ವಿಮಾನವೇರಿ ಬಂದು ಸರ ಹಾರಿಸುವರು!
Team Udayavani, Nov 10, 2017, 7:33 AM IST
ಬೆಂಗಳೂರು: ಇವರು ಸಾಮಾನ್ಯ ಕಳ್ಳರಲ್ಲ. ವಿಮಾನ ಏರಿ ಬರುವ ಈ ಕಳ್ಳರು ಒಂದಷ್ಟು ದಿನ ರಾಜಧಾನಿಯಲ್ಲಿ ತಂಗಿದ್ದು, ಸರ ಗಳ್ಳತನ ನಡೆಸಿ ಹಾಗೆಯೇ ವಿಮಾನದಲ್ಲಿ ಗಂಟು ಮೂಟೆ ಕಟ್ಟುವ ಖದೀಮರು! ಆದರೆ ಇವರ ಚಾಣಾಕ್ಷತೆ ಹೆಚ್ಚು ದಿನ ನಡೆಯಲಿಲ್ಲ. ಬೆಂಗಳೂರು ಪೊಲೀಸರು ಈ ಹೈಟೆಕ್ ಕಳ್ಳರನ್ನು ಗುರುವಾರ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಶಾವೇರಿ ಜಿಲ್ಲೆಯ “ಬವೇರಿಯಾ’ ಗ್ಯಾಂಗ್‌ನ ಜಯಪ್ರಕಾಶ್ (22), ನಿತಿನ್‌ಕುಮಾರ್ (21) ಜಿತೇಂದ್ರ (22) ಕಪಿಲ್ ಕುಮಾರ್ (25) ನಂದಕುಮಾರ್ (33) ಬಂಧಿತರು. ಇವರಿಂದ 20ಲಕ್ಷ ರೂ. ಮೌಲ್ಯದ 15 ಚಿನ್ನದ ಸರಗಳು ಒಂದು ಪಲ್ಸರ್
ಬೈಕ್ ಜಪ್ತಿ ಮಾಡಲಾಗಿದ್ದು, ಪರಾರಿಯಾಗಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದರು.
ಇವರು ಉತ್ತರ ಪ್ರದೇಶದಿಂದ ದುಬಾರಿ ವೆಚ್ಚದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಕಳ್ಳರು ಚಾಕಚಕ್ಯತೆಯಿಂದ ಸರಗಳವು ಮಾಡಿ ಎಳ್ಳಷ್ಟೂ ಸುಳಿವು ಸಿಗದಂತೆ ಪರಾರಿಯಾಗುತ್ತಿದ್ದರು. ಆರೋಪಿಗಳು ಕಳೆದ ಹದಿನೈದು ದಿನಗಳ ಅಂತರದಲ್ಲಿ ಕೆಂಗೇರಿ, ಜೆಪಿನಗರ, ತಿಲಕ್‌ನಗರ, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿ ಸೇರಿ ಹಲವೆಡೆ ಬೆಳ್ಳಂಬೆಳಗ್ಗೆ ಮನೆಮುಂದೆ ನಿಂತಿರುವ, ವಾಕಿಂಗ್
ಹೋಗುವ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಕ್ಷಣಾರ್ಧದಲ್ಲಿ ಸರ ಕಸಿದುಕೊಂಡು ಎಸ್ಕೇಪ್ ಆಗುತ್ತಿದ್ದರು.
ಬೆಂಗಳೂರು, ಮುಂಬೈ, ಹೈದ್ರಾಬಾದ್, ದೆಹಲಿ, ಚೆನ್ನೈನಲ್ಲಿ ಈ ತಂಡಗಳು ಸಕ್ರಿಯವಾಗಿವೆ. ಆಯಾ ನಗರಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಸರಗಳ್ಳತನ ಮಾಡಿದ ಮೇಲೆ ರೈಲಿನಲ್ಲಿ ವಾಪಸ್ ತೆರಳಿ ಅಲ್ಲಿ ಕದ್ದ ಮಾಲುಗಳನ್ನು ಮಾರುತ್ತಿದ್ದರು. ಕಳೆದ ಮೂರು ತಿಂಗಳಲ್ಲಿ ನಗರದಲ್ಲಿ 30ಕ್ಕೂ ಹೆಚ್ಚು ಸರಗಳ್ಳತನ ನಡೆಸಿರುವ ಬಗ್ಗೆ ವರದಿಯಾಗಿದೆ. ಕಳೆದ ಹದಿನೈದು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಸರಗಳವು ಹೆಚ್ಚಾಗಿ ಮಹಿಳೆಯರ ನೆಮ್ಮದಿಗೆ ಭಂಗವುಂಟಾಗಿತ್ತು. ಈ ಬಗ್ಗೆ ಎಚ್ಚೆತ್ತ ಪೊಲೀಸರು, ಕಳ್ಳರ ಬಂಧನಕ್ಕೆ ಬಲೆ ಬೀಸಿದಾಗ ಕುಖ್ಯಾತ ಸರಗಳ್ಳರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಇಬ್ಬರು ಪರಾರಿ: ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬರುತ್ತಿದ್ದ “ಬವೇರಿಯಾ’ ತಂಡದ ಸದಸ್ಯರು, ನಗರದಲ್ಲಿ ಪಲ್ಸರ್‌ನಲ್ಲಿ ಸಂಚರಿಸಿ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ನಗರ ದಲ್ಲಿ 30ಕ್ಕೂ ಹೆಚ್ಚು ಸರಗಳ್ಳತನ ನಡೆಸಿದ್ದ ಆರೋಪಿ ಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡ, ಸುಬ್ರಹ್ಮಣ್ಯ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಶಾಮಲೀ ಜಿಲ್ಲೆಯ ಜಯಪ್ರಕಾಶ್ (22), ನಿತಿನ್‌ಕುಮಾರ್ (21) ಜಿತೇಂದ್ರ (22) ಕಪಿಲ್ ಕುಮಾರ್ (25) ನಂದಕುಮಾರ್ (33) ಎಂಬುವವರನ್ನು ಬಂಧಿಸಿದ್ದು, 20 ಲಕ್ಷ ರೂ. ಮೌಲ್ಯದ 15 ಸರಗಳು, ಒಂದು ಪಲ್ಸರ್ ಬೈಕ್ ಜಪ್ತಿ ಮಾಡಲಾ ಗಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದರು.
ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನೇತ್ರಾವತಿ ಎಂಬುವವರ ಸರ ಕಿತ್ತುಕೊಂಡ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ, ಆರೋಪಿ ಚಲನ ವಲನಗಳ ಮೇಲೆ ನಿಗಾವಹಿಸಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದರು. ಪಂಜಾಬ್ ನೋಂದಣಿ ಸಂಖ್ಯೆಯ ಕದ್ದ ಪಲ್ಸರ್ ಬೈಕ್ ಅನ್ನು ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದರು. ಇಬ್ಬರು ಸರಗಳ್ಳತನ ಮಾಡಿದರೆ, ಉಳಿದ ಮೂವರು ಸುತ್ತಮುತ್ತಲ ಪ್ರದೇಶಗಳಲ್ಲಿ ಸಾರ್ವಜನಿಕರು ಓಡಾಟದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆರೋಪಿಗಳು ಮಹಿಳೆಯೊಬ್ಬರ ಬಳಿ ಸರ ಕಿತ್ತುಕೊಂಡಿದ್ದ ಸಿಸಿಟಿವಿ ದೃಶ್ಯಾವಳಿಗಳು, ಅಲ್ಲಿ ಕಂಡು ಬಂದಿದ್ದ ಬೈಕ್ ನಂಬರ್‌ನ ಜಾಡುಹಿಡಿದು ತನಿಖೆ ಆರಂಭಿಸಿ, ದೂರವಾಣಿ ಕರೆಗಳನ್ನು ಪರಿಶೀಲಿಸಲಾಯಿತು. ಆರೋಪಿಗಳು ಮುಂಜಾನೆ 5 ಗಂಟೆಗೆ ಮನೆ ಬಿಟ್ಟರೆ ಸರ ಕದ್ದು ಕೊಠಡಿ ಸೇರಿಕೊಂಡರೆ, ಹೊರಬರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದರು.
ವಿಮಾನದಲ್ಲಿ ಆಗಮನ, ರೈಲಿನಲ್ಲಿ ವಾಪಾಸ್!:
ಆರೋಪಿಗಳು ಸರಗಳ್ಳತನ ಪ್ರಕರಣಗಳಲ್ಲಿ ಕುಖ್ಯಾತರಾಗಿದ್ದಾರೆ. ಉತ್ತರ ಪ್ರದೇಶದ ಶ್ಯಾಮಲಿ ಜಿಲ್ಲೆಯ ಸಮೀಪದ 15 ತಾಂಡಾಗಳಲ್ಲಿ ಹಲವು ಗ್ಯಾಂಗ್‌ಗಳು ವಾಸವಾಗಿವೆ. ಸರಗಳ್ಳತನ ಕೃತ್ಯವೆಸಗಲು ಬೆಂಗಳೂರು, ಮುಂಬೈ, ಹೈದ್ರಾಬಾದ್, ದೆಹಲಿ, ಚೆನೈನಲ್ಲಿ ಈ ತಂಡಗಳು ಸಕ್ರಿಯವಾಗಿವೆ. ಆಯಾ ನಗರಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಸರಗಳ್ಳತನ ಮಾಡಿದ ಮೇಲೆ ರೈಲಿನಲ್ಲಿ ವಾಪಾಸ್ ತೆರಳಿ ಅಲ್ಲಿ ಕದ್ದ ಮಾಲುಗಳನ್ನು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಕದ್ದ ಸರಗಳ ಸಮೇತ ಉತ್ತರ ಪ್ರದೇಶಕ್ಕೆ ವಾಪಾಸ್ ತೆರಳಲು ರೈಲಿನ ಟಿಕೆಟ್ ಬುಕ್ ಮಾಡಿಸಿದ್ದರು. ಆದರೆ, ಎಸ್ಕೇಪ್ ಆಗುವ ಮೊದಲೇ ಸೆರೆ ಸಿಕ್ಕಿದ್ದಾರೆ.
ಹೆಚ್ಚು ಬಾಡಿಗೆ ಆಸೆಗೆ ಮನೆ ನೀಡಬೇಡಿ!
ಆರೋಪಿಗಳು ಕೆಳ ವರ್ಗದ ಜನ ವಾಸಿಸುವ ಬಡವಾಣೆಗಳನ್ನು ಉಳಿದುಕೊಳ್ಳಲು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಆರೋಪಿಗಳು ತಾವು ಬಟ್ಟೆ ಮಾರಾಟ ಮಾಡುತ್ತೇವೆ, ಮೆಟ್ರೋ ಕೆಲಸಕ್ಕೆ ಹೋಗುತ್ತೇವೆ ಎಂದು ಸುಳ್ಳು ಹೇಳಿ ಸುಬ್ರಹ್ಮಣ್ಯನಗರದಲ್ಲಿ ಎರಡನೇ ಮಹಡಿಯಲ್ಲಿ ಹೆಚ್ಚು ಹಣ ನೀಡಿ ಮನೆ ಬಾಡಿಗೆಗೆ ಪಡೆದಿದ್ದಾರೆ. ಹೆಚ್ಚು ಬಾಡಿಗೆ ನೀಡುತ್ತಾರೆ ಎಂಬ ಕಾರಣಕ್ಕೆ ಅಪರಿಚಿತರಿಗೆ ಮನೆ ಬಾಡಿಗೆ ನೀಡದೆ, ಅವರ ಬಗ್ಗೆ ಅನುಮಾನವಿದ್ದರೆ ಮಾಹಿತಿ ನೀಡಿ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂಪೂ ಬಾಟಲ್‌ನಲ್ಲಿ ಸರ ಬಚ್ಚಿಟ್ಟಿದ್ದರು!
ಆರೋಪಿಗಳು ನಗರದಲ್ಲಿ ಕದ್ದ ಚಿನ್ನದ ಸರಗಳನ್ನು ಉತ್ತರಪ್ರದೇಶಸಲ್ಲಿ ತಮ್ಮ ಜಾಲದಲ್ಲಿರುವ ಮಾರ್ವಾಡಿಗಳಿಗೆ ಮಾರಾಟ ಮಾಡುತ್ತಿದ್ದರು. ಇಲ್ಲಿ ಕದ್ದ ಸರಗಳನ್ನು ದೊಡ್ಡ ಶಾಂಪೂ ಬಾಟಲ್‌ನಲ್ಲಿ ಹಾಕಿಕೊಂಡು ಅನುಮಾನಬಾರದಂತೆ ಕೊಂಡೊಯ್ಯುತ್ತಿದ್ದರು. ಆರೋಪಿಗಳ ಬಂಧನಕ್ಕೆ ತೆರಳಿದಾಗ ಮನೆಯಲ್ಲಿ ಹುಡುಕಾಡಿದರೂ ಒಂದು ಚಿನ್ನದ ಸರ ಪತ್ತೆಯಾಗಲಿಲ್ಲ. ಕೊನೆಗೆ ಪೊಲೀಸ್ ಪೇದೆಯೊಬ್ಬರು ಅನುಮಾನದ ಮೇರೆಗೆ ಸ್ನಾನದ ಕೊಠಡಿ ಪರಿಶೀಲಿಸಿದಾಗ ಶಾಂಪೂ ಬಾಟಲ್‌ನಲ್ಲಿ 15 ಚಿನ್ನದ ಸರಗಳು
ಪತ್ತೆಯಾಗಿವೆ. ಈಗಾಗಲೇ 15 ಪ್ರಕರಣಗಳಲ್ಲಿ ಕದ್ದ ಚಿನ್ನದ ಸರಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ. ಉಳಿದ ಸರಗಳ ಜಪ್ತಿಗೆ ಉತ್ತರಪ್ರದೇಶಕ್ಕೆ ವಿಶೇಷ ತಂಡ ತೆರಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕರಿಮಣಿ ಸರಹಾಕಿಕೊಳ್ಳೋ ಸ್ಥಿತಿ
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ ಕಳೆದುಕೊಂಡಿದ್ದ ಲಾವಣ್ಯ ಈ ಸಂದರ್ಭದಲ್ಲಿ ಮಾತನಾಡಿ, “ವಾಕಿಂಗ್ ಹೋಗಿದ್ದಾಗ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಸರ ಕಿತ್ತುಕೊಂಡು ಹೋದರು. ಈ ವಿಚಾರ ತಿಳಿದ ನಮ್ಮ ಸ್ನೇಹಿತೆಯರು ಹಾಗೂ ಪರಿಚಯಸ್ಥರು ಚಿನ್ನದ ಸರ ಬಿಚ್ಚಿಟ್ಟು ಕರಿಮಣಿ ಸರ ಹಾಕಿಕೊಂಡು ಓಡಾಡುತ್ತಿದ್ದಾರೆ,’ ಎಂದು ಹೇಳಿದರು.
ಎಕ್ಸ್‌ಪರ್ಟ್ ಚೋರ!
ಈ ತಂಡದ ಪ್ರಮುಖ ಆರೋಪಿ ಜಯಕುಮಾರ್, ಮಹಿಳೆಯರ ಸರಕಿತ್ತುಕೊಳ್ಳುವುದಲ್ಲಿ ನಿಪುಣ. ಪತ್ತೆಯಾಗಿರುವ 30 ಪ್ರಕರಣಗಳಲ್ಲಿ 24 ಮಹಿಳೆಯರ ಸರ ಕಿತ್ತುಕೊಂಡಿರುವುದು ಈತನೇ. ಹೀಗಾಗಿಯೇ ಉಳಿದ ಆರೋಪಿಗಳು ಆತನಿಗೆ ವಿಶೇಷ ಪ್ರಾಶಸ್ತ್ಯ ನೀಡಿ ವಿಮಾನದ ಮೂಲಕ ಕರೆಸಿಕೊಳ್ಳುತ್ತಿದ್ದರು. ಆರೋಪಿ ಜಯಪ್ರಕಾಶ್ ದೆಹಲಿಯಿಂದ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ್ದಾನೆ.
ಅಸಲಿ ಚಿನ್ನ ಧರಿಸ್ತಾರೆ!
“ಉತ್ತರ ಭಾರತದ ರಾಜ್ಯಗಳಲ್ಲಿ ನೂರು ಸರಗಳ್ಳತನ ಮಾಡಿದ್ದೇವೆ. ಆದರೆ ಕದ್ದ ಸರಗಳಲ್ಲಿ ಹೆಚ್ಚಿನವು ರೋಲ್ಡ್
ಗೋಲ್ಡ್ ಆಗಿರುತ್ತವೆ. ಜತೆಗೆ ಮಹಿಳೆಯರು ಕತ್ತಿಗೆ ಮಫ್ಲರ್ ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಅಲ್ಲಿ ಸರಗಳವು ಮಾಡುವುದು ಕಷ್ಟ. ಆದರೆ ಬೆಂಗಳೂರಿನಲ್ಲಿ ಮಹಿಳೆಯರು ಧರಿಸುವ ಸರಗಳು ಅಸಲಿ ಚಿನ್ನದ ಸರಗಳಾಗಿರುತ್ತವೆ. ಹೀಗಾಗಿ ಇಲ್ಲಿಗೇ ಹೆಚ್ಚು ಬರುತ್ತೇವೆ,’ ಎಂದು ವಿಚಾರಣೆ ವೇಳೇ ಆರೋಪಿಗಳು ತಿಳಿಸಿರುವುದಾಗಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.