ವಿವಾದ ಹುಟ್ಟು ಹಾಕಿದ ಹೆಬ್ಟಾಳ್ಕರ್ ಹೇಳಿಕೆ
Team Udayavani, Sep 1, 2017, 10:41 AM IST
ಬೆಳಗಾವಿ: “ಕಳೆದ ಆರು ದಶಕಗಳಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರು ಕರ್ನಾಟಕ ಸರಕಾರದ ಮೇಲೆ ಆರೋಪ ಮಾಡುತ್ತ ನಿಮ್ಮನ್ನು ಬಲಿಪಶು ಮಾಡುತ್ತಿದ್ದಾರೆ. ನಿಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಹೇಳುತ್ತ ಕತ್ತಲಲ್ಲಿ ಇಟ್ಟಿದ್ದಾರೆ. ಒಂದು ವೇಳೆ, ಸುಪ್ರೀಂಕೋರ್ಟ್ ಗಡಿ ವಿಷಯದಲ್ಲಿ ತೀರ್ಪು ನೀಡಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಆಗ ನಾನೇ ಮೊದಲಿಗೆ ಮಹಾರಾಷ್ಟ್ರದ ಧ್ವಜ ಹಿಡಿದು ಜೈ ಎನ್ನುತ್ತೇನೆ’ ಎಂದು
ಭಾಷಣ ಮಾಡಿ ಕೆಪಿಸಿಸಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಟಾಳ್ಕರ್ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಬೆಳಗಾವಿ ತಾಲೂಕಿನ ಬಸರಿಕಟ್ಟಿ ಗ್ರಾಮದಲ್ಲಿ ಆ.27 ರಂದು ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಇಂಥ ವಿವಾದಾಸ್ಪದ ಹೇಳಿಕೆ ನೀಡಿರುವ ಆಡಿಯೋ ವಾಟ್ಸಾಪ್ ಮೂಲಕ ಎಲ್ಲೆಡೆ ಹರಿದಾಡುತ್ತಿದೆ. ಹೆಬ್ಟಾಳ್ಕರ್ ಅವರ ಈ ಮಾತು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದೆಲ್ಲೆಡೆ ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವುದು ಮನಗಂಡ ಲಕ್ಷ್ಮಿ ಹೆಬ್ಟಾಳ್ಕರ್, ನಾಡಿನ ಜನರ ಕ್ಷಮೆ ಕೇಳಿ ವಿಷಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಲಕ್ಷ್ಮೀ ಹೆಬ್ಟಾಳ್ಕರ್ ಹೇಳಿದ್ದೇನು?: ಭಾಷಣದ ಮೂಲಕ ಮರಾಠಿ ಯುವಕರಿಗೆ ಬುದ್ಧಿವಾದ ಹೇಳುವ ಭರಾಟೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಪ್ರಸ್ತಾಪಿಸಿದ್ದಾರೆ. ಝಾಲಾಚ್ ಪಾಯಜೆ ಶಬ್ದ ಬಳಸಿದ ಅವರು, “ಗಡಿ ವಿವಾದ ಈಗ ಸುಪ್ರೀಂಕೋರ್ಟ್ ನಲ್ಲಿದೆ. ಮೇಲಾಗಿ ನ್ಯಾಯಾಲಯವೇ ಇದು ಅಪ್ರಸ್ತುತ ಎಂದು ಹೇಳಿದೆ. ಆದರೆ, ಕೆಲ ಎಂಇಎಸ್ ನಾಯಕರು ಇದನ್ನೇ ನೆಪ ಮಾಡಿಕೊಂಡು ಮುಗ್ಧ ಜನರನ್ನು ಹಾಳುಮಾಡುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅವರನ್ನು ಬಲಿ ಪಡೆಯುತ್ತಿದ್ದಾರೆ. ನಾವೀಗ ಕರ್ನಾಟಕದಲ್ಲಿದ್ದೇವೆ. ನೀವು ಕನ್ನಡಿಗರ ಜೊತೆ ಕೈಜೋಡಿಸಿದರೆ ಎಲ್ಲ ಸೌಲಭ್ಯ ಸಿಗುತ್ತದೆ. ಒಂದು ವೇಳೆ ನ್ಯಾಯಾಲಯದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ತೀರ್ಪು ಬಂದರೆ ನಾನೇ ಮೊದಲು ಮಹಾರಾಷ್ಟ್ರದ ಧ್ವಜ ಹಿಡಿದು ಜೈ ಎನ್ನುತ್ತೇನೆ. ಈ ರೀತಿ ಬಹಿರಂಗವಾಗಿ ಹೇಳಲು ಯಾರಿಗೂ ಧೈರ್ಯ ಇಲ್ಲ’ ಎಂದು ಭಾಷಣದಲ್ಲಿ ಹೇಳಿದ್ದಾರೆ.
ಕ್ರಿಮಿನಲ್ ಕೇಸು ದಾಖಲಿಸಿ: ಶೋಭಾ ಬೆಂಗಳೂರು: ಲಕ್ಷ್ಮೀ ಹೆಬ್ಟಾಳ್ಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದರೊಂದಿಗೆ, ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ವಿರೋಧಿ ಘೋಷಣೆ ಕೂಗಿದ ಮತ್ತು ಕನ್ನಡ ವಿರೋಧಿಗಳ ವಿರುದ್ಧ ಇದೇ ಸರ್ಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕನ್ನಡ ವಿರೋಧಿಗಳಿಗೊಂದು ಕಾನೂನು, ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿರುವ ಲಕ್ಷ್ಮೀ ಹೆಬ್ಟಾಳ್ಕರ್‌ಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ಹೆಬ್ಟಾಳ್ಕರ್ ಕ್ಷಮಾಪಣೆ ಪತ್ರ
“ನನ್ನ ಮಾತಿನಿಂದ ನಾಡಿನ ಜನತೆಗೆ ಆದ ನೋವಿಗೆ ಸ್ಪಂದಿಸಿ ಕ್ಷಮೆ ಕೇಳುತ್ತಿದ್ದೇನೆ. ನಾನು ಕರ್ನಾಟಕದ ಮಗಳು. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಅರ್ಧ ಸತ್ಯ. ಗ್ರಾಮೀಣ ಭಾಗದ ಯುವಕರಿಗೆ ತಿಳಿವಳಿಕೆ ನೀಡುವ ಭರದಲ್ಲಿ ಈ ತಪ್ಪು ನಡೆದಿದೆ. ಗ್ರಾಮೀಣ ಭಾಗದ ಮರಾಠಿ ಭಾಷಿಕರು ಮುಗ್ಧರಿದ್ದಾರೆ. ನಿಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳದಿರಿ. ಶಾಲೆ, ಕಾಲೇಜು, ಕೈಗಾರಿಕೆಗಳ ಸ್ಥಾಪನೆಗೆ ಬೇಡಿಕೆ ಇಡಬೇಕು ಎಂದು ಅವರಿಗೆ ತಿಳಿವಳಿಕೆ ನೀಡುತ್ತಿದ್ದೆ. ಆದರೆ, ವಿದ್ಯುನ್ಮಾನ ಮಾಧ್ಯಮದವರು ಅರ್ಧಸತ್ಯ ಮಾತ್ರ ತೋರಿಸುತ್ತಿದ್ದಾರೆ. ಇದರಿಂದ ಕರ್ನಾಟಕದ ಜನರಿಗೆ ನೋವಾಗಿದ್ದರೆ ತಲೆ ಬಾಗಿ ಕ್ಷಮೆ ಯಾಚಿಸುತ್ತೇನೆ’. “ಕಿತ್ತೂರ ಚೆನ್ನಮ್ಮ ನಾಡಿನಲ್ಲಿ ಹುಟ್ಟಿದ ಹೆಮ್ಮೆ ನನಗಿದೆ. ಕರ್ನಾಟಕದ ಮನೆ ಮಗಳಾಗಿದ್ದೇನೆ. ಕರ್ನಾಟಕ ರಾಜ್ಯದ ನೆಲ, ಜಲ ಸಂಸ್ಕೃತಿಯ ಮಗಳಾಗಿದ್ದೇನೆ. ಹಾಗಾಗಿ ಜನರಿಗೆ ತಿಳಿವಳಿಕೆ ಮಾತ್ರ ಹೇಳಿದ್ದೇನೆ. ಇದನ್ನು ಬಿಟ್ಟು ಬೇರೇನೂ ವಿಷಯವಿಲ್ಲ. ನನ್ನ ರಾಜೀನಾಮೆ ಕೇಳಲು ಬಿಜೆಪಿಯವರು ಯಾರು. ಬೆಳಗಾವಿಯ ರಾಜಕಾರಣ ತುಂಬಾ ಡಿಫರೆಂಟ್ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ವರಿಷ್ಠರು ಮತ್ತು ಮುಖಂಡರು ಇದ್ದಾರೆ. ಅವರು ಕೇಳಿದರೆ ಅಲ್ಲಿ ನಡೆದ ಪ್ರಸಂಗದ ಮನವರಿಕೆ ಮಾಡಿಕೊಡುತ್ತೇನೆ’. “ಬೆಳಗಾವಿ ಗ್ರಾಮೀಣ ಬಿಜೆಪಿ ಶಾಸಕ ಸಂಜಯ ಪಾಟೀಲ ಈ ರೀತಿ ಮಾತನಾಡಿದ್ದೇನೆ ಎಂದು ನನ್ನ ವಿರುದ್ದ ಹೋರಾಟ ಮಾಡಲಿ. ಕೆಲ ದಿನಗಳ ಹಿಂದೆ ಅವರೇ ಮಹಾನಗರಪಾಲಿಕೆ ಸಭೆಯಲ್ಲಿ ಮರಾಠಿ ಭಾಷೆ ಮಾತನಾಡಿ ತಮ್ಮ ಮರಾಠಿ ಪ್ರೇಮ ತೋರಿಸಿದ್ದರು. ಬೇಕಿದ್ದರೆ, ಸಂಸದ ಸುರೇಶ ಅಂಗಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಲಿ. ಈಗ ಆಗಿರುವ ನೋವಿಗೆ ಮತ್ತೂಮ್ಮೆ ಕ್ಷಮೆ ಯಾಚಿಸುತ್ತೇನೆ’ಎಂದು ಅವರು ಹೇಳಿದ್ದಾರೆ.
ಲಕ್ಷ್ಮೀ ಹೆಬ್ಟಾಳ್ಕರ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಲು ಸಾಧ್ಯವೇ ಇಲ್ಲ. ತೇಜೋವಧೆಗಾಗಿ ಬಿಜೆಪಿಯವರೇ ಅವರ ಹೇಳಿಕೆ ತಿರುಚಿ ಸುಳ್ಳು ಸೃಷ್ಟಿ ಮಾಡಿರಬಹುದು. ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಲಕ್ಷ್ಮೀ ಹೆಬ್ಟಾಳ್ಕರ್‌ಗೆ ಬದ್ಧತೆ ಇದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ತಮ್ಮ ಹೇಳಿಕೆ ಬಗ್ಗೆ ಈಗಾಗಲೇ ಕ್ಷಮೆ ಕೋರಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳುವ ಪ್ರಶ್ನೆ ಇಲ್ಲ. ಅಲ್ಲದೆ, ಅದು ಅವರ ವೈಯಕ್ತಿಕ ಹೇಳಿಕೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ.
ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಅವರು ಯಾವುದೇ ತಪ್ಪು ಮಾಡಿಲ್ಲ. ಹೆಬ್ಟಾಳ್ಕರ್ ಮಾತನಾಡಿರುವ ಸಂಪೂರ್ಣ ಮಾತುಗಳನ್ನು ಪ್ರಸಾರ ಮಾಡದೇ ಉದ್ದೇಶ ಪೂರ್ವಕವಾಗಿ ಕೆಲವು ಭಾಗ ಮಾತ್ರ ಪ್ರಸಾರ ಮಾಡಲಾಗುತ್ತಿದೆ. ಮಾಧ್ಯಮದವರು ಸಂಪೂರ್ಣ ಭಾಷಣ ಪ್ರಸಾರ ಮಾಡಲಿ.
ಡಿ.ಕೆ. ಶಿವಕುಮಾರ್, ಇಂಧನ ಸಚಿವ
ಮೂಲತಃ ಮರಾಠಿಗರಾಗಿರುವ ಲಕ್ಷ್ಮೀ ಹೆಬ್ಟಾಳ್ಕರ್ ನೈಜ ಬುದ್ಧಿ ಇದೀಗ ಕನ್ನಡಿಗರಿಗೆ ಗೊತ್ತಾಗಿದೆ. ಮರಾಠಿ ಜನರ ಓಟಿಗಾಗಿ ಕನ್ನಡ ನಾಡಿಗೆ ದ್ರೋಹ ಬಗೆಯುತ್ತಿದ್ದಾರೆ. ಕನ್ನಡಾಭಿವೃದ್ಧಿಗೆ ಸದಾ ಸಿದ್ಧವೆನ್ನುವ ಸಿದ್ದರಾಮಯ್ಯ ಸರ್ಕಾರ, ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಿ.
ಪ್ರವೀಣ್ ಕುಮಾರ್ ಶೆಟ್ಟಿ, ರಾಜ್ಯಾಧ್ಯಕ್ಷ, ಕರವೇ
ಅವರಿಗೆ ಪ್ರಾಮಾಣಿಕತೆ, ನಿಯತ್ತಿಲ್ಲ ಎಂದು ಕೇಳಿದ್ದೆವು. ಈಗ ಹುಟ್ಟಿದ ನಾಡಿನ ಬಗ್ಗೆಯೂ ನಿಯತ್ತು ಹೊಂದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಮತ ಬ್ಯಾಂಕ್ ಸಲುವಾಗಿ ಈ ಮಟ್ಟಕ್ಕೆ ಇಳಿಯಬಾರದು.
ಭಾರತಿ ಶೆಟ್ಟಿ, ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ
ಬೆಳಗಾವಿಯ ಎಲ್ಲ ಜನಪ್ರತಿನಿಧಿಗಳು ಅಲ್ಲಿನ ಎಂಇಎಸ್ ಮತ್ತು ಮರಾಠಿಗರ ಓಲೈಕೆ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ. ಅವರು ಎಂದೂ ಕರ್ನಾಟಕದ ಧ್ವನಿಯಾಗಿ ಮಾತನಾಡಿದ್ದೇ ಇಲ್ಲ. ಅವರ ಸಾಲಿಗೆ ಲಕ್ಷ್ಮಿ ಹೆಬ್ಟಾಳ್ಕರ್ ಸೇರಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು.
ಟಿ.ಎ.ನಾರಾಯಣಗೌಡ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡ ವಿರೋಧಿ ಹೇಳಿಕೆ ನೀಡಿದ್ದರೆ ಮಾಹಿತಿ ಪಡೆದು ಪಕ್ಷದಿಂದ ಸೂಚನೆ ಕೊಡಬೇಕು. ನನ್ನ ಕ್ಷೇತ್ರದಲ್ಲೂ 40 ಸಾವಿರ ಮರಾಠರಿದ್ದಾರೆ, ನಾನು ಯಾವತ್ತೂ ಆ ರೀತಿಯ ಹೇಳಿಕೆ ನೀಡಿಲ್ಲ.
ಸತೀಶ್ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.