ಮುಂಬಡ್ತಿಗೆ ಅಸ್ತು: ಸುಪ್ರೀಂ ಆದೇಶವನ್ನೇ ಬದಿಗಿರಿಸಿ ಅಹಿಂದಕ್ಕೆ ಜೈ
Team Udayavani, Aug 8, 2017, 8:01 AM IST
ಬೆಂಗಳೂರು: ನಿರಂತರವಾಗಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯ ಸರ್ಕಾರ ಈಗ ದಲಿತರನ್ನು
ಗಮನದಲ್ಲಿಟ್ಟುಕೊಂಡು ಮತ್ತೂಂದು ಅಂತಹುದೇ ಮಹತ್ವದ ನಿರ್ಧಾರ ಕೈಗೊಂಡಿದೆ. ಎಸ್ಸಿ ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಿದ್ದನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ನಡುವೆಯೂ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರ ಹಿತ ಕಾಯುವ ಸಂಬಂಧ ಬಡ್ತಿಯಲ್ಲಿ ಮೀಸಲು ಮುಂದುವರಿಸಲು ಸುಗ್ರೀವಾಜ್ಞೆಗೆ ಸಂಪುಟ ಸಭೆ ನಿರ್ಧರಿಸಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಾಜ್ಯ ಸರ್ಕಾರ ಆರಂಭದಿಂದಲೂ ಅಹಿಂದ ಮಂತ್ರ ಜಪಿಸುತ್ತಿದ್ದು, ದಲಿತರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಿರುವುದನ್ನು ಸುಪ್ರಿಂ ಕೋರ್ಟ್ ಬಿ.ಕೆ. ಪವಿತ್ರಾ ಪ್ರಕರಣದಲ್ಲಿ ಸರ್ಕಾರದ ನಿರ್ಧಾರವನ್ನು ವಜಾಗೊಳಿಸಿತ್ತು. ಬಳಿಕ, ಮೀಸಲಾತಿ ಮುಂಬಡ್ತಿಯಿಂದ ಅನ್ಯಾಯವಾ ದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆರು ತಿಂಗಳಲ್ಲಿ ಹೊಸ ಮೀಸಲಾತಿ ಪಟ್ಟಿ ನೀಡಲು ಸುಪ್ರೀಂ ಆದೇಶಿಸಿತ್ತು. ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದ ರಾಜ್ಯ ಸರ್ಕಾರ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನಪ್ರಭ ನೇತೃತ್ವದಲ್ಲಿ ದಲಿತರ ಹಿಂದುಳಿವಿಕೆಗೆ ಮತ್ತು ಈಗಲೂ ಬಡ್ತಿಯಲ್ಲಿ ಮೀಸಲಾತಿ ನೀಡುತ್ತಿರುವುದಕ್ಕೆ ಸೂಕ್ತ ಕಾರಣ ಹುಡುಕುವಂತೆ ಸೂಚಿಸಿತ್ತು. ಅದರಂತೆ ರತ್ನಪ್ರಭಾ ನೇತೃತ್ವದ ಸಮಿತಿ ಇದಕ್ಕೆ ಸೂಕ್ತವಾದ ಕಾರಣಗಳನ್ನು ಹುಡುಕಿ, ಪಟ್ಟಿ ಮಾಡಿ ವರದಿ ನೀಡಿತ್ತು. ಇದನ್ನಾಧರಿಸಿ ರಾಜ್ಯ ಸಂಪುಟ ಸಭೆಯಲ್ಲಿ ಮೀಸಲು ಮುಂದುವರಿಸುವ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದೆ.
ಆಯೋಗಕ್ಕೆ ಕಳುಹಿಸಿ ಅಲ್ಲಿಂದಲೂ ಮಾಹಿತಿ ಪಡೆದು, ನಂತರ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಠಾಕೂರ್ ಮತ್ತು ಗೋಪಾಲಗೌಡ ಅವರ ಅಭಿಪ್ರಾಯವನ್ನೂ ಪಡೆದುಕೊಂಡಿತ್ತು. ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳಲು ಕಾನೂನಿನಲ್ಲಿ ಇರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಸಂಪುಟ ಉಪ ಸಮಿತಿ ರಚಿಸಿ, ಆ ಮೂಲಕವೂ ಸರ್ಕಾರ ದಲಿತರ ಹಿತ ಕಾಯುವ ಸರ್ಕಸ್ ನಡೆಸಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನೀಡಿದ್ದ ಬಡ್ತಿಯಲ್ಲಿ ಮೀಸಲಾತಿ ನೀಡಿರುವುದನ್ನು ರದ್ದುಪಡಿಸಿ ಆಗಸ್ಟ್ 9 ರೊಳಗೆ ಪರಿಷ್ಕೃತ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ
ನ್ಯಾಯಾಲಯದ ತೀರ್ಪಿನಿಂದ ಪಾರಾಗುವ ಪ್ರಯತ್ನ ನಡೆಸಿದೆ.
ಪ್ರಮುಖವಾಗಿ 1978 ರ ಕಾಯ್ದೆಯ ಪ್ರಕಾರ ರಾಜ್ಯ ಸರ್ಕಾರ ದಲಿತರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುತ್ತಿರುವುದಕ್ಕೆ ಹಿಂದುಳಿದಿರುವಿಕೆ, ದಕ್ಷತೆಯ ಕೊರತೆ ಆಧಾರದಲ್ಲಿ ಬಡ್ತಿಯಲ್ಲಿ ಮೀಸಲಾತಿ ನೀಡಲಾಗುತ್ತಿದ್ದು, 1978ರ ಕಾಯ್ದೆ ಸೆಕ್ಷನ್ 3, 4, ರ ಜೊತೆಗೆ ಈಗ ಹೊಸದಾಗಿ ಸೆಕ್ಷನ್ 5 ನ್ನು ಸೇರಿಸಿ, ವಿಶೇಷ ಕೋಟಾದಡಿ ಬಡ್ತಿ ನೀಡಲು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ನಾಗರಾಜ್ ಹಾಗೂ ಬಿ.ಕೆ. ಪವಿತ್ರ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಹಿಂದುಳಿದಿರುವಿಕೆಯ ಬಗ್ಗೆ ಸರಿಯಾಗಿ ವಾದ ಮಾಡಿಲ್ಲ ಎನ್ನುವ ಕಾರಣಕ್ಕೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಕ್ರಮವನ್ನು ವಜಾಗೊಳಿಸಿತ್ತು. ಹೀಗಾಗಿ ಅದರ ಜೊತೆಗೆ ವಿಶೇಷ ಕೋಟಾದಡಿ ಮೀಸಲಾತಿ ಬಡ್ತಿ ನೀಡುವುದನ್ನು ಸೇರಿಸಿ, ಈಗಾಗಲೇ ಬಡ್ತಿ ಪಡೆದಿರುವ ಅಧಿಕಾರಿ ಗಳಿಗೆ ಹಿಂಬಡ್ತಿ ನೀಡದೇ, ಅವರು ಈಗಿರುವ ಹುದ್ದೆಯಲ್ಲಿಯೇ ನಿವೃತ್ತಿವರೆಗೂ ಮುಂದುವರೆಯಲು ಅವಕಾಶ ಕಲ್ಪಿಸಲು
ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ಸಂಪುಟ ಸಭೆ ನಂತರ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ದಲಿತರಿಗೆ ಮುಂಬಡ್ತಿ ನೀಡಲು ಮೀಸಲಾತಿ ಅನುಸರಿಸುವ ಕ್ರಮದಲ್ಲಿ ಆಗಸ್ಟ್ 9 ರೊಳಗೆ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಪರಿಷ್ಕೃತ ಪಟ್ಟಿ ನೀಡಬೇಕಿರುವುದರಿಂದ 1978 ರ ಕಾಯ್ದೆಯನ್ನು ಉಳಿಸಿಕೊಂಡು ಆ ಕಾಯ್ದೆಯ ಸೆಕ್ಷನ್ 3, 4, ಜೊತೆಗೆ ಸೆಕ್ಸನ್ 5 ಸೇರಿಸಿ ವಿಶೇಷ ಕೋಟಾದಡಿ ಮೀಸಲಾತಿ ನೀಡುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ತೀರ್ಮಾನಿಸಿದೆ. ಈ ಸುಗ್ರೀವಾಜ್ಞೆಯನ್ನ ನಾಳೆಯೇ ರಾಜ್ಯಪಾಲಿಗೆ ಕಳುಹಿಸಿಕೊಟ್ಟು ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ಗೂ ತಿಳಿಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.
ಡಿಕೆಶಿಗೆ ಧೈರ್ಯ ತುಂಬಿದ ಸಿಎಂ: ಆದಾಯ ತೆರಿಗೆ ಇಲಾಖೆಯ ದಾಳಿಯಿಂದ ಕಂಗೆಟ್ಟಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ. ಸಂಪುಟ ಸಭೆಗೆ ಆಗಮಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮುಖ್ಯಮಂತ್ರಿ, “ಬಾರಯ್ಯ, ನಾವೆಲ್ಲ ನಿನ್ನ ಜೊತೆಗೆ ಇದ್ದೇವೆ. ಯಾವುದಕ್ಕೂ ಹೆದರಬೇಡ’ ಎಂದು ಧೈರ್ಯ ತುಂಬಿದರು.
ಸುಗ್ರೀವಾಜ್ಞೆಗೆ ಕಾನೂನು ಸಚಿವರದ್ದೇ ವಿರೋಧ ರಾಜ್ಯ ಸರ್ಕಾರ ದಲಿತ ನೌಕರರ ಹಿತ ಕಾಯಲು ಬಡ್ತಿಯಲ್ಲಿ ಮೀಸಲಾತಿ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕಾನೂನು ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಡೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಲಿದೆ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರೆ, ನ್ಯಾಯಾಂಗ ನಿಂದನೆಯಾಗುತ್ತದೆ. ಆದರೂ, ದಲಿತ ನೌಕರರ ಹಿತ ಕಾಯಲು ಮುಂದಾಗಿರುವುದರಿಂದ
ಸರ್ಕಾರದ ತೀರ್ಮಾನಕ್ಕೆ ತಲೆಬಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಡ್ತಿ ನಿರ್ಧಾರ ಇಲಾಖೆಯ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು. ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಪಾಲಿಸದೆ ಸುಗ್ರೀವಾಜ್ಞೆ ಹೊರಡಿಸಿರುವುದು ಸರಿಯಲ್ಲ.
ಡಾ.ಬಿ.ವಿ. ಆಚಾರ್ಯ, ಮಾಜಿ ಅಡ್ವೋಕೇಟ್ ಜನರಲ್
ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸಚಿವ ಸಂಪುಟದ ನಿರ್ಧಾರದ ವಿವರ ಮತ್ತು ಅದರ ಪ್ರತಿ ಕೈಗೆ ಸಿಕ್ಕ ಮೇಲೆ ಸರ್ಕಾರ ಏನು ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದ ಮೇಲೆ ಮುಂದೇನು ಅನ್ನುವ ಬಗ್ಗೆ ನಿರ್ಧರಿಸುತ್ತೇನೆ.
ಬಿ.ಕೆ. ಪವಿತ್ರ, ದೂರುದಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.