High Court ಸಹಕಾರ ಸಂಘಗಳಿಗೇ ಸಿಬಂದಿ ನೇಮಕ ಅಧಿಕಾರ; ಹೈಕೋರ್ಟ್ ಮಹತ್ವದ ತೀರ್ಪು
ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎ ತಿದ್ದುಪಡಿ ಸಂವಿಧಾನ ಬಾಹಿರ
Team Udayavani, Aug 9, 2024, 6:35 AM IST
ಬೆಂಗಳೂರು: ಸಹಕಾರ ಸಂಘಗಳಲ್ಲಿ ನೇಮಕಾತಿ ವೃಂದ ರಚನೆ, ನೇಮಕಾತಿ, ನೌಕರರ ವರ್ಗಾವಣೆ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ಮತ್ತೆ ಸಹ ಕಾರ ಸಂಘಗಳಿಗೆ ದೊರೆತಿದೆ.
ಇವರ ಅಧಿಕಾರವನ್ನುಮೊಟಕುಗೊಳಿಸಿ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ- 2023ರ ಸೆಕ್ಷನ್ 128-ಎಗೆ ತಿದ್ದುಪಡಿ ತಂದಿದ್ದ ರಾಜ್ಯ ಸರಕಾರದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ. ತಿದ್ದುಪಡಿ ಸಂವಿಧಾನಬಾಹಿರ ಎಂದು ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ-2023ರ ಸೆಕ್ಷನ್ 128-ಎ ಇದರ ತಿದ್ದುಪಡಿ ಪ್ರಶ್ನಿಸಿ ಉಪ್ಪಿನಂಗಡಿ ಸಹಕಾರ ಕೃಷಿ ಸಂಸ್ಥೆಯ ಹಾಲಿ ಅಧ್ಯಕ್ಷ ಕೆ.ವಿ. ಪ್ರಸಾದ್ ಮತ್ತು ಇತರರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ| ಅನಂತ್ ರಮಾನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಈ ಆದೇಶವನ್ನು ನೀಡಿದೆ.
ತಿದ್ದುಪಡಿ ಸಂವಿಧಾನ ಬಾಹಿರ
ತೀರ್ಪನ್ನು ಗುರುವಾರ ಪ್ರಕಟಿಸಿದ ನ್ಯಾಯಪೀಠ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128-ಎ ಇದರ ತಿದ್ದುಪಡಿ ಸಂವಿಧಾನದ ಪರಿಚ್ಛೇದ 19 (1)(ಸಿ) ಇದರ ಉಲ್ಲಂಘನೆಯಾಗಿದೆ.
ಹಾಗಾಗಿ ತಿದ್ದುಪಡಿ ಸಂವಿಧಾನ ಬಾಹಿರ ಎಂದು ತೀರ್ಪು ನೀಡಿದೆ. ಅರ್ಜಿದಾರರ ಪರ ವಕೀಲ ಎ. ಕೇಶವ ಭಟ್ ವಾದ ಮಂಡಿಸಿದರು.
ಏನಿದು ಪ್ರಕರಣ?:ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ2023ರ ಸೆಕ್ಷನ್ 128 ಎಗೆ ರಾಜ್ಯ ಸರಕಾರ ತಿದ್ದುಪಡಿ ತಂದಿತ್ತು. ಇದರಿಂದ ಆವರೆಗೆ ಇದ್ದ ನೇಮಕಾತಿ, ವರ್ಗಾ ವಣೆ, ಶಿಸ್ತು ಕ್ರಮಗಳಂತಹ ಅಧಿಕಾರಗಳು ಸಹ ಕಾರ ಸಂಘಗಳ ಕೈತಪ್ಪಿತ್ತು. ಸಹಕಾರ ಸಂಘಗಳನ್ನು ರಚಿಸಿ, ಅವುಗಳನ್ನು ನಿರ್ವಹಿಸುವುದು ಸಂವಿಧಾನದ ಪರಿಚ್ಛೇದ 19 (1)(ಸಿ) ಪ್ರಕಾರ ನಾಗರಿಕರ ಮೂಲಭೂತ ಹಕ್ಕು ಆಗಿದೆ. ಆದರೆ ಸರಕಾರ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128 ಎಗೆ ತಿದ್ದುಪಡಿ ತರುವ ಮೂಲಕ ಸಂವಿಧಾನದತ್ತ ಆ ಮೂಲ ಭೂತ ಹಕ್ಕನ್ನು ರಾಜ್ಯ ಸರಕಾರ ಮೊಟಕು ಗೊಳಿಸಿದೆ.
ಕಾನೂನು ಸುವ್ಯವಸ್ಥೆ, ದೇಶದ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ಬರುವ ಅಪಾಯ ಇದ್ದಾಗ, ಸಾರ್ವ ಜನಿಕ ಸುವ್ಯವಸ್ಥೆ ನಿಯಂತ್ರಣ ಕಳೆದು ಕೊಂಡಾಗ ಮೂಲಭೂತ ಹಕ್ಕುಗಳ ಮೇಲೆ ಸೀಮಿತ ನಿರ್ಬಂಧಗಳನ್ನು ಹೇರಬಹುದು. ಆದರೆ ಈ ಪ್ರಕರಣದಲ್ಲಿ ಅಂತಹ ಸನ್ನಿವೇಶ ಇಲ್ಲ ಎಂದು ಅರ್ಜಿದಾರರರು ವಾದಿಸಿದ್ದರು.
ಅಲ್ಲದೆ ಸ್ಥಳೀಯರು ತಾವೇ ಸೇರಿಕೊಂಡು ಕಾನೂನು ರೀತಿ ರಚಿಸಿಕೊಂಡು ನಿರ್ವಹಣೆ ಮಾಡುತ್ತ ಬಂದಿರುವ ಸಹಕಾರ ಸಂಘಗಳಲ್ಲಿನ ನೌಕರರ ನೇಮಕಾತಿ, ವರ್ಗಾವಣೆ, ಶಿಸ್ತು ಕ್ರಮ ಮತ್ತಿತರ ಆಡಳಿತಾತ್ಮಕ ವಿಚಾರಗಳನ್ನು ಆಯಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ನೋಡಿಕೊಳ್ಳುತ್ತಿದ್ದವು. ಈಗ ರಾಜ್ಯ ಸರಕಾರ ತಿದ್ದುಪಡಿ ತಂದಿದ್ದು, ಇದು ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಲಿದೆ. ಆದ್ದರಿಂದ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128 ಎ ಇದರ ತಿದ್ದುಪಡಿಯನ್ನು ಸಂವಿಧಾನಬಾಹಿರ ಎಂದು ಘೋಷಿಸಬೇಕು ಎಂಬುದಾಗಿ ಅರ್ಜಿದಾರರು ಮನವಿ ಮಾಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.