ರಾಜ್ಯ ಬಿಜೆಪಿಯವರಿಗೆ ಮೀಟರ್ ಇಲ್ಲ
Team Udayavani, Sep 24, 2017, 7:50 AM IST
ರಾಜ್ಯ ಬಿಜೆಪಿಯವರಿಗೆ ಮೀಟರ್ ಇಲ್ಲ ಕೇಂದ್ರ ಸರ್ಕಾರದಿಂದ ರಾಜ್ಯದ ರೈತರ ಸಾಲ ಮನ್ನಾ ಮಾಡಿಸಲು ರಾಜ್ಯ ಬಿಜೆಪಿಯವರಿಗೆ
ಮೀಟರ್ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ “ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವ 22 ಲಕ್ಷ ರೈತರ 8165 ಕೋಟಿ ರೂ.ಸಾಲ ಮನ್ನಾ ಮಾಡಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 42 ಸಾವಿರ ಕೋಟಿ ರೂ. ರೈತರ ಸಾಲ ಇದ್ದು, ಕೇಂದ್ರ ಸರ್ಕಾರದಿಂದ ಸಾಲ ಮನ್ನಾ ಮಾಡಿಸುವಂತೆ ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಬಳಿಗೆ ನಿಯೋಗ ಕರೆದುಕೊಂಡು ಹೋದರೆ ಯಾರೂ ಬಾಯಿ ಬಿಡಲಿಲ್ಲ.
ಇವರಾರಿಗೂ ಪ್ರಧಾನಿ ಎದುರು ಮಾತನಾಡುವ ಮೀಟರ್ ಇಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.
ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ರೈತರ ಸಾಲ ಮನ್ನಾ ಮಾಡಿರುವುದನ್ನು “ಲಾಲಿ ಪಪ್ ನೀಡಿದ್ದಾರೆ’ ಎಂದಿದ್ದಾರೆ. ಕೇಂದ್ರ ಸಚಿವರು ರಾಜ್ಯದ ರೈತರ 42 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿ ಅವರೂ ಲಾಲಿಪಪ್ ಕೊಡಿಸಲಿ ಎಂದು ಸವಾಲು ಹಾಕಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದರು. ಇಲ್ಲಿ ಉತ್ತರನ ಪೌರುಷ ತೋರಿಸುವವರು ದೆಹಲಿಗೆ ತೆರಳಿ ಪ್ರಧಾನಿಯಿಂದ ಸಾಲ ಮನ್ನಾಮಾಡಿಸಲಿ ಎಂದರು.
ಯಡಿಯೂರಪ್ಪ ನಮ್ಮ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡುವುದಾಗಿ ಹೇಳುತ್ತ ದಿನಾಂಕ ಮುಂದೂಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ “ಬೊಂಬೈಕಿ ರಾಣಿ ಶೋ ತೋರಿಸಿದ ಹಾಗೆ’ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ವಿಮಾನದಲ್ಲಿ ವಿದೇಶ ಸುತ್ತಿದ್ದು, ಮನ್ ಕಿ ಬಾತ್‌ನಲ್ಲಿ ಭಾಷಣ ಮಾಡಿದ್ದು ಬಿಟ್ಟರೆ ಅವರ
ಸಾಧನೆ ಬೇರೇನೂ ಇಲ್ಲ. ಅವರದು ಮನ್ ಕಿ ಬಾತ್ ನಮ್ಮದು ಕಾಮ್ ಕಿ ಬಾತ್. ನಾವು ನಾಲ್ಕು ವರ್ಷದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ಕೆಲಸ ಮಾಡಿರುವುದಕ್ಕೆ ಜನರ ಬಳಿ ಹೋಗಿ ಮತ್ತೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕೂಲಿ ಕೇಳುತ್ತೇವೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ, ಡಾ.ಜಿ. ಪರಮೇಶ್ವರ್ ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಯ ಕಿರು ಹೊತ್ತಿಗೆಯನ್ನು ಮತದಾರರಿಗೆ ನೀಡಿದರು. ಈ ವೇಳೆ ಮುಖ್ಯಮಂತ್ರಿಗೆ ಬೆಳ್ಳಿ ಖಡ್ಗ, ಪರಮೇಶ್ವರ್ ಮತ್ತು ವೇಣುಗೋಪಾಲ್‌ಗೆ ಬೆಳ್ಳಿ ಗದೆ ನೀಡಲಾಯಿತು.
“ಕೇಂದ್ರ ಸರ್ಕಾರ ಸಾಧನೆಯ ಶ್ವೇತಪತ್ರ ಹೊರಡಿಸಲಿ’
ಬೆಂಗಳೂರು: “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರೂವರೆ ವರ್ಷದಲ್ಲಿ ಮಾಡಿರುವ ಸಾಧನೆಯ ಶ್ವೇತಪತ್ರ ಹೊರಡಿಸಲಿ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಆಗ್ರಹಿಸಿದ್ದಾರೆ. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಉದ್ಘಾಟನೆ ನಂತರ ಮಾತನಾಡಿದ ಅವರು, “ಪ್ರಧಾನಿ ಮೋದಿಯ ಆರ್ಥಿಕ ನೀತಿಯಿಂದಾಗಿ ದೇಶ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೇಂದ್ರ ಸರ್ಕಾರದ ನೀತಿಯನ್ನು ಆರ್ಥಿಕ ತಜ್ಞರು ಕಟುವಾಗಿ ಟೀಕಿಸುತ್ತಿದ್ದಾರೆ’ ಎಂದು ಹೇಳಿದರು.
“ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದ್ದರೂ, ದೇಶದಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಅರ್ಧದಷ್ಟು ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು’ ಎಂದು ಆಗ್ರಹಿಸಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋಮು ಭಾವನೆ
ಕೆರಳಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ವಿರುದ್ಧ ಮಾತನಾಡುವವರನ್ನು ದೇಶ ದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ. ಬಿಜೆಪಿ ವಿರುದ್ಧ ಮಾತನಾಡುವ ಪತ್ರಕರ್ತರನ್ನೂ ಹತ್ಯೆ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ಆರೋಪಿಸಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರಧಾರೆ ಜನಪರ ಯೋಜನೆಗಳಾಗಿದ್ದು, ನ.1 ರಂದು ಜಾರಿಗೆ ತರಲು ಮುಂದಾಗಿರುವ ಆರೋಗ್ಯ ಭಾಗ್ಯ ಯೋಜನೆ ದೇಶದಲ್ಲಿಯೇ ವಿಶಿಷ್ಠ ಯೋಜನೆಯಾಗಿದೆ. ಅವುಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಒಂದು ವಾರದ ನಂತರ ಮತ್ತೆ ರಾಜ್ಯಕ್ಕೆ ಆಗಮಿಸಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಲಾಗುವುದು. ಅಧ್ಯಕ್ಷರು, ಸಿಎಂ ಸೇರಿ ಎಲ್ಲ ಕಾರ್ಯಕರ್ತರು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕು’ ಎಂದು ಹೇಳಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ರಜೆ ಭಾಗ್ಯ!
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ “ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಮಾರಂಭಕ್ಕಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅರ್ಧ ದಿನ ರಜೆಯ ಭಾಗ್ಯ ದೊರೆಯಿತು. ಮಹದೇವಪುರ ವಿಧಾನಸಭಾ ಕ್ಷೇತ್ರದ ರಾಮಗೊಂಡನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಿಂದ ಮಕ್ಕಳಿಗೆ ಬೆಳಗ್ಗೆ 9ಕ್ಕೆ ರಜೆ ಕೊಟ್ಟು ಮನೆಗೆ ಕಳುಹಿಸಲಾಯಿತು. ಶನಿವಾರ ಆಗಿದ್ದರಿಂದ 11.30ರ ವರೆಗೂ ಶಾಲೆ ನಡೆಯಬೇಕಿತ್ತು. ಆದರೆ, ಶಾಲಾ ಕಟ್ಟಡದ ಆವರಣವನ್ನು ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಅಡುಗೆ ಮಾಡಲು ಬಳಸಿಕೊಂಡಿದ್ದರಿಂದ ಮಕ್ಕಳಿಗೆ ರಜೆ ಘೋಷಿಸಲಾಯಿತು. ಬೆಳಗ್ಗೆಯೇ ಶಾಲೆಗೆ ರಜೆ ನೀಡಿದ್ದರಿಂದ ಮಕ್ಕಳೂ ಸಮಾವೇಶದಲ್ಲಿ ಕುಳಿತು ಕಾಂಗ್ರೆಸ್ ಕಾರ್ಯಕ್ರಮ ನೋಡಿ ಹೋಗುವಂತಾಯಿತು.
ಗೋ ಮಾಂಸಸೇವನೆ ತಪ್ಪಲ್ಲ
ಸಾಗರ: ಗೋಮಾಂಸ ಸೇವನೆ ತಪ್ಪಲ್ಲ ಎನ್ನುವ ಮೂಲಕ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಾಲೂಕಿನ ಆನಂದಪುರದ ಬಸ್ ನಿಲ್ದಾಣದ ಆವರಣ ದಲ್ಲಿ ಆಯೋಜಿಸಿದ್ದ “ಮನೆ ಮನೆಗೆ ಕಾಂಗ್ರೆಸ್ ನಡಿಗೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜಕೀಯಕ್ಕಾಗಿ ಧರ್ಮ ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ನಡುವೆ ಗೋವಿನ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯಬಾರದು ಎಂದರು.
ನಾಲ್ಕು ಕಾಲು ಇರುವ ಎಲ್ಲ ಪ್ರಾಣಿಗಳನ್ನೂ ಸಮಾನವಾಗಿ ನೋಡಬೇಕು. ಅದರಲ್ಲಿ ಗೋವನ್ನು ಪ್ರತ್ಯೇಕವಾಗಿ ನೋಡುವ
ಅಗತ್ಯವಿಲ್ಲ. ನಾಲ್ಕು ಕಾಲಿನ ಇತರ ಪ್ರಾಣಿಗಳ ಮಾಂಸವನ್ನು ಸೇವಿಸುವುದು ಸಮ್ಮತ ಎಂತಾದರೆ ಗೋಮಾಂಸ ಸೇವನೆ ಹೇಗೆ ತಪ್ಪಾಗಲಿದೆ ಎಂದು ಪ್ರಶ್ನಿಸಿದರು. ಉಳುವವನೇ ಹೊಲದೊಡೆಯನಾಗಿದ್ದು ಸುದೀರ್ಘ ಹೋರಾಟದ ಫಲ. ಯಾವುದೇ ದೇವಾತಾರಾಧನೆಯಿಂದ ಇಂತಹ ಸಾಮಾಜಿಕ ಕ್ರಾಂತಿ ಆಗಲಿಲ್ಲ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಎಂದೂ ರಾಷ್ಟ್ರವನ್ನು ಒಡೆಯಲು ಬಿಟ್ಟಿಲ್ಲ. ಆದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾರು ಯಾವ ಬಟ್ಟೆ ಹಾಕಿಕೊಳ್ಳಬೇಕು, ಯಾರು ಯಾವ ಆಹಾರ ತಿನ್ನಬೇಕೆಂದು ಹೇಳಿಕೊಡುತ್ತಿದ್ದಾರೆ. ಗುಜರಾತ್ ಮಾದರಿ ಅಂದರೆ ಸುಪ್ರೀಂಕೋರ್ಟ್‌ನಿಂದ ಗಡಿ ಪಾರಾಗಿದ್ದ ಅಮಿತ್ ಶಾ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವುದು. ಆ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಬಿಜೆಪಿಯವರು ಹೊರಟಿದ್ದಾರೆ.
ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.