ಪ್ರತಿಪಕ್ಷಗಳ ಧರಣಿಯೊಂದಿಗೆ ಕಲಾಪ ಸಮಾಪ್ತಿ
Team Udayavani, Nov 25, 2017, 7:20 AM IST
ಸುವರ್ಣಸೌಧ: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮತ್ತೂಬ್ಬ ಸಚಿವ ವಿನಯ್ ಕುಲಕರ್ಣಿ ರಾಜೀನಾಮೆ
ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಉಭಯ ಸದನಗಳಲ್ಲಿ ಪಟ್ಟು ಹಿಡಿದು ಧರಣಿ ನಡೆಸಿದ್ದರಿಂದ ಕೊನೆಯ ದಿನದ ಕಲಾಪ ಬಲಿಯಾಯಿತು.
ಎರಡೂ ಸದನಗಳಲ್ಲಿ ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ವಿರುದ್ಧ ಸಿಬಿಐ ಎಫ್‌ಐಆರ್ ಹಾಕಿರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ
ವಿನಯ್ ಕುಲಕರ್ಣಿ ಕೈವಾಡವಿದ್ದು, ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿ ಸದಸ್ಯರು ನಾಮಫಲಕ ಹಿಡಿದು ಧರಣಿ ನಡೆಸಿದರು. ಮತ್ತೂಂದೆಡೆ ಜೆಡಿಎಸ್ ಸದಸ್ಯರು ನೈಸ್ ಅಕ್ರಮಗಳ ಕುರಿತು ಚರ್ಚೆಗೆ ಸರ್ಕಾರದಿಂದ ಉತ್ತರ ನೀಡಬೇಕು. ನೈಸ್ ಒಪ್ಪಂದ ರದ್ದಾಗಬೇಕೆಂದು ಧರಣಿ ನಡೆಸಿದರು. ಜತೆಗೆ ವಿದ್ಯುತ್ ಖರೀದಿ ಹಗರಣದ ವರದಿ ಬಗ್ಗೆಯೂ ಚರ್ಚೆಗೆ ಒತ್ತಾಯಿಸಿದರು. ಈ
ವಿಚಾರದಲ್ಲಿ ಗದ್ದಲ-ಕೋಲಾಹಲ, ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆದಿದ್ದರಿಂದ ವಿಧಾನಸಭೆಯಲ್ಲಿ ಕಲಾಪ ನಡೆಯದೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತಾಯಿತು.
ಪರಿಷತ್‌ನಲ್ಲಿ ಪ್ರಶ್ನೋತ್ತರ ಹೊರತುಪಡಿಸಿ ಬೇರೆ ಯಾವುದೇ ಕಲಾಪ ನಡೆಯಲಿಲ್ಲ. ಗದ್ದಲದ ನಡುವೆಯೇ ಭೂ ಸುಧಾರಣೆ ತಿದ್ದುಪತಿ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ ಸಂಬಂಧ ಸದನ ಸಮಿತಿ ರಚಿಸುವ ತೀರ್ಮಾನ ಮಾಡಲಾಯಿತು. ವಿಧಾನಸಭೆ: ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಚಿವರೊಬ್ಬರ ಕೈವಾಡ ಇರುವ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು. ನಿಯಮ 69ರಡಿ ಇದೇ ವಿಷಯ ಇದೆ. ಹಾಗಾಗಿ, ಪ್ರಶ್ನೋತ್ತರ ಮುಗಿದ ಬಳಿಕ ಚರ್ಚೆಗೆ ಅವಕಾಶ ಕೊಡುತ್ತೇನೆಂದು ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಪ್ರಶ್ನೋತ್ತರ ಬದಿಗೊತ್ತಿ
ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸಭಾಧ್ಯಕ್ಷರು ನಿರಾಕರಿಸಿದಾಗ, ಸದನದ ಬಾವಿಗಿಳಿದು ಧರಣಿ ಆರಂಭಿಸಿದರು.
ಈ ಮಧ್ಯೆ ವಿದ್ಯುತ್ ಖರೀದಿ ಹಗರಣದ ಸದನ ಸಮಿತಿ ವರದಿ ಮೇಲೆ ಚರ್ಚೆಗೆ ಅವಕಾಶ ಕೊಡಬೇಕು. ಜೊತೆಗೆ ನೈಸ್ ಸಂಸ್ಥೆಯ ಅಕ್ರಮಗಳ ಕುರಿತ ಸದನ ಸಮಿತಿ ವರದಿ ಮೇಲೆ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಉತ್ತರ ಕೊಡಿಸಬೇಕು ಎಂದು ಜೆಡಿಎಸ್
ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ ಹಾಗೂ ಎಚ್.ಡಿ.ರೇವಣ್ಣ ಮನವಿ ಮಾಡಿದರು. ಇದಕ್ಕೂ ಒಪ್ಪದಿದ್ದಾಗ ಜೆಡಿಎಸ್ ಸದಸ್ಯರೂ ಧರಣಿ ಆರಂಭಿಸಿದರು.
ಪ್ರತಿಪಕ್ಷಗಳ ಧರಣಿಯಿಂದ ಸದನದಲ್ಲಿ ಗಲಾಟೆ ಹೆಚ್ಚಾಗಿದ್ದಕ್ಕೆ ಸಭಾಧ್ಯಕ್ಷರು 11 ಗಂಟೆಗೆ ಕಲಾಪವನ್ನು 10 ನಿಮಿಷ ಮುಂದೂಡಿದರು. ಮತ್ತೆ 11.50ಕ್ಕೆ ಕಲಾಪ ಆರಂಭವಾದರೂ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತಮ್ಮ ಬೇಡಿಕೆಗಳಿಗೆ ಪಟ್ಟುಹಿಡಿದು ಧರಣಿ
ಮುಂದುವರಿಸಿದರು. ಪರಿಸ್ಥಿತಿ ಹತೋಟಿಗೆ ಬರದ ಕಾರಣ ಪುನಃ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಅನಿರ್ದಿಷ್ಟಾವಧಿ ಮುಂದೂಡಿಕೆ: ಸದನ ಮತ್ತೆ 12.35ಕ್ಕೆ ಆರಂಭವಾದಾಗ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಈ ಸಂದರ್ಭ ಜೆಡಿಎಸ್ ಸದಸ್ಯರು ಇರಲಿಲ್ಲ. ಗಲಾಟೆ ನಡುವೆ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ
ರಾಮಲಿಂಗಾರೆಡ್ಡಿ ಲಿಖೀತ ಉತ್ತರ ಮಂಡಿಸಿದರು. ಉತ್ತರದ ಪ್ರತಿಯನ್ನು ಹರಿದು ಹಾಕಿದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗಲಾಟೆ ಮುಂದುವರಿದ ಕಾರಣ ಸದನವನ್ನು ಸ್ಪೀಕರ್ ಅನಿರ್ದಿಷ್ಠಾವಧಿಗೆ ಮುಂದೂಡಿದರು.
ವಿಧಾನಪರಿಷತ್: ಮೇಲ್ಮನೆಯಲ್ಲಿ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಯೋಗೀಶ್‌ಗೌಡ ಹತ್ಯೆಪ್ರಕರಣದಲ್ಲಿ ಸಚಿವರ ಕೈವಾಡವಿದ್ದು, ಚರ್ಚೆಗೆ ಅವಕಾಶ ಕೊಡಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದರೆ, ನೈಸ್ ಅಕ್ರಮದ ಬಗ್ಗೆ ಚರ್ಚಿಸಲು
ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಧರಣಿ ಪ್ರತಿಭಟನೆ, ಆಡಳಿತಾರೂಢ ಹಾಗೂ ಪ್ರತಿಪಕ್ಷ ಸದಸ್ಯ ರ ನಡುವೆ ವಾಕ್ಸಮರದಿಂದ ಗದ್ದಲ ಕೋಲಾಹಲ ಉಂಟಾದಾಗ ಸದನ ಮುಂದೂಡಲಾಯಿತು. ಮತ್ತೆ ಕಲಾಪ ಪ್ರಾರಂಭವಾದಾಗಲೂ ಪ್ರತಿಪಕ್ಷ ಸದಸ್ಯರಿಂದ ಪ್ರತಿಭಟನೆ, ಘೋಷಣೆ ಮುಂದುವರಿಯಿತು. ಗದ್ದಲದ ನಡುವೆಯೇ ಭೂ ಸುಧಾರಣೆ ತಿದ್ದುಪಡಿ ವಿಧೇಯಕ್ಕೆ ಅಂಗೀಕಾರ ಪಡೆಯಲಾಯಿತು. ವಿಧಾನಸಭೆಯಲ್ಲಿ ಅಂಗೀಕಾರವಾದ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ವಿಧೇಯಕ-2017ನ್ನು ಮುಂದಿನ ಅಧಿವೇಶನದಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಕರ್ನಾಟಕ
ರಾಜ್ಯ ವಿವಿಗಳ ವಿಧೇಯಕ ಸಂಬಂಧ ಸದನ ಸಮಿತಿ ರಚಿಸುವ ತೀರ್ಮಾನ ಮಾಡಿ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.
ಸಚಿವರ ರಾಜೀನಾಮೆಗೆ ಶೆಟ್ಟರ್ ಬಿಗಿಪಟ್ಟು
ವಿಧಾನಸಭೆ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿರುವುದರಿಂದ ಸಚಿವ ಕೆ.ಜೆ. ಜಾರ್ಜ್ ಹಾಗೂ ಜಿಪಂ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಕೈವಾಡ ಹೊಂದಿರುವ ಸಚಿವ ವಿನಯ ಕುಲಕರ್ಣಿ ತಕ್ಷಣ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಒತ್ತಾಯಿಸಿದರು. ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಪೊಲೀಸ್
ಅಧಿಕಾರಿಯೊಬ್ಬರಿಂದ ರಾಜಿ ಸಂಧಾನ ನಡೆದಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಮಾತನಾಡಿದ ಶೆಟ್ಟರ್, ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಕೈವಾಡವಿದೆ. ಈಗ ಡಿವೈಎಸ್ಪಿ ಸುಲ್ಫಿ ಮೂಲಕ ರಾಜಿಸಂಧಾನ ನಡೆಸಲಾಗುತ್ತಿದೆ. ಹಾಗಾಗಿ, ಇದೊಂದು ಗಂಭೀರ ವಿಷಯವಾಗಿದ್ದು, ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. ಪೊಲೀಸ್ ಅಧಿಕಾರಿಯನ್ನು ತಕ್ಷಣ ಬಂಧಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ವಿನಯ ಕುಲಕರ್ಣಿ ಕೂಡಲೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಲಿಂಗಾಯತ ಹೋರಾಟ ಹತ್ತಿಕ್ಕಲು ಕೊಲೆ ಆರೋಪದ ಷಡ್ಯಂತ್ರ: ವಿನಯ
ಸುವರ್ಣಸೌಧ: “ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೆ, ಬಿಜೆಪಿ ನಾಯಕರು ಲಿಂಗಾಯತ ಧರ್ಮ ಹೋರಾಟವನ್ನು ಹತ್ತಿಕ್ಕಲು ನನ್ನ ವಿರುದ್ಧ ಕೊಲೆ ಆರೋಪ ಹೊರಿಸುತ್ತಿದ್ದಾರೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಯೋಗೀಶ್‌ಗೌಡ ಹತ್ಯೆ
ವಿಚಾರದಲ್ಲಿ ನನಗೆ ಯಾವುದೇ ಸಂಬಂಧ ಇಲ್ಲ. ಯೋಗೀಶ್ ಗೌಡ ಮತ್ತು ಅವರ ಸಹೋದರ ಗುರುನಾಥ ಗೌಡ ರೌಡಿ ಶೀಟರ್ ಅಗಿದ್ದು, ನವಲಗುಂದ, ಧಾರವಾಡ ಹಾಗೂ ಹುಬ್ಬಳ್ಳಿ ನಗರ ಪೊಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರಿಗೂ ಗುರುನಾಥ ಗೌಡನ ಬಗ್ಗೆ ಗೊತ್ತಿದೆ. ಆದರೆ, ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.
ಲಿಂಗಾಯತ ಧರ್ಮದ ಹೋರಾಟದಿಂದ ಕಂಗಾಲಾಗಿರುವ ಬಿಜೆಪಿ ನಾಯಕರು ಲಿಂಗಾಯತ ನಾಯಕನನ್ನು ಹತ್ತಿಕ್ಕಿ, ತಾವು ಲಿಂಗಾಯತ ಸಮುದಾಯದ ಮತ ಸೆಳೆಯಲು ಪ್ರಯತ್ನಿಸಿದ್ದಾರೆ. ಆ ಸಮುದಾಯದ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು ಈಗ ಅದೇ ಸಮುದಾಯದ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯದಿಂದ 9 ಮಂದಿ ಲಿಂಗಾಯತ ಸಂಸದರು ಆಯ್ಕೆಯಾಗಿದ್ದರೂ ಕೇಂದ್ರದಲ್ಲಿ ಒಬ್ಬರಿಗೂ ಮಂತ್ರಿ ಸ್ಥಾನ ನೀಡಿಲ್ಲ. ರಾಜಕೀಯ ಸ್ಥಾನಮಾನ ದೊರೆಯಲು ಕಾರಣವಾದ ಸಮುದಾಯವನ್ನೇ ಬಿಜೆಪಿ ನಿರ್ಲಕ್ಷ್ಯ ಮಾಡಿದೆ. ಈಗ ಹೊರಾಟಗಾರರನ್ನು ಹತ್ತಿಕ್ಕುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ. ಅವರು ಎಷ್ಟೇ ಹತ್ತಿಕ್ಕುವ ಪ್ರಯತ್ನ ನಡೆಸಿದರೂ ನಾವು ಅವರ ಹತ್ತು ಪಟ್ಟು ಹೋರಾಟ ನಡೆಸುತ್ತೇವೆ ಎಂದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಸಿಲುಕಿಸಲು ಬಿಜೆಪಿ ನಾಯಕರ
ಮನೆಯಲ್ಲಿ ನಿರಂತರ ಐದು ದಿನಗಳ ಕಾಲ ಯೋಜನೆ ರೂಪಿಸಲಾಗಿತ್ತು. ಆ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು, ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದರು.
ಶೆಟ್ಟರ್ ವಿರುದ್ಧ ಕಾಗೋಡು ಕೆಂಡಾಮಂಡಲ
ವಿಧಾನಸಭೆ: ಪ್ರಶ್ನೋತ್ತರ ಬದಿಗೊತ್ತಿ ಜಿಪಂ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ವಿರುದ್ಧ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೆಂಡಾಮಂಡಲಗೊಂಡ ಪ್ರಸಂಗ ನಡೆಯಿತು. ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಯೋಗೀಶ್ ಗೌಡ ಹತ್ಯೆ ಪ್ರಕರಣದ ಚರ್ಚೆಗೆ ಅವಕಾಶ ನೀಡುವಂತೆ ಜಗದೀಶ ಶೆಟ್ಟರ್ ಪಟ್ಟು ಹಿಡಿದರು.
ಪ್ರಶ್ನೋತ್ತರದ ಬಳಿಕ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದಾಗ, ಕಾರ್ಯಸೂಚಿ ಪ್ರಕಾರ ಹೋಗೋಣ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಮನವಿ ಮಾಡಿದರು. ಇದಕ್ಕೆ ಒಪ್ಪದ ಶೆಟ್ಟರ್ ಈಗಲೇ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕಾಗೋಡು ತಿಮ್ಮಪ್ಪ, “ನಿಯಮ 69ರಡಿ ಇದೇ
ವಿಷಯವಿದೆ. ಅಜೆಂಡಾ ಪ್ರಕಾರ ಹೋಗೋಣ’ ಎಂದರೂ ಪಟ್ಟು ಸಡಿಲಿಸದ ಶೆಟ್ಟರ್, “ಕೊಲೆ ಪ್ರಕರಣದಲ್ಲಿ ಸಚಿವರ ಕೈವಾಡವಿದ್ದು, ಅದನ್ನು ಪೊಲೀಸರು ಮುಚ್ಚಿ ಹಾಕಲು ಹೊರಟಿದ್ದಾರೆ. ಇದಕ್ಕಿಂತ ಪ್ರಮುಖ ವಿಚಾರ ಬೇರೆ ಇಲ್ಲ’ ಎಂದರು. ಇದರಿಂದ ಕುಪಿತಗೊಂಡ ಕಾಗೋಡು ತಿಮ್ಮಪ್ಪ, ಅಜೆಂಡಾ ಪ್ರತಿ ಎತ್ತಿ ತೋರಿಸಿ ಆಕ್ರೋಶದಿಂದ “ಏನ್ರಿ ಇದು..’ ಎಂದು ಮೂರ್‍ನಾಲ್ಕು ಬಾರಿ ಹೇಳಿದರು. ಪಕ್ಕದಲ್ಲಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕಾಗೋಡು ಅವರನ್ನು ಸಮಾಧಾನಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.