ಪರಿಷತ್‌ನ 8 ಸದಸ್ಯರ ಅನರ್ಹತೆಗೆ ಬಿಜೆಪಿ ಪಟ್ಟು
Team Udayavani, Sep 2, 2017, 8:02 AM IST
ಬೆಂಗಳೂರು: ಸುಳ್ಳು ಮಾಹಿತಿ ನೀಡಿ ಟಿಎ-ಡಿಎ ಪಡೆದ ನೂತನ ಸಚಿವ ತಿಮ್ಮಾಪುರ್ ಸೇರಿ ಎಂಟು ಮಂದಿ ವಿಧಾನ ಪರಿಷತ್ ಸದಸ್ಯರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಪ್ರತಿ ಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಬಿಜೆಪಿ ನಿಯೋಗ ಶುಕ್ರವಾರ ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿದೆ.
ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಪ್ರಜಾ ಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡಿರುವ ಆರ್. ವಿ. ತಿಮ್ಮಾಪುರ್ ಸೇರಿ 8 ಮಂದಿ ವಿಧಾನ ಪರಿಷತ್ ಸದಸ್ಯರನ್ನು ಅನರ್ಹಗೊಳಿಸಬೇಕು. ಇವರು ದೂರದ ಊರುಗಳ ನಿವಾಸಿಗಳು ಎಂದು ನಕಲಿ
ಪ್ರಮಾಣ ಪತ್ರ ನೀಡಿ ಲಕ್ಷಾಂತರ ರೂ.ಟಿಎ-ಡಿಎ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಈ ಮೂಲಕ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ದೂರಿದರು.
ತಿಮ್ಮಾಪುರ್ ಹಾಗೂ ಉಳಿದ ಸದಸ್ಯರಾದ ಅಲ್ಲಂವೀರಭದ್ರಪ್ಪ, ರಘು ಆಚಾರ್, ಎನ್.ಎಸ್.ಬೋಸರಾಜು, ಎಸ್.ರವಿ, ಜೆಡಿಎಸ್‌ನ ಸಿ.ಆರ್.ಮನೋಹರ್, ಅಪ್ಪಾಜಿಗೌಡ ಹಾಗೂ ಪಕ್ಷೇತರ ಸದಸ್ಯ ಎಂ.ಡಿ ಲಕ್ಷ್ಮಿನಾರಾಯಣ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ರಾಜ್ಯ ಪಾಲರಿಗೆ ನೀಡಿರುವ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯಾಪಾಲರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಸುಳ್ಳು ದಾಖಲೆ ನೀಡಿದ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದೇವೆ. ಆರ್.ಬಿ. ತಿಮ್ಮಾಪುರ ಅವರಿಗೆ ಸಚಿವರಾಗುವ ನೈತಿಕ ಹಕ್ಕಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಯಾವ ನೈತಿಕತೆ ಇಟ್ಟುಕೊಂಡು ಸುಳ್ಳು ಪ್ರಮಾಣ ಪತ್ರ ನೀಡಿದ ಸದಸ್ಯರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಸುಳ್ಳು ಮಾಹಿತಿ ನೀಡಿದ ಸದಸ್ಯರಿಗೆ ಪ್ರಜಾ ಪ್ರತಿನಿಧಿ ಕಾಯ್ದೆ ಪ್ರಕಾರ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸಬೇಕು ಎಂದರು.
ಈ ವಿಚಾರವಾಗಿ ಎಂಟು ಸದಸ್ಯರಿಗೂ ಪ್ರತ್ಯೇಕವಾಗಿ ಪತ್ರ ಬರೆಯುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ವಿಧಾನ ಪರಿಷತ್ ಸಭಾಪತಿಯವರಿಗೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳಿಗೆ ವರದಿ ನೀಡುವಂತೆ ನಿರ್ದೇಶಿಸಲಾಗುತ್ತದೆ ಎಂಬ ಭವರವಸೆಯನ್ನು ರಾಜ್ಯಪಾಲರು ನೀಡಿದ್ದಾರೆ ಎಂದರು. ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ, ಸರ್ಕಾರಕ್ಕೆ ಹಾಗೂ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವ ಎಂಟು ಮಂದಿ ವಿಧಾನಪರಿಷತ್ ಸದಸ್ಯರ ವಿರುದ್ಧ ಸಭಾಪತಿಯವರಿಗೆ ಶನಿವಾರ ಮತ್ತೂಂದು ದೂರು ಸಲ್ಲಿಸಿ, ಅವರೆಲ್ಲರನ್ನು ಅನರ್ಹಗೊಳಿಸುವಂತೆ ಆಗ್ರಹಿಸುತ್ತೇವೆ ಎಂದು ಹೇಳಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಅರವಿಂದ ಲಿಂಬಾವಳಿ, ಮುನಿರಾಜು, ವೈ.ಎ ನಾರಾಯಣಸ್ವಾಮಿ, ಎಂ. ಕೃಷ್ಣಪ್ಪ, ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಉಪಸ್ಥಿತರಿದ್ದರು.
ಅಶೋಕ್ ಆಸ್ತಿ ಬಗ್ಗೆ ತನಿಖೆಯಾಗಲಿ
ಸುಳ್ಳು ದಾಖಲೆ ನೀಡಿ ಟಿಎ-ಡಿಎ ಪಡೆದಿರುವ ಆರೋಪ ಎದುರಿಸುತ್ತಿರುವ ವಿಧಾನಪರಿಷತ್ ಸದಸ್ಯರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿರುವ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ಅಕ್ರಮ ಆಸ್ತಿ ಗಳಿಕೆಯ ಬಗ್ಗೆಯೂ ಸಿಬಿಐ ತನಿಖೆ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಒತ್ತಾಯಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಅಶೋಕ್ ಅವರ ಅಕ್ರಮ ಆಸ್ತಿ ಸಂಪಾದನೆಯ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಅಶೋಕ್ ಅವರು ಪಕ್ಷದ ಬೆಂಬಲದೊಂದಿಗೆ ಚುನಾವಣೆ ಗೆಲ್ಲುತ್ತಿದ್ದಾರೆ. ಅವರು ಧೈರ್ಯವಿದ್ದರೆ ಬಿಜೆಪಿ ಬಿಟ್ಟು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. “ನನ್ನ ವಿರುದ್ಧ ಆರೋಪ ಮಾಡಿರುವ ಪದ್ಮನಾಭ ರೆಡ್ಡಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸಭಾಪತಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ರಘು ಆಚಾರ್ ತಿಳಿಸಿದರು.
ಬಿಜೆಪಿಯಿಂದ ಸುದೀಪ್‌ಗೆ ಗಾಳ?
ಬಿಜೆಪಿಯಲ್ಲೂ ಸಿನಿಮಾ ಸ್ಟಾರ್‌ಗಳ ಬಾಣವಿದೆ. ಈಗಾಗಲೇ ಅನೇಕ ನಟ-ನಟಿಯರು ಬಿಜೆಪಿಯಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ. ನಟ ಸುದೀಪ್ ಅವರೂ ನನಗೆ ಉತ್ತಮ ಗೆಳೆಯರು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದು, ಸುದೀಪ್‌ಗೆ ಗಾಳ ಹಾಕುತ್ತಿರುವ ಸುಳಿವು ನೀಡಿದ್ದಾರೆ. ರಾಜಭವನದಲ್ಲಿ ಸುದ್ದಿಗಾರರರು ನಟ ದರ್ಶನ್ ಕಾಂಗ್ರೆಸ್ ಸೇರುವ ಕುರಿತು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲೂ ಸ್ಟಾರ್ ಬಾಣವಿದೆ. ಹಲವಾರು ನಟ-ನಟಿಯರು ಬಿಜೆಪಿ ಸೇರುವುದಕ್ಕೆ ಆಸಕ್ತಿ ತೋರಿಸಿದ್ದಾರೆ. ಯಾರ್ಯಾರು ಬಿಜೆಪಿ ಸೇರಲಿದ್ದಾರೆ ಎಂಬುದನ್ನು ಸೂಕ್ತ ಸಂದರ್ಭದಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.