕ್ಷಗಳಿಂದ ಪಕ್ಷ ಸೇರಲು ಮುಂದಾಗಿರುವ ಶಾಸಕರ ಪಟ್ಟಿಯನ್ನು ಅಮಿತ್ ಶಾ ತರಿಸಿಕೊಂಡಿದ್ದಾರೆ. ಅವರಿಗೆ ಪಕ್ಷದ ಟಿಕೆಟ್ ನೀಡಿದರೆ ಗೆಲುವಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಮತ್ತು ಪಕ್ಷದ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ತಮ್ಮದೇ ಮೂಲಗಳಿಂದ ಸಮೀಕ್ಷೆಯನ್ನೂ ನಡೆಸುತ್ತಿದ್ದಾರೆ. ಇನ್ನೊಂದೆಡೆ ಅಭ್ಯರ್ಥಿಯಾಗುವ ಉದ್ದೇಶದೊಂದಿಗೆ
ಪಕ್ಷಕ್ಕೆ ಸೇರುವವರು ಸ್ವಂತ ಬಲದಿಂದ ಗೆಲ್ಲಲು ಸಾಧ್ಯವೇ? ಟಿಕೆಟ್ ನೀಡುವ ಭರವಸೆಯೊಂದಿಗೆ ಅನ್ಯ ಪಕ್ಷದವರನ್ನು ಸೇರಿಸಿಕೊಂಡಾಗ ಪಕ್ಷದ ಸ್ಥಳೀಯ ಮುಖಂಡರು ತಿರುಗಿ ಬಿದ್ದು ಅದು ಗೆಲುವಿಗೆ ಅಡ್ಡಿಯಾಗಬಹುದೇ? ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾದಾಗ ಪಕ್ಷಕ್ಕೆ ಹೊಸದಾಗಿ ಸೇರುವ ಅಭ್ಯರ್ಥಿ ಗೆಲುವಿನ ಸಂಭವನೀಯತೆ ಎಷ್ಟು? ಎಂಬ ಬಗ್ಗೆ ಪರಿಶೀಲನೆ ನಡೆಸಬೇಕೆಂದು
ಪಕ್ಷದ ರಾಜ್ಯ ಘಟಕಕ್ಕೂ ಸೂಚನೆ ನೀಡಿದ್ದಾರೆ.
ಈ ಪ್ರಕ್ರಿಯೆ ಮುಗಿದ ಬಳಿಕ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಅವರನ್ನು ಒಪ್ಪಿಸಬೇಕು. ಒಂದು ವೇಳೆ ಅವರು ಬಂಡಾಯ
ಏಳುತ್ತಾರೆ, ಇದರಿಂದ ಪಕ್ಷ ಗೆಲ್ಲುವುದಿಲ್ಲವೆಂಬ ಅನುಮಾನ ಬಂದರೆ ಅಂಥವರಿಗೆ ಟಿಕೆಟ್ ನೀಡುವ ಭರವಸೆಯೊಂದಿಗೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ. ಅದರ ಬದಲು ಸ್ಥಳೀಯ ನಾಯಕತ್ವವನ್ನೇ ಬೆಳೆಸೋಣ. ಮೊದಲಿನಿಂದಲೂ ಪಕ್ಷಕ್ಕೆ ದುಡಿದವರಿಗೆ
ಆದ್ಯತೆ ನೀಡಿ ಅವರನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸೋಣ ಎಂಬ ಸಲಹೆಯನ್ನೂ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ರಾಷ್ಟ್ರ ಮಟ್ಟದಲ್ಲೇ ತೀರ್ಮಾನ
ಅಮಿತ್ ಶಾ ನೀಡಿದ ಸೂಚನೆಯಂತೆ ಅನ್ಯ ಪಕ್ಷದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಸ್ಥಳೀಯ ಅಥವಾ ರಾಜ್ಯ ಮಟ್ಟದಲ್ಲಿ ತೀರ್ಮಾನ ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರಮಟ್ಟದಲ್ಲೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಸ್ಥಳೀಯ ಮತ್ತು ರಾಜ್ಯ ಮುಖಂಡರ ಅಭಿಪ್ರಾಯ ಪಡೆದು ಒಮ್ಮತ ಮೂಡದಿದ್ದರೆ ಎಲ್ಲಿ ಹೊಸದಾಗಿ ಬಂದವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲವೋ ಅದನ್ನು ನಿರ್ದಾಕ್ಷಿಣ್ಯವಾಗಿ ಹೇಳಲಿದ್ದಾರೆ. ಸದ್ಯ ಬಿಜೆಪಿಗೆ ಮಂಡ್ಯ ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಹೀಗಾಗಿ ಪಕ್ಷಕ್ಕೆ ಬರುವವರಿಗೆ ಟಿಕೆಟ್ ಖಾತರಿಪಡಿಸಲು ರಾಜ್ಯ ಮುಖಂಡರೂ ಈಗ ಹಿಂದೇಟು ಹಾಕುತ್ತಿದ್ದು, ಅನ್ಯ ಪಕ್ಷಗಳ ಶಾಸಕರ ಸೇರ್ಪಡೆ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.